ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಾರಿ ಅದ್ದೂರಿ ದಸರಾ, ವ್ಯಾಪಕ ಪ್ರಚಾರ: ಸಚಿವ ಎಸ್‌.ಟಿ.ಸೋಮಶೇಖರ್‌

Last Updated 6 ಆಗಸ್ಟ್ 2022, 13:44 IST
ಅಕ್ಷರ ಗಾತ್ರ

ಮೈಸೂರು: ‘ದಸರಾ ಉತ್ಸವವನ್ನು ದೇಶ–ವಿದೇಶದ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅದ್ದೂರಿ ಹಾಗೂ ಸಾಂಪ್ರದಾಯಿಕವಾಗಿ ನಡೆಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಎರಡು ವರ್ಷ ಸರಳವಾಗಿ ನಡೆದಿದ್ದರಿಂದ, ಈ ಬಾರಿ ವ್ಯಾಪಕ ಪ್ರಚಾರ ನೀಡಲಾಗುವುದು. ದಸರಾ ವಸ್ತುಪ್ರದರ್ಶನವನ್ನು 15 ದಿನಗಳು ಮುಂಚಿತವಾಗಿಯೇ ಆರಂಭಿಸಲಾಗುವುದು. ನಾಡಹಬ್ಬ ಉದ್ಘಾಟನೆಗೆ ಯಾರನ್ನು ಆಯ್ಕೆ ಮಾಡಬೇಕು ಎನ್ನುವುದನ್ನು ಮುಖ್ಯಮಂತ್ರಿ ನಿರ್ಧರಿಸಲಿದ್ದಾರೆ. ನಮ್ಮ ಹಂತದಲ್ಲಿ ಸಲಹೆಗಳು ಬಂದಿಲ್ಲ’ ಎಂದು ಪ್ರತಿಕ್ರಿಯಿಸಿದರು.


‘ಆ.7ರಂದು ಗಜಪಯಣ ನಡೆಯಲಿದೆ. ಇಲ್ಲಿಗೆ ಬರುವ 14 ಆನೆಗಳಲ್ಲಿ ಮೂರನ್ನು ಶ್ರೀರಂಗಪಟ್ಟಣಕ್ಕೆ ಕಳುಹಿಸಲು ತೀರ್ಮಾನಿಸಲಾಗಿದೆ. ಚಾಮರಾಜನಗರ ಹಾಗೂ ಶ್ರೀರಂಗಪಟ್ಟಣ ದಸರಾಕ್ಕೆ ತಲಾ ₹ 1 ಕೋಟಿ ಕೊಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಖರ್ಚು–ವೆಚ್ಚ:

‘ಅರಮನೆ ಆವರಣದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ₹ 5 ಕೋಟಿ ಖರ್ಚಾಗುವ ಅಂದಾಜಿದೆ. ಅದನ್ನು ಅರಮನೆ ಮಂಡಳಿ ಕೊಡಬೇಕು. ಹೊರಗಿನ ಕಾರ್ಯಕ್ರಮಗಳಿಗೆ ₹ 10 ಕೋಟಿ ಬೇಕಾಗಬಹುದು. ಅದನ್ನು ಮುಡಾದಿಂದ ಭರಿಸಲಾಗುತ್ತದೆ. ಇತರ ಖರ್ಚುಗಳಿಗೆ ಸರ್ಕಾರದಿಂದ ಅನುದಾನ ಕೋರಲಾಗುವುದು. ರಸ್ತೆಗಳ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಉತ್ಸವ ಮುಗಿದ ಕೆಲವೇ ದಿನಗಳಲ್ಲಿ ಲೆಕ್ಕ ಖರ್ಚು–ವೆಚ್ಚದ ಲೆಕ್ಕ ಕೊಡಲಾಗುವುದು. ಈ ಬಾರಿ ಗೋಲ್ಡ್‌ ಪಾಸ್‌ ಇರುವುದಿಲ್ಲ' ಎಂದು ಪ್ರತಿಕ್ರಿಯಿಸಿದರು.

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಶಾಸಕ ಎಂ.ಅಶ್ವಿನ್ ಕುಮಾರ್, ವಿಧಾನಪರಿಷತ್‌ ಸದಸ್ಯ ಡಾ.ಡಿ.ತಿಮ್ಮಯ್ಯ, ನಿಗಮ ಮಂಡಳಿಗಳ ಅಧ್ಯಕ್ಷರಾದ ಕೋಟೆ ಎಂ.ಶಿವಣ್ಣ, ಎಸ್.ಮಹದೇವಯ್ಯ, ಎಂ.ಶಿವಕುಮಾರ್, ಮಿರ್ಲೆ ಶ್ರೀನಿವಾಸ್ ಗೌಡ, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಎಸ್ಪಿ ಆರ್.ಚೇತನ್, ನಗರಪಾಲಿಕೆ ಆಯುಕ್ತ ಜಿ.ಲಕ್ಷ್ಮಿಕಾಂತ್‌ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ, ಜಿ.ಪಂ. ಸಿಇಒ ಬಿ.ಆರ್.ಪೂರ್ಣಿಮಾ ಪಾಲ್ಗೊಂಡಿದ್ದರು.

ಬಿಜೆಪಿ ಶಾಸಕರ ಗೈರು: ವಿರೋಧ ಪಕ್ಷಗಳ ಶಾಸಕರು ಪಾಲ್ಗೊಂಡಿದ್ದರು. ಆದರೆ, ಬಿಜೆಪಿ ಶಾಸಕ–ಸಂಸದರ ಗೈರು ಹಾಜರಿ ಎದ್ದು ಕಂಡಿತು.

ವ್ಯಕ್ತವಾದ ಸಲಹೆಗಳು

ಉದ್ಯಾನದಲ್ಲಿ ಕಾರ್ಯಕ್ರಮ ನಡೆಸಿ

ದಸರೆಯಲ್ಲಿ ನಿತ್ಯ ಒಂದು ಉದ್ಯಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಸ್ಪರ್ಧೆಗಳನ್ನು ಆಯೋಜಿಸಬೇಕು. ಇದರಿಂದ ಜನರು ನಗರದ ಹೃದಯ ಭಾಗಕ್ಕೆ ಬರುವುದು ಕಡಿಮೆ ಆಗುತ್ತದೆ. ಅಲ್ಲಲ್ಲಿ ಮೊಬೈಲ್ ಶೌಚಾಲಯ ವ್ಯವಸ್ಥೆ ಮಾಡಬೇಕು.

–ತನ್ವೀರ್ ಸೇಠ್, ಶಾಸಕ

ಸಮಿತಿಯಲ್ಲಿ ಎಲ್ಲರಿಗೂ ಅವಕಾಶವಿರಲಿ

ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಉಪ ಸಮಿತಿಗಳನ್ನು ರಚಿಸಿರಲಿಲ್ಲ. ಈ ಬಾರಿ ರಚಿಸಿ ಎಲ್ಲ ಪಕ್ಷದ ಮುಖಂಡರು–ಕಾರ್ಯರ್ತರಿಗೆ ಅವಕಾಶ ಮಾಡಿಕೊಡಬೇಕು.‌ ಮಳೆಯಿಂದ ಹಾನಿಗೊಂಡ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.

–ಸಾ.ರಾ.ಮಹೇಶ್, ಶಾಸಕ

ಪಾಸ್ ಕೊಡಿ

ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಸದಸ್ಯರಿಗೆ ತಲಾ ಎರಡೆರಡು ಪಾಸ್‌ಗಳನ್ನು ಕೊಡಬೇಕು.

–ಬಿ.ಹರ್ಷವರ್ಧನ, ಶಾಸಕ

13 ಟೂರ್ ಪ್ಯಾಕೇಜ್‌

ದಸರಾ ಮಹೋತ್ಸವದಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಜಿಲ್ಲೆಗಳಿಗೆ ವಿವಿಧ ರೀತಿಯ 13 ಪ್ಯಾಕೇಜ್ ಟೂರ್‌ಗಳನ್ನು ರೂಪಿಸಿದ್ದೇವೆ. ರಸ್ತೆಗಳಲ್ಲಿ ವಿದ್ಯುತ್‌ ದೀಪಾಲಂಕಾರ ಮಾಡುವಾಗ, ಕೆಎಸ್‌ಟಿಡಿಸಿಯ ‌‘ಅಂಬಾರಿ’ ಡಬಲ್‌ ಡೆಕ್ಕರ್‌ ಬಸ್ ಸಂಚಾರಕ್ಕೆ ತೊಂದರೆ ಆಗದಂತೆ ಕ್ರಮ ವಹಿಸಬೇಕು.

–ಕಾ.ಪು.ಸಿದ್ದಲಿಂಗಸ್ವಾಮಿ, ಅಧ್ಯಕ್ಷ, ಕೆಎಸ್‌ಟಿಡಿಸಿ

ರಜನಿಕಾಂತ್, ಇಳಯರಾಜ ಪರಿಗಣಿಸಿ

ದಸರಾ ವೇಳೆ ಎಲ್ಲ ಜಿಲ್ಲೆಗಳಲ್ಲೂ ‘ಜಿಲ್ಲಾ ಉತ್ಸವ’ ಆಯೋಜಿಸಬೇಕು. ಆಹಾರ ಮೇಳದಲ್ಲಿ ಹೊರಗಿನ ಆಹಾರದ ಬದಲಿಗೆ, ನಮ್ಮಲ್ಲಿನ ತಿನಿಸುಗಳು ಸಿಗುವಂತಿರಬೇಕು. ಅರಮನೆ ಇತಿಹಾಸ ಬಿಂಬಿಸುವ ಸ್ತಬ್ಧಚಿತ್ರ ಸಿದ್ಧಪಡಿಸಬೇಕು. ದಸರಾ ಉದ್ಘಾಟನೆಗೆ ರಜನಿಕಾಂತ್ ಮತ್ತು ಇಳಯರಾಜ ಅವರನ್ನು ಪರಿಗಣಿಸಬೇಕು. ಹೊರ ರಾಜ್ಯದ ಸ್ತಬ್ಧಚಿತ್ರಗಳೂ ಪಾಲ್ಗೊಳ್ಳುವಂತೆ ಮಾಡಬೇಕು.

–ಆರ್.ರಘು, ಅಧ್ಯಕ್ಷ, ಮೈಲ್ಯಾಕ್

ವಿಶೇಷ ವಿಮಾನಗಳಿರಲಿ

ದಸರಾ ಸಂದರ್ಭದಲ್ಲಿ ಮೈಸೂರು ವಿಮಾನ ನಿಲ್ದಾಣದಿಂದ ವಿಶೇಷ ವಿಮಾನಗಳ ಹಾರಾಟಕ್ಕೆ ವ್ಯವಸ್ಥೆ ಮಾಡಬೇಕು. ಇದರಿಂದ ಹೊರ ರಾಜ್ಯದ ಪ್ರವಾಸಿಗರಿಗೆ ಅನುಕೂಲವಾಗುತ್ತದೆ.

–ಜಿ.ನಿಜಗುಣರಾಜು, ಅಧ್ಯಕ್ಷ, ಕಾಡಾ

ಹೆಚ್ಚುವರಿ ಅನುದಾನ ಕೊಡಿ

ನಗರದಲ್ಲಿನ ರಸ್ತೆಗಳ ಗುಂಡಿ ಮುಚ್ಚಬೇಕು. ಜಂಬೂಸವಾರಿ ಸಾಗುವ ಮೂರು ವೃತ್ತಗಳ ಸುಧಾರಣೆಗೆ ಕ್ರಮ ವಹಿಸಬೇಕು. ಮಹಾನಗರಪಾಲಿಕೆಗೆ ಹೆಚ್ಚುವರಿ ಅನುದಾನ ಕೊಡಬೇಕು.

–ಸುನಂದಾ ಫಾಲನೇತ್ರ, ಮೇಯರ್‌

ವಿನಾಯಿತಿ ನೀಡಬೇಕು

ಮೈಸೂರು–ಬೆಂಗಳೂರು ನಡುವೆ ವಿಮಾನ ಪ್ರಯಾಣಿಕರಿಗೆ ದಸರಾ ಸಂದರ್ಭದಲ್ಲಿ ಪ್ರಯಾಣದರದಲ್ಲಿ ವಿನಾಯಿತಿ ಕೊಡಬೇಕು

–ಸಿ.ಎನ್.ಮಂಜೇಗೌಡ, ವಿಧಾನಪರಿಷತ್ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT