ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಪಂದನ’ದಲ್ಲಿ ಅಹವಾಲುಗಳ ಮಹಾಪೂರ

ನಂಜನಗೂಡು ರಸ ಬಾಳೆ ಬೆಳೆಗೆ ಪುನಶ್ಚೇತನ ನೀಡಲು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ
Last Updated 27 ನವೆಂಬರ್ 2020, 6:26 IST
ಅಕ್ಷರ ಗಾತ್ರ

ನಂಜನಗೂಡು: ಅಧಿಕಾರಿಗಳು ಸಬೂಬು ಹೇಳದೆ ಭತ್ತ ಖರೀದಿ ಕೇಂದ್ರ ತೆರೆಯಲು ಕಾರ್ಯ ಪ್ರವೃತ್ತರಾಗಬೇಕು. ಹಂಗಾಮು ಆರಂಭಕ್ಕೆ ಮುನ್ನ ಖರೀದಿ ಕೇಂದ್ರ ತೆರೆಯದಿದ್ದರೆ ರೈತರಿಗೆ ಸಮಸ್ಯೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರದ ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ಆಡಳಿತ ಗುರುವಾರ ಆಯೋ ಜಿಸಿದ್ದ ಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.

ಭತ್ತ ಖರೀದಿ ಕೇಂದ್ರ ತೆರೆಯಲು ಸಿಬ್ಬಂದಿ ಕೊರತೆಯಿದೆ ಎಂದ ಅಧಿಕಾರಿಗಳ ವಿವರಣೆಗೆ ಪ್ರತಿಕ್ರಿಯಿಸಿದ ಅವರು, ನೆಪ ಹೇಳದೆ ಭತ್ತ ಬೆಳೆಯುತ್ತಿರುವ ರೈತರನ್ನು ನೋಂದಣಿ ಮಾಡಿಕೊಳ್ಳುವ ಕಾರ್ಯ ಆರಂಭಿಸಿಬೇಕು. ತಹಶೀಲ್ದಾರ್ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಅವರು ಸೂಚನೆ ನೀಡಿದರು.

ಅಡಕನಹಳ್ಳಿ ಕೈಗಾರಿಕಾ ಪ್ರದೇಶದ ರೀಡ್ ಅಂಡ್ ಟೇಲರ್ ಕಾರ್ಖಾನೆಯಲ್ಲಿ 20 ವರ್ಷಗಳಿಂದ ದುಡಿಯುತ್ತಿದ್ದ 300 ಕಾರ್ಮಿಕರನ್ನು ಪರಿಹಾರ ನೀಡದೆ ಕೆಲಸದಿಂದ ವಜಾಗೊಳಿಸಲಾಗಿದೆ. ನಮಗೆ ಕಾರ್ಖಾನೆಯಲ್ಲಿ ಮತ್ತೆ ಕೆಲಸ ಕೊಡಿಸಬೇಕು ಎಂದು ಮಹಿಳಾ ಕಾರ್ಮಿಕರು ಮನವಿ ಸಲ್ಲಿಸಿದರು.

ರೈತ ಸಂಘದ ಮುಖಂಡ ಬೊಕ್ಕಳ್ಳಿ ನಂಜುಂಡಸ್ವಾಮಿ, ಹೆಜ್ಜಿಗೆ ಪ್ರಕಾಶ್ ಮಾತನಾಡಿ, ತಾಲ್ಲೂಕಿನಲ್ಲಿ 3 ಕೆರೆಗಳ ಒತ್ತುವರಿ ತೆರವುಗೊಳಿಸಬೇಕು. ಮರಳು ಅಕ್ರಮ ಸಾಗಣೆ ಬಗ್ಗೆಯೂ ಕಠಿಣ ಕ್ರಮವಹಿಸಬೇಕು ಎಂದು ಮನವಿ ಮಾಡಿದರು.

ಹುಲ್ಲಹಳ್ಳಿ ಗ್ರಾಮದ ಚಾಮುಂಡನಾಯ್ಕ, ಜಮೀನು ಸರ್ವೆ ನಡೆಸುವಂತೆ ಅರ್ಜಿ ಸಲ್ಲಿಸಿ 7 ವರ್ಷಗಳಿಂದ ಕಚೇರಿಗೆ ಅಲೆಯುತ್ತಿದ್ದೇನೆ. ಕೆಲಸವಾಗಿಲ್ಲ, ಲಂಚ ಕೇಳುತ್ತಾರೆ. ಈ ಬಗ್ಗೆ ಕಂದಾಯ ಕಾರ್ಯದರ್ಶಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ವೃದ್ಧಾಪ್ಯ ವೇತನ, ವಿಧವಾ ವೇತನ, ಗಂಗಾ ಕಲ್ಯಾಣ, ಸಂಧ್ಯಾಸುರಕ್ಷಾ, ಪೌತಿ ಖಾತೆ ಹಾಗೂ ಅನುಕಂಪ ಅಧಾರಿತ ಉದ್ಯೋಗ ದೊರಕಿಸಿಕೊಡುವಂತೆ ಸಾರ್ವಜನಿಕರು ಅರ್ಜಿ ಸಲ್ಲಿಸಿದರು.

ಸಭೆಯಲ್ಲಿ 140 ಮಂದಿ ಕುಂದುಕೊರತೆಗಳ ಬಗ್ಗೆ ಅರ್ಜಿ ಸಲ್ಲಿಸಿದ್ದಾರೆ. ಖಾತೆ, ಹದ್ದುಬಸ್ತು, ಸರ್ವೆ ಬಾಕಿ, ವೃದ್ಧಾಪ್ಯ ವೇತನ ಮುಂತಾದ ಬಾಕಿ ಉಳಿದಿರುವ ಪ್ರಕರಣಗಳನ್ನು 15 ದಿನಗಳಲ್ಲಿ ಇತ್ಯರ್ಥಪಡಿಸಲಾಗುವುದು. ವಸತಿ ಯೋಜನೆಗಳ ಮನೆ ನಿರ್ಮಾಣ, ಕಾರ್ಮಿಕರ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿ, ಕ್ರಮವಹಿಸಲು ಕಾಲಾವಕಾಶ ಬೇಕಾಗುತ್ತದೆ. ಅರ್ಜಿ ಸಲ್ಲಿಸಿದವರಿಗೆ ಕೈಗೊಂಡ ಕ್ರಮಗಳ ಬಗ್ಗೆ ಮೊಬೈಲ್‌ಗೆ ಮೆಸೇಜ್‌ ಮೂಲಕ ತಿಳಿಸಲಾಗುವುದು ಎಂದು ತಿಳಿಸಿದರು.

ತಹಶೀಲ್ದಾರ್ ಕೆ.ಎಂ.ಮಹೇಶ್ ಕುಮಾರ್, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ, ಉಪವಿಭಾಗಾಧಿಕಾರಿ ವೆಂಕಟರಾಜು, ನಗರಸಭೆ ಆಯುಕ್ತ ಕರಿಬಸವಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT