ನಾಟಕವಾಡಿಸುವ ಕಲಾಕಾರ ಗೋಪಿನಾಥ್, ಶತಕ ದಾಟಿದ ‘ಸತ್ಯಹರಿಶ್ಚಂದ್ರ’ ನಾಟಕ ಪ್ರದರ್ಶನ

ಶುಕ್ರವಾರ, ಏಪ್ರಿಲ್ 26, 2019
35 °C

ನಾಟಕವಾಡಿಸುವ ಕಲಾಕಾರ ಗೋಪಿನಾಥ್, ಶತಕ ದಾಟಿದ ‘ಸತ್ಯಹರಿಶ್ಚಂದ್ರ’ ನಾಟಕ ಪ್ರದರ್ಶನ

Published:
Updated:
Prajavani

ಸರಗೂರು: ಪಟ್ಟಣದ 66 ವರ್ಷದ ಎಸ್.ವಿ.ಗೋಪಿನಾಥ್ ಅವರು ನಾಟಕದ ನಿರ್ದೇಶಕರಾಗಿ, ಕಲಾವಿದರಾಗಿ, ರಂಗಗೀತೆಗಳ ಗಾಯಕರಾಗಿ ಇಂದಿಗೂ ಸೇವೆ ಸಲ್ಲಿಸುತ್ತಿದ್ದಾರೆ.

ಇವರ ‘ಸತ್ಯ ಹರಿಶ್ಚಂದ್ರ’ ನಾಟಕ 100ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಜತೆಗೆ, ಎಚ್ಚೆಮ್ಮನಾಯಕ, ಕುರುಕ್ಷೇತ್ರ, ಶನಿಪ್ರಭಾವ, ದಾನಶೂರಕರ್ಣ, ಮುದುಕನಮದುವೆ, ಚನ್ನಪ್ಪಚನ್ನೇಗೌಡ, ಸೊಸೆ ತಂದ ಸೌಭಾಗ್ಯ ಹೀಗೆ ಹಲವು ಹತ್ತು ನಾಟಕಗಳನ್ನು ನಿರ್ದೇಶಿಸುವ ಮೂಲಕ ತಾಲ್ಲೂಕಿನ ರಂಗ ಕಲಾವಿದರ ಪೈಕಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ.

ತಮ್ಮ 22 ವರ್ಷಕ್ಕೆ ನಾಟಕದ ಗೀಳು ಹತ್ತಿಸಿಕೊಂಡ ಇವರು ಈವರೆಗೆ ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ಸೇರಿದಂತೆ ಎಲ್ಲ ಬಗೆಯ ನಾಟಕಗಳನ್ನೂ ನಿರ್ದೇಶಿಸುವ ಮೂಲಕ ರಂಗಭೂಮಿ ಕ್ಷೇತ್ರದಲ್ಲಿ ತಮ್ಮದೇ ಸೇವೆ ಸಲ್ಲಿಸುತ್ತಿದ್ದಾರೆ.

ಮೈಸೂರಿನ ಖ್ಯಾತ ಕಲಾವಿದ ಬಸವರಾಜು ಅವರ ಕನ್ನಡಾಂಬೆ ಕಲಾಥಿಯೇಟರ್‌ನಲ್ಲಿ ಹಲವು ನಾಟಕದಲ್ಲಿ ಅಭಿನಯಿಸಿದ ಹೆಗ್ಗಳಿಕೆ ಇವರಿಗಿದೆ. 1992ರಲ್ಲಿ ‘ಮಿತ್ರವೃಂದ ತಂಡ’ವನ್ನು ಕಟ್ಟಿಕೊಂಡು, ಇದರಲ್ಲಿ ಕೆಲವು ಮಂದಿ ಶಿಕ್ಷಕರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡು ನಾಟಕ ಪ್ರದರ್ಶನ ನೀಡಿದ್ದಾರೆ.

ಚಲನಚಿತ್ರ ನಟರಾದ ಎಂ.ಪಿ.ಶಂಕರ್, ದಿರೇಂದ್ರಗೋಪಾಲ್, ಉದಯಕುಮಾರ್, ಉಪಾಸನೆ ಸೀತಾರಾಮ್ ಇನ್ನಿತರ ಚಲನಚಿತ್ರ ನಟರೊಂದಿಗೆ ನಾಟಕದಲ್ಲಿ ಅಭಿನಯಿಸಿದ ಶ್ರೇಯಸ್ಸು ಇವರಿಗಿದೆ.

‘ಮಿತ್ರವೃಂದ ತಂಡ’ದಿಂದ ಕೆಲವು ಪ್ರಿಮಿಯರ್ ಪ್ರದರ್ಶನ ನಡೆಸಿ ಪಟ್ಟಣದಲ್ಲಿ ಶಿಕ್ಷಕರ ಭವನ ನಿರ್ಮಾಣದ ಸಹಾಯಾರ್ಥವಾಗಿ ಹಲವು ನಾಟಕಗಳನ್ನು ಪ್ರದರ್ಶಿಸಿ, ದೇಣಿಗೆ ನೀಡಿದ್ದಾರೆ. ಇವರ ತಂಡದಲ್ಲಿ ಶಿಕ್ಷಕ ರಾಮಲಿಂಗಪ್ಪ, ಚಿಕ್ಕನಾಯಕ, ಅರ್ಚಕ ಜಿ.ಕೆ.ಗೋಪಿನಾಥ್ ಸೇರಿದಂತೆ ಇನ್ನೂ 8 ಮಂದಿ ಇದ್ದಾರೆ.

‘ಜೀರ್ಜಂಬೆ’ ಎಂಬ ಮಕ್ಕಳ ಚಲನಚಿತ್ರ ಹಾಗೂ ರಾಮಕೃಷ್ಣ ಪರಮಹಂಸ ದೃಷ್ಟಾಂತರ ಕತೆಗಳ ಆಧಾರಿತ ಕಥೆಗಳ ಟಿವಿ ಕಿರುಚಿತ್ರದಲ್ಲಿ ಅಭಿನಯಿಸಿದ ಹೆಗ್ಗಳಿಕೆ ಇವರಿಗಿದೆ. ಶ್ರೀರಾಮ ಮಂದಿರದಲ್ಲಿ ಭಜನಾ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ್ದಾರೆ.

ಮೈಸೂರಿನ ಕಲಾಮಂದಿರ, ದಸರಾ ವಸ್ತುಪ್ರದರ್ಶನ, ಪುರಭವನ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಲವು ನಾಟಕಗಳನ್ನು ಪ್ರದರ್ಶಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !