ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರಾಮ ಸಡಕ್ ಯೋಜನೆ: ಗುಣಮಟ್ಟದ ಕಾಮಗಾರಿ’

ತಿರುಮಲಾಪುರ ಗ್ರಾಮದಲ್ಲಿ ಸುಮಾರು ₹3.50 ಕೋಟಿ ವೆಚ್ಚದ ಕಾಮಗಾರಿಗೆ ಸಂಸದ ಚಾಲನೆ
Last Updated 26 ನವೆಂಬರ್ 2020, 6:05 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ದೇಶದಾದ್ಯಂತ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯನ್ನು ಜನರು ವಿಶ್ವಾಸದಿಂದ ನೋಡುತ್ತಿದ್ದಾರೆ. ಇದಕ್ಕೆ ರಸ್ತೆಯ ಗುಣಮಟ್ಟದ ನಿರ್ವಹಣೆಯೇ ಕಾರಣ ಎಂದು ಮೈಸೂರು ಮತ್ತು ಕೊಡಗು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ತಾಲ್ಲೂಕಿನ ತಿರುಮಲಾಪುರ ಗ್ರಾಮದಲ್ಲಿ ಸುಮಾರು ₹3.50 ಕೋಟಿ ವೆಚ್ಚದಲ್ಲಿ ಬೆಂಗಳೂರು– ಬಂಟ್ವಾಳ ಮುಖ್ಯರಸ್ತೆಯಿಂದ ತಿರುಮಲಾಪುರ ಗ್ರಾಮದ ಮಾರ್ಗವಾಗಿ ಪಿ.ಬಸವನಹಳ್ಳಿ ಗ್ರಾಮ ಸಂಪರ್ಕ ಕಲ್ಪಿಸುವ ಗ್ರಾಮಸಡಕ್ ರಸ್ತೆ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಲೋಕೋಪಯೋಗಿ ಇಲಾಖೆ ರಸ್ತೆ ಅಭಿವೃದ್ಧಿ ಮಾಡಿದರೆ ಕಾಮಗಾರಿ ಮುಗಿದ ಮೂರು ವರ್ಷದಲ್ಲಿ ರಸ್ತೆಯ ಆಯಸ್ಸು ಮುಗಿಯುವಂತೆ ಕಾಮಗಾರಿ ಮಾಡಲಾಗುತ್ತದೆ. ಆದರೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಕಾಮಗಾರಿ ಮುಗಿದ 5 ವರ್ಷಗಳ ವರೆಗೂ ರಸ್ತೆ ನಿರ್ವಹಣೆ ನಡೆಸಲಾಗುತ್ತಿದೆ. ಇದರಿಂದ ರಸ್ತೆ ಹೆಚ್ಚು ಅವಧಿಗೆ ಬಾಳ್ವಿಕೆ ಬರುತ್ತದೆ’ ಎಂದರು.

ಗುಣಮಟ್ಟದ ಕಾಮಗಾರಿ ಮಾಡಬೇಕು. ಗ್ರಾಮಸ್ಥರಿಂದ ಯಾವುದೇ ದೂರುಗಳು ಬರಬಾರದು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.

‘ನಾನು ಅಧಿಕಾರಿಗೆ ಮತ್ತು ಗುತ್ತಿಗೆದಾರರಿಗೆ ಕರೆ ಮಾಡಿದರೆ ಕೆಲಸ ಶೀಘ್ರಗತಿಯಲ್ಲಿ ಮಾಡಲಿ ಎಂದು ಕರೆ ಮಾಡುತ್ತೇನೆಯೇ ವಿನಃ ಕಮಿಷನ್ ನೀಡಲಿ ಎಂದು ಕರೆ ಮಾಡುವುದಿಲ್ಲ. ರಸ್ತೆಗೆ ಮೀಸಲಿಟ್ಟಿರುವ ಹಣ ಸಂಪೂರ್ಣ ಕಾಮಗಾರಿಗೆ ಬಳಕೆಯಾಗಬೇಕು. ಹೆಚ್ಚು ಸಾರ್ವಜನಿಕರು, ವಾಹನ ಸಂಚರಿಸುವ ರಸ್ತೆಗೆ ಆದ್ಯತೆ ನೀಡಬೇಕು’ ಎಂದರು.

ಶಾಸಕ ಕೆ. ಮಹದೇವ್ ಮಾತನಾಡಿ, ತಾಲ್ಲೂಕಿನ ಇತಿಹಾಸದಲ್ಲೇ ಕೇಂದ್ರ ಸರ್ಕಾರದ ವತಿಯಿಂದ ₹ 20 ಕೋಟಿ ಹಣ ರಸ್ತೆ ಅಭಿವೃದ್ಧಿಗೆ ಮಂಜೂರಾಗಿದೆ. ಇದಕ್ಕೆ ಸಂಸದರ ಪರಿಶ್ರಮ ಕಾರಣ. ನಾವಿಬ್ಬರೂ ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.

₹ 5.16 ಕೋಟಿ ವೆಚ್ಚದಲ್ಲಿ ಬಿ.ಎಂ. ರಸ್ತೆ ಮೂಲಕ ಆಲನಹಳ್ಳಿ ಹಕ್ಕಿ ಮಾಳ ಮಾರ್ಗ, ನವಿಲೂರು, ಆಯುರ್ ಬೀಡು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಅಭಿವೃದ್ಧಿ ಕಾಮಗಾರಿ, ₹ 3.46. ಕೋಟಿ ವೆಚ್ಚದ ಹುಣಸೂರು– ವಿರಾಜಪೇಟೆ ಮುಖ್ಯರಸ್ತೆಯಿಂದ ಮಾಲಂಗಿ ಮುನ್ನುಡಿ ಕಾವಲು, ಮಲ್ಲಾಪುರ ಪರಿಶಿಷ್ಟ ಜಾತಿ ಕಾಲೊನಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು

ಮಾಜಿ ಶಾಸಕ ಎಚ್.ಸಿ.ಬಸವರಾಜು, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ.ರಂಗಸ್ವಾಮಿ, ಸದಸ್ಯ ಎಸ್.ರಾಮು ಐಲಾಪುರ, ಮುಖಂಡರಾದ ಆರ್.ಟಿ.ಸತೀಶ್, ಎಂ.ಎಂ.ರಾಜೇಗೌಡ, ಶಿವರಾಂ, ಚನ್ನಪ್ಪ, ಟಿ.ರಮೇಶ್, ಸುದರ್ಶನ್, ಬೆಮ್ಮತ್ತಿಚಂದ್ರು, ವೀರಭದ್ರ, ಎಇಇಗಳಾದ ಪ್ರಭು, ನಾಗರಾಜ್, ಶಿವಕುಮಾರ್, ಬಿಇಒ ತಿಮ್ಮೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT