ಕೆಎಸ್‌ಒಯು: ಆನ್‌ಲೈನ್‌ ಅಡ್ಮಿಷನ್‌ಗೆ ಭರಪೂರ ಸ್ಪಂದನೆ

ಶನಿವಾರ, ಮೇ 25, 2019
26 °C
ಪ್ರವೇಶಾತಿ ಶುರುವಾಗಿ 5 ದಿನಗಳಲ್ಲಿ 10 ಸಾವಿರ ಮಂದಿ ವೆಬ್‌ಸೈಟ್‌ಗೆ ಭೇಟಿ

ಕೆಎಸ್‌ಒಯು: ಆನ್‌ಲೈನ್‌ ಅಡ್ಮಿಷನ್‌ಗೆ ಭರಪೂರ ಸ್ಪಂದನೆ

Published:
Updated:
Prajavani

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) 2019–20ನೇ ಸಾಲಿಗೆ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಆರಂಭಿಸಿದ್ದು, ಪ್ರವೇಶ ಪ್ರಕ್ರಿಯೆ ಶುರುವಾದ ಐದೇ ದಿನಗಳಲ್ಲಿ 10 ಸಾವಿರ ಮಂದಿ ಆಸಕ್ತಿ ತೋರಿಸಿದ್ದಾರೆ.

ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮಾನ್ಯತೆ ಸಿಕ್ಕ ಬಳಿಕ 2018–19ನೇ ಸಾಲಿಗೆ ಕೆಎಸ್‌ ಒಯು ಮೊದಲ ಬಾರಿಗೆ ಅರ್ಜಿಗಳನ್ನು ಆಹ್ವಾನಿಸಿದ್ದಾಗ 12 ಸಾವಿರ ಅರ್ಜಿಗಳು ಸ್ವೀಕೃತವಾಗಿದ್ದವು. ಇದಕ್ಕೂ ಹಿಂದಿನ ಸಾಲಿನ ಕೆಎಸ್‌ಒಯು ಅಂಕಿ–ಅಂಶಗಳಿಗೆ ಹೋಲಿಸಿದರೆ ಇದು ಕಡಿಮೆಯಾಗಿತ್ತು. ಇದನ್ನು ಗಂಭೀರ ವಾಗಿ ಪರಿಗಣಿಸಿದ್ದ ಕೆಎಸ್‌ಒಯು, 2019–20ನೇ ಸಾಲಿಗೆ ಆನ್‌ಲೈನ್‌ ನೋಂದಣಿ ಪ್ರಕ್ರಿಯೆಗೆ ನಿರ್ಧರಿಸಿತ್ತು. ಇದು ಉತ್ತಮ ಫಲಿತಾಂಶವನ್ನು ನೀಡಿದೆ.

ಕಳೆದ ಸಾಲಿನಲ್ಲಿ ಕೆಎಸ್‌ಒಯು ತನ್ನ ವೆಬ್‌ಸೈಟ್‌ ಮೂಲಕ ಅರ್ಜಿಗಳನ್ನು ಡೌನ್‌ಲೋಡ್ ಮಾಡಲಷ್ಟೇ ಅವಕಾಶ ಕಲ್ಪಿಸಿತ್ತು. ಅರ್ಜಿಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಕೈಯಲ್ಲಿ ಅರ್ಜಿಗಳನ್ನು ತುಂಬಬೇಕಿತ್ತು. ಈ ಸಾಲಿನಲ್ಲಿ ಈ ಯಾವ ಗೋಜಲೂ ಇಲ್ಲ. ಕೆಎಸ್‌ಒಯುನ ವೆಬ್‌ಸೈಟ್ www.ksoumysore.karnataka.gov.in ನಲ್ಲಿ ಈಗ ಸಂಪೂರ್ಣ ಆನ್‌ಲೈನ್‌ ಅವಕಾಶವಿದೆ. ವೆಬ್‌ಸೈಟ್ ತೆರೆದುಕೊಂಡು ಮೊದಲು ಖಾತೆಯೊಂದನ್ನು ತೆರೆದುಕೊಂಡು, ಶೈಕ್ಷಣಿಕ ಅರ್ಹತೆ, ವೈಯಕ್ತಿಕ ಮಾಹಿತಿಯನ್ನು ತುಂಬಲು ಅವಕಾಶವಿದೆ. ಅಭ್ಯರ್ಥಿಗಳಿಗೆ ಅತಿ ಸುಲಭವಾಗಿ ಅರ್ಜಿ ತುಂಬಲು ಇದರಿಂದ ಸಹಾಯವಾಗಿದೆ. ನೋಂದಣಿಗಾಗಿ ಇರುವ ಶುಲ್ಕವನ್ನು ಪಾವತಿಸಿದ ಬಳಿಕ ಅರ್ಜಿಯನ್ನು ಮುದ್ರಿಸಲು ಅವಕಾಶ ನೀಡಲಾಗಿದೆ.

ಸರಳತೆಯೇ ಕಾರಣ: ಈಗ ಎಲ್ಲ ಮಾಹಿತಿಯೂ ಅಂಗೈಯಲ್ಲೇ ಇರಬೇಕು. ಇದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ವರ್ಷ ಕೆಎಸ್ಒಯು ವಬ್‌ಸೈಟಿಗೆ ಹಲವು ಮಾರ್ಪಾಟುಗಳನ್ನು ಮಾಡಲಾಗಿದೆ. ‍ಪ್ರವೇಶಾತಿ ಅಧಿಸೂಚನೆ, ಪ್ರಮುಖ ದಿನಾಂಕಗಳು, ವಿವರಣಾ ಪುಸ್ತಕ, ಅರ್ಹತೆ ಮತ್ತು ಶುಲ್ಕದ ವಿವರ, ಪ್ರಾದೇಶಿಕ ಕೇಂದ್ರಗಳ ವಿವರ, ವಿಶೇಷ ಸೂಚನೆಗಳು, ಪ್ರವೇಶಾತಿ ಅರ್ಜಿಗಳಿಗೆ ಪ್ರತ್ಯೇಕ ಅವಕಾಶ ನೀಡಲಾಗಿದೆ.

ಇದಕ್ಕೂ ಮುಖ್ಯವಾಗಿ, ಅರ್ಜಿ ಸಲ್ಲಿಕೆ ಇತ್ಯಾದಿ ಪ್ರಕ್ರಿಯೆಗಳಿಗೆ ಕೈಪಿಡಿ ಕೋಶ ವೆಬ್‌ಸೈಟ್‌ನಲ್ಲಿ ಅಳವಡಿಸಿರುವುದು ಫಲ ನೀಡಿದೆ. ‘ಅರ್ಜಿಯನ್ನು ಡೌನ್‌ಲೋಡ್‌ ಮಾಡುವುದು, ಅರ್ಜಿ ತುಂಬುವ ವಿಧಾನಗಳನ್ನು ಸಚಿತ್ರವಾಗಿ ನೀಡಲಾಗಿದೆ. ಇದರಿಂದ ಎಲ್ಲ ಜ್ಞಾನ ಮಟ್ಟದ ವಿದ್ಯಾರ್ಥಿಗಳಿಗೂ ಅರ್ಜಿ ತುಂಬಲು ಸಹಾಯವಾಗುತ್ತದೆ. ವಿದ್ಯಾರ್ಥಿಪರವಾದ ನಿಲುವುಗಳು ಇರಬೇಕು ಎಂಬ ಉದ್ದೇಶದಿಂದಲೇ ಈ ಮಾರ್ಪಾಟುಗಳನ್ನು ಮಾಡಲಾಗಿದೆ’ ಎಂದು ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ‍‘ಪ್ರಜಾವಾಣಿ’ಗೆ ತಿಳಿಸಿದರು.

‘ಕನ್ನಡ ಅವತರಣಿಕೆ ಕೆಎಸ್‌ಒಯು ವೆಬ್‌ಸೈಟಿಗೆ 7,000, ಇಂಗ್ಲಿಷ್‌ ವೆಬ್‌ಸೈಟಿಗೆ 3,000 ಮಂದಿ ಭೇಟಿ ನೀಡಿದ್ದಾರೆ. ಸಾಕಷ್ಟು ವಿದ್ಯಾರ್ಥಿಗಳು ಈಗಾಗಲೇ ಖಾತೆ ತೆರೆದಿದ್ದಾರೆ. ಮೊದಲ ಐದು ದಿನಗಳಲ್ಲೇ ಉತ್ತಮ ಸ್ಪಂದನೆ ಸಿಕ್ಕಿದೆ. ಆ. 31ರವರೆಗೂ ಅರ್ಜಿ ಸಲ್ಲಿಸಲು ಅವಕಾಶ ಇರುವ ಕಾರಣ, ಅಧಿಕ ಸಂಖ್ಯೆಯ ದಾಖಲಾತಿ ಆಗುವುದು ಖಚಿತ’ ಎಂದು ಮಾಹಿತಿ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !