ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾಗತೀಕರಣ ಬಿಡುಗಡೆಯ ಕಿರುಬಾಗಿಲು’

Last Updated 28 ಅಕ್ಟೋಬರ್ 2018, 18:43 IST
ಅಕ್ಷರ ಗಾತ್ರ

ಮೈಸೂರು: ‘ದಲಿತರ ಪಾಲಿಗೆ ಜಾಗತೀಕರಣ ಬಿಡುಗಡೆಯ ಒಂದು ಕಿರುಬಾಗಿಲು. ವಸಾಹತುಶಾಹಿಯ ಮೂಲಕವೇ ಬಿ.ಆರ್‌.ಅಂಬೇಡ್ಕರ್‌ ಅವರು ದಲಿತರ ಬಿಡುಗಡೆಯ ಪಿತಾಮಹರಾದದ್ದು’ ಎಂದು ಸಾಹಿತಿ ಮೊಗಳ್ಳಿ ಗಣೇಶ್‌ ತಿಳಿಸಿದ್ದಾರೆ.

‘ಸಂಸ್ಕೃತಿ ಹೆಸರಿನ ಹಿಂದೂ ಕನ್ನಡಿಗಳನ್ನು ನಾವು ಜಾತಿ ವಿನಾಶದಷ್ಟೇ ಸಲೀಸಾಗಿ ನಾಶಪಡಿಸಬೇಕು. ನಮ್ಮ ಪೂರ್ವಿಕರ ತಲೆಮೇಲೆ ಹೊರಿಸಿದ ಸಂಸ್ಕೃತಿಯ ಸನಾತನ ಕಳಸಗಳನ್ನು ನಾವು ನಾಶಪಡಿಸಬೇಕು. ಯಾವುದು ಎಲ್ಲ ದಮನಿತರಿಗೆ ಬಿಡುಗಡೆಯ ದಾರಿಯನ್ನು, ಅಭಿವ್ಯಕ್ತಿಯನ್ನು ತೋರುತ್ತದೊ; ಅದೇ ನಮ್ಮ ನವ ಮೌಖಿಕ ಜಾನಪದ. ಅದೇ ದಲಿತ ಬಂಡಾಯ ಸಾಹಿತ್ಯ’ ಎಂದಿದ್ದಾರೆ.

‘ಅಭಿವೃದ್ಧಿಯ ರಾಕ್ಷಸ ಅಂಬಾನಿಯೂ ಜಾಗತೀಕರಣದ ಫಲ. ಹಾಗೆಯೇ, ಹಳ್ಳಿಯ ರೈತರ ಆತ್ಮಹತ್ಯೆಯೂ ಜಾಗತೀಕರಣದ ಫಲ. ಎಲ್ಲ ದಮನಿತ ಜಾತಿಗಳು, ಹಳ್ಳಿಗಳು ಬಿಡುಗಡೆಗೆ ನಾಗರಿಕತೆಯ ಹಾದಿಯಲ್ಲಿ ಪಲ್ಲಟಗೊಳ್ಳುವಾಗ ಜಾಗತೀಕರಣವನ್ನು ವಾದಕ್ಕಾಗಿ ವಿರೋಧಿಸುವ ಬದಲು ಅದನ್ನು ಶೋಷಿತರ ವಿಮೋಚನೆಯ ನೆಲೆಯಲ್ಲೂ ಚಿಂತಿಸಬೇಕಿದೆ. ಜಾಗತೀಕರಣ ಮಾನವ ವಿಕಾಸದ ಪ್ರಕ್ರಿಯೆ. ಇದನ್ನು ತಾಳ್ಮೆಯಲ್ಲಿ ಅವಲೋಕಿಸಬೇಕು. ಅಖಂಡ ಮಾನವತ್ವದ ಕುವೆಂಪು ಸಂದೇಶವೇ ನಿಜವಾದ ಜಾಗತೀಕರಣ’ ಎಂದು ಹೇಳಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಈಚೆಗೆ ನಡೆದ ‘ಜಾಗತೀಕರಣ ಮತ್ತು ಜಾನಪದ: ಸಾಂಸ್ಕೃತಿಕ ಪಲ್ಲಟಗಳು‌’ ಉಪನ್ಯಾಸ ಕಾರ್ಯಕ್ರಮದಲ್ಲಿ ಈ ವಿಚಾರದ ಬಗ್ಗೆ ಮಾತನಾಡಿರುವುದಾಗಿ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT