ಬುಧವಾರ, ಜೂನ್ 29, 2022
27 °C

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವವರು ನಾಥೂರಾಂ ಗೋಡ್ಸೆ ಸಂತಾನ: ದೇವನೂರ ಮಹಾದೇವ

‍ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮಹಾತ್ಮ ಗಾಂಧೀಜಿ ಅವರನ್ನು ಕೊಂದ ನಾಥೂರಾಂ ಗೋಡ್ಸೆ ಸಂತಾನವೇ ಕೇಂದ್ರದಲ್ಲಿ ಆಳ್ವಿಕೆ ನಡೆಸುತ್ತಿದ್ದು, ಪ್ರಜಾಪ್ರಭುತ್ವ, ಸಂವಿಧಾನ, ಮಾಧ್ಯಮಗಳು, ಕಾರ್ಯಾಂಗಗಳನ್ನು ಹತ್ಯೆ ಮಾಡಿದೆ. ಈಗ ಚುನಾವಣಾ ಆಯೋಗವನ್ನೂ ಹತ್ಯೆ ಮಾಡುತ್ತಿದೆ ಎಂದು ಸಾಹಿತಿ ದೇವನೂರ ಮಹಾದೇವ ಟೀಕಿಸಿದರು.

ಇಲ್ಲಿನ ಮಹಾತ್ಮ ಗಾಂಧಿ ಚೌಕದಲ್ಲಿ ಸಂವಿಧಾನ ರಕ್ಷಣಾ ಸಮಿತಿ ವತಿಯಿಂದ ಶನಿವಾರ ನಡೆದ ಉಪವಾಸ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.

ಬಿಜೆಪಿ ರಾಜಕಾರಣ ಎಂದರೆ ಅದು ಭೂಗತ ರಾಜಕಾರಣ. ರೈತರನ್ನು ದೇಶದ್ರೋಹಿಗಳು ಎಂದು ಕರೆಯುವ ಮೂಲಕ ಘೋರ ಪಾತಕ ಮಾಡಿದೆ. ಇವರಿಗೆ ಮತ ಹಾಕಿದವರು ಇಂದು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ‘ಅನ್ನ’ವೇ ಉಪವಾಸ ಮಾಡುವಂತಹ ಸ್ಥಿತಿಯನ್ನು ಸೃಷ್ಟಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಒಮ್ಮೆ ಅಮಿತ್ ಷಾ ಅವರು ತಾವು ನೀಡಿದ ಬೇಡಿಕೆಗಳನ್ನು ಕುರಿತು ‘ಪೊಲಿಟಿಕಲ್ ಜುಮ್ಲಾ’ ಎಂದು ಹೇಳಿದರು. ಜುಮ್ಲಾ ಎಂದರೆ ಖಾಲಿ ಭರವಸೆ, ಮುಖ ಉಳಿಸಿಕೊಳ್ಳಲು ಆಡುವ ಮಾತು, ವಚನೆಬದ್ಧತೆ ಇಲ್ಲದ ಮಾತು, ಮುಗ್ದ ಜನರನ್ನು ಮೂರ್ಖರನ್ನಾಗಿಸುವ ಬಾಯಿ ಮಾತು ಎಂಬ ಅರ್ಥ ಇದೆ. ಬಿಜೆಪಿಯದು ಇಂತಹ ‘ಜುಮ್ಲಾ’ ರಾಜಕಾರಣ ಎಂದು ಹರಿಹಾಯ್ದರು.

ಕೃಷಿ ಕಾಯ್ದೆಗಳನ್ನು ಒಂದೂವರೆ ವರ್ಷಗಳ ಕಾಲ ಅಮಾನತಿನಲ್ಲಿಡಲಾಗುವುದು ಎಂಬುದರ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ. ಸಂಘ, ಪರಿವಾರದ ಸದಸ್ಯರನ್ನು ಹಳ್ಳಿಗಾಡಿಗೆ ಛೂ ಬಿಟ್ಟು, ರಾಮಮಂದಿರ ಕಟ್ಟುವುದಕ್ಕೆ ಕಾಣಿಕೆ ಪಡೆಯುವ ಮೂಲಕ ಹಳ್ಳಿಗಳನ್ನು ಛಿದ್ರಗೊಳಿಸಿ, ಕೃಷಿ ಕಾಯ್ದೆಗೆ ಒತ್ತಾಯವನ್ನು ಹಳ್ಳಿಯಿಂದಲೇ ತರುವಂತಹ ಹುನ್ನಾರ ನಡೆಸಲಾಗುತ್ತಿದೆ ಎಂದರು.

ಮಠದ ಸ್ವಾಮಿಗಳೂ ಜೈಶ್ರೀರಾಂ ಎನ್ನುತ್ತಿದ್ದಾರೆ. ಕನಿಷ್ಠ ‘ಜೈಸೀತಾರಾಮ್’ ಎನ್ನುವಂತಹ ಮನಸ್ಥಿತಿಯೂ ಇಲ್ಲವಾಗಿದೆ. ರಾಮಮಂದಿರ ಕಟ್ಟಲು ಕಾಣಿಕೆ ಕೇಳಿದರೆ, ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದರೆ ಮಾತ್ರವೇ ಕಾಣಿಕೆ ಎಂದು ಹೇಳಬೇಕು ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು