ಶುಕ್ರವಾರ, ಮಾರ್ಚ್ 31, 2023
25 °C
ಅಧಿಕ ಮಾಸ: ಒಂದು ತಿಂಗಳು ಮೊದಲೇ ಜೋಡಣೆಗೆ ನಿರ್ಧಾರ

ಮೈಸೂರು: ಅರಮನೆಯಲ್ಲಿ ಸಿಂಹಾಸನ ಜೋಡಣೆ ಸೆ.18 ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರತ್ನಖಚಿತ ಸಿಂಹಾಸನ (ಸಂಗ್ರಹ ಚಿತ್ರ)

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಅಂಬಾವಿಲಾಸ ಅರಮನೆಯಲ್ಲಿ ರತ್ನಖಚಿತ ಸಿಂಹಾಸನದ ಜೋಡಣೆ ಕಾರ್ಯ ಸೆ.18 ರಂದು ನಡೆಯಲಿದೆ. ಇದರೊಂದಿಗೆ ನವರಾತ್ರಿ ಉತ್ಸವದ ಸಿದ್ಧತೆಗೆ ಚಾಲನೆ ಲಭಿಸಲಿದೆ.

ಪ್ರತಿವರ್ಷ ದಸರಾ ಆರಂಭಕ್ಕೆ ಕೆಲವೇ ದಿನಗಳಿರುವಾಗ ಸಿಂಹಾಸನದ ಜೋಡಣೆ ನಡೆಯುತ್ತದೆ. ಆದರೆ ಈ ಬಾರಿ ಅಧಿಕ ಮಾಸದ ಕಾರಣ ಒಂದು ತಿಂಗಳು ಮುಂಚಿತವಾಗಿಯೇ ಜೋಡಣೆ ನಡೆಯಲಿದೆ.

ಅರಮನೆ ಪಂಚಾಂಗದಂತೆ ಶುಕ್ರವಾರ ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಸಿಂಹಾಸನ ಜೋಡಣೆ ಅಂಗವಾಗಿ ಚಾಮುಂಡೇಶ್ವರಿ ಪೂಜೆ, ಗಣಪತಿ ಹೋಮ ಇರಲಿದೆ. ಬೆಳಿಗ್ಗೆ 10 ರಿಂದ 10.15ರ ಅವಧಿಯ ತುಲಾ ಲಗ್ನದಲ್ಲಿ ಜೋಡಣೆ ಕಾರ್ಯ ಶುರುವಾಗಲಿದೆ ಎಂದು ಅರಮನೆ ಕಾರ್ಯದರ್ಶಿ ಲಕ್ಷ್ಮಿನಾರಾಯಣ ತಿಳಿಸಿದರು.

ಈ ಬಾರಿ ದಸರಾ ಉತ್ಸವ ಅ.17 ರಂದು ಆರಂಭವಾಗಿ, ಅ.26 ರಂದು ಕೊನೆಗೊಳ್ಳಲಿದೆ. ಇದೇ ಅವಧಿಯಲ್ಲಿ ಅರಮನೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರಿಂದ ಖಾಸಗಿ ದರ್ಬಾರ್‌ ನಡೆಯಲಿದೆ.

ಅರಮನೆಯ ಭದ್ರತಾ ಕೊಠಡಿಯಲ್ಲಿದ್ದ ಸಿಂಹಾಸನದ ಬಿಡಿಭಾಗಗಳನ್ನು ದರ್ಬಾರ್‌ ಹಾಲ್‌ಗೆ ತಂದು ಜೋಡಿಸಲಾಗುತ್ತದೆ. ಪ್ರತಿವರ್ಷದಂತೆ ಅರಮನೆಯ ಸಿಬ್ಬಂದಿ ಹಾಗೂ ಗೆಜ್ಜಹಳ್ಳಿ ಗ್ರಾಮದ ಕುಶಲಕರ್ಮಿಗಳು ಸಿಂಹಾಸನ ಜೋಡಣೆ ನಡೆಸುವರು ಎಂದು ಮೂಲಗಳು ತಿಳಿಸಿವೆ.

ಪ್ರವೇಶ ನಿರ್ಬಂಧ: ರಾಜಮನೆತನದವರು ಅರಮನೆಯಲ್ಲಿ ಸೆ.18 ರಂದು ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಿದ್ದು, ಅಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ಪ್ರವಾಸಿಗರಿಗೆ ಅರಮನೆಯ ಒಳ ಆವರಣ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಅರಮನೆ ಮಂಡಳಿ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು