ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಬೆಳೆಯುತ್ತಿದೆ ಕಸದ ಗುಡ್ಡ, ಕಡತದಲ್ಲೇ ಯೋಜನೆ

ಸೀವೇಜ್‌ ಫಾರ್ಮ್‌ ಸುತ್ತಮುತ್ತಲಿನ ಬಡಾವಣೆಗಳ ಜನರಿಗೆ ತಪ್ಪದ ನರಕ ಯಾತನೆ: ಮಳೆಗಾಲ–ಚಳಿಗಾಲದಲ್ಲಿ ಸಹಿಸಲಾಗದ ದುರ್ವಾಸನೆ
Last Updated 19 ಏಪ್ರಿಲ್ 2021, 4:33 IST
ಅಕ್ಷರ ಗಾತ್ರ

ಮೈಸೂರು: ರಾಜ– ಮಹಾರಾಜರ ಆಳ್ವಿಕೆಯ ಕಾಲಘಟ್ಟದಿಂದಲೂ ಎರಡ್ಮೂರು ದಶಕದ ಹಿಂದಿನವರೆಗೂ ಅಸಂಖ್ಯಾತ ಜಾನುವಾರುಗಳ ಹೊಟ್ಟೆ ತುಂಬಿಸುತ್ತಿದ್ದ ಹುಲ್ಲುಗಾವಲು; ಅಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ತೆಂಗಿನ ತೋಟವೀಗ ಕಸದ ಗುಡ್ಡಗಳ ತಾಣವಾಗಿ ಮಾರ್ಪಟ್ಟಿದೆ.

ಮಳೆಗಾಲ– ಚಳಿಗಾಲದಲ್ಲಿ ಬೆಂಬಿಡದ ಭೂತದಂತೆ ಕಾಡುವ ಕಸದ ದುರ್ವಾಸನೆಯಿಂದ ನಮ್ಮನ್ನು ಪಾರು ಮಾಡಿ ಎಂಬ ಈ ಭಾಗದಲ್ಲಿನ ಸ್ಥಳೀಯರ ಕೂಗು ಹಲವು ವರ್ಷಗಳಿಂದಲೂ ಅರಣ್ಯ ರೋದನವಾಗಿದೆ.

ವರ್ಷಗಳು ಗತಿಸಿದರೂ ಸಮಸ್ಯೆಗೆ ಪರಿಹಾರ ಸಿಗದಾಗಿದೆ. ಹಲವು ಯೋಜನೆಗಳು ರೂಪುಗೊಂಡರೂ ಅನುಷ್ಠಾನ ಆಗದೇ ಇರುವುದು
ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ಸೀವೇಜ್‌ ಫಾರ್ಮ್‌ನ ಕಸ ವಿಲೇವಾರಿ ಘಟಕದ ಸ್ಥಳಾಂತರವೇ 2018ರಲ್ಲಿ ಕೃಷ್ಣರಾಜ (ಕೆ.ಆರ್‌.) ವಿಧಾನಸಭಾ ಕ್ಷೇತ್ರದ ಚುನಾವಣೆಯ ಪ್ರಮುಖ ವಿಷಯವಾಗಿತ್ತು. ಇದೇ ವಿಷಯವಿಟ್ಟುಕೊಂಡು ಸರಣಿ ಪ್ರತಿಭಟನೆಗಳೂ ನಡೆದಿದ್ದವು. ಬಿಜೆಪಿಯ ಎಸ್‌.ಎ.ರಾಮದಾಸ್‌, ಕಾಂಗ್ರೆಸ್‌ನ ಎಂ.ಕೆ.ಸೋಮಶೇಖರ್‌ ನಡುವೆ ಈ ವಿಷಯದಲ್ಲೇ ತೀವ್ರ ಪೈಪೋಟಿ ನಡೆದಿತ್ತು.

ಚುನಾವಣೆ ಮುಗಿದು ಮೂರು ವರ್ಷದ ಆಸುಪಾಸು. ಅಂದಿನ ಹಾಲಿ ಶಾಸಕರಾಗಿದ್ದ ಎಂ.ಕೆ.ಸೋಮಶೇಖರ್‌ ಈಗ ಪರಾಭವಗೊಂಡಿದ್ದರೆ; ಮಾಜಿಯಾಗಿದ್ದ ಎಸ್‌.ಎ.ರಾಮದಾಸ್‌ ಹಾಲಿ ಶಾಸಕರಾಗಿದ್ದಾರೆ. ಮೂರು ವರ್ಷದ ಅವಧಿಯಲ್ಲಿ ಸರ್ಕಾರವೇ ಬದಲಾಗಿದೆ. ಇಬ್ಬರು ಉಸ್ತುವಾರಿ ಸಚಿವರು ಬದಲಾಗಿದ್ದು, ಮೂರನೆಯವರು ಜಿಲ್ಲೆಯ ಚುಕ್ಕಾಣಿ ಹಿಡಿದಿದ್ದಾರೆ.

ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ.ಸೋಮಣ್ಣ, ಸಂಸದ ಪ್ರತಾಪ ಸಿಂಹ ಜೊತೆ ಸೀವೇಜ್‌ ಫಾರ್ಮ್‌ಗೆ ಭೇಟಿ ನೀಡಿದ್ದರು. ಅಧಿಕಾರಿಗಳ ತಂಡದಿಂದ ಮಾಹಿತಿ ಪಡೆದಿದ್ದರು. ಪಾಲಿಕೆಯ ಅಧಿಕಾರಿಗಳು, ಮೇಯರ್‌ ನೇತೃತ್ವದ ತಂಡವನ್ನು ಕಸದ ವಿಲೇವಾರಿ ಯಾವ ರೀತಿ ವೈಜ್ಞಾನಿಕವಾಗಿ ನಡೆದಿದೆ ಎಂಬುದನ್ನು ನೋಡಿಕೊಂಡು ಬರಲಿಕ್ಕಾಗಿಯೇ ಮಹಾರಾಷ್ಟ್ರದ ಪುಣೆಗೆ ಕಳುಹಿಸಿಕೊಟ್ಟಿದ್ದರು.

ಸೀವೇಜ್‌ ಫಾರ್ಮ್‌ನಲ್ಲಿನ ಕಸದ ಗುಡ್ಡಗಳಲ್ಲಿದ್ದ 2.5 ಲಕ್ಷ ಟನ್ ತ್ಯಾಜ್ಯ ಸಂಸ್ಕರಣೆಗೆ ಅಂದಾಜು ₹18.5 ಕೋಟಿ ಮೊತ್ತದ ಯೋಜನೆ ಸಿದ್ಧಪಡಿಸಿ ಟೆಂಡರ್‌ ಕರೆಯಲಾಗಿತ್ತು. ಯಾರಿಗೆ ಗುತ್ತಿಗೆ ನೀಡಬೇಕು ಎಂಬುದು ನಿರ್ಧಾರಿತವಾಗಿತ್ತು. ಆದರೆ, ವರ್ಷ ಗತಿಸಿದರೂ ಒಂದು ಟನ್‌ ಕಸ ಕರಗಿಸಲಿಲ್ಲ. ಸಂಸ್ಕರಣೆ ನಡೆಯಲಿಲ್ಲ. ಬದಲಿಗೆ 1 ಲಕ್ಷ ಟನ್‌ ಹೆಚ್ಚುವರಿಯಾಗಿ ಸಂಗ್ರಹಗೊಂಡಿದೆ. ಇದು ಯಾವಾಗ ಕರಗುತ್ತದೆ? ನಮ್ಮ ಸಮಸ್ಯೆಗೆ ಎಂದು ಮುಕ್ತಿ ಸಿಗಲಿದೆ? ಎಂಬುದು ಸ್ಥಳೀಯ ನಿವಾಸಿಗಳ ಪ್ರಶ್ನೆಯಾಗಿದೆ.

ಉಸ್ತುವಾರಿ ಸಚಿವರು ಬದಲಾದರು. ಎಸ್‌.ಟಿ.ಸೋಮಶೇಖರ್‌ ಸಹ ಹಳೇ ಯೋಜನೆಯ ಅನುಷ್ಠಾನಕ್ಕೆ ಒಲವು ತೋರಿದ್ದರು. 2020ರ ಮೇ ತಿಂಗಳಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ ಸಿಂಹ, ಶಾಸಕ ಎಸ್‌.ಎ.ರಾಮದಾಸ್‌ ನಡುವೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್‌ ಸಮ್ಮುಖವೇ ತೀವ್ರ ಜಟಾಪಟಿ ನಡೆಯಿತು. ಇಬ್ಬರೂ ಇದನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಸ್ವೀಕರಿಸಿದರು. ಸಂಸದ ಪ್ರತಾಪ ಸಿಂಹ ತ್ಯಾಜ್ಯ ಸಂಸ್ಕರಣೆ ಮೂಲಕ ಕಸದ ಗುಡ್ಡ ಕರಗಿಸಬೇಕು ಎಂಬ ಹಟಕ್ಕೆ ಬಿದ್ದರು. ತ್ಯಾಜ್ಯ ಘಟಕವನ್ನೇ ಸ್ಥಳಾಂತರಿಸಬೇಕು ಎಂದುರಾಮದಾಸ್‌ ಪಟ್ಟು ಹಿಡಿದರು.

ಶಾಸಕ– ಸಂಸದರ ಜಟಾಪಟಿ ನಡೆದು 11 ತಿಂಗಳು ಗತಿಸಿದರೂ ಕಸಕ್ಕೆ ಮುಕ್ತಿ ಸಿಗದಾಗಿದೆ. ನಿತ್ಯವೂ ಕನಿಷ್ಠ 200 ಟನ್‌ ಕಸ ಸೇರ್ಪಡೆಯಾಗುವುದು ತಪ್ಪದಾಗಿದೆ. ಯುಗಾದಿಯ ಮರು ದಿನವೇ ಪೂರ್ವ ಮುಂಗಾರು ವರ್ಷಧಾರೆಯಾಗಿದೆ. ಮಳೆ ಬಿದ್ದ ಬೆನ್ನಿಗೆ ಕಸದ ದುರ್ನಾತವೂ ಸುತ್ತಮುತ್ತಲಿನ ಪರಿಸರದಲ್ಲಿ ಪಸರಿಸಲು ಶುರುವಾಗಿದ್ದು, ಚಳಿಗಾಲ ಮುಗಿಯುವ ತನಕವೂ ನಿತ್ಯವೂ ನಾವು ನರಕಯಾತನೆ ಅನುಭವಿಸಬೇಕಿದೆ. ಈ ಸಮಸ್ಯೆಗೆ ಯಾವಾಗ ಪರಿಹಾರ ಸಿಗಲಿದೆ? ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಾರೆ.

₹13 ಕೋಟಿ ವೆಚ್ಚದಲ್ಲಿ ನವೀಕರಣ
‘ಸೀವೇಜ್‌ ಫಾರ್ಮ್‌ನಲ್ಲಿನ ತ್ಯಾಜ್ಯ ಸಂಸ್ಕರಣಾ ಘಟಕ 20 ವರ್ಷಗಳ ಹಳೆಯದ್ದು. ಯಂತ್ರೋಪಕರಣ ಸಹ ತುಂಬಾ ಹಳೆಯವು. ಈಚೆಗಿನ ದಿನಗಳಲ್ಲಿ ಸಾಮರ್ಥ್ಯವೂ ಕುಂದಿದೆ. ಆದ್ದರಿಂದ ಪಾಲಿಕೆ ನವೀಕರಣಕ್ಕೆ ಮುಂದಾಗಿದೆ’ ಎಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತೆ ಶಿಲ್ಪಾನಾಗ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯುನೈಟೆಡ್‌ ಇಂಡಸ್ಟ್ರೀಸ್‌ ಡೆವಲಪ್‌ಮೆಂಟ್‌ ಆರ್ಗನೈಸೇಷನ್‌ (ಯುನಿಡೊ) ಸೀವೇಜ್‌ ಫಾರ್ಮ್‌ನ ಆಧುನೀಕರಣಕ್ಕೆ ₹10 ಕೋಟಿ ಅನುದಾನ ನೀಡಲಿದೆ. ₹13 ಕೋಟಿಯ ಡಿಪಿಆರ್‌ ಸಿದ್ಧವಾಗಿದೆ. ₹7 ಕೋಟಿ ಸಿವಿಲ್‌ ಕಾಮಗಾರಿಗಳಿಗಿದ್ದರೆ; ₹6 ಕೋಟಿ ಅತ್ಯಾಧುನಿಕ ಯಂತ್ರೋಪಕರಣಗಳಿಗೆ ಮೀಸಲಿದೆ. ಒಂದು ವಾರದಲ್ಲಿ ಟೆಂಡರ್‌ ಪ್ರಕ್ರಿಯೆ ಮುಗಿಯಲಿದೆ’ ಎಂದು ಮಾಹಿತಿ ನೀಡಿದರು.

‘ಇದೇ 21ಕ್ಕೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ವಾರಕ್ಕೊಮ್ಮೆ ನಾನೇ ಪರಿಶೀಲನೆ ನಡೆಸುವೆ. 15 ದಿನಕ್ಕೊಮ್ಮೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸುವೆ. ಶರವೇಗ ನೀಡುವೆವು. ಈ ಬಾರಿ ಘಟಕವನ್ನು ಅತ್ಯಾಧುನಿಕಗೊಳಿಸಲಿದ್ದೇವೆ’ ಎಂದು ಶಿಲ್ಪಾನಾಗ್‌ ತಿಳಿಸಿದರು.

ಶುರುವಾಗದ ಹೊಸ ಘಟಕ
ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಘನ ತ್ಯಾಜ್ಯದ ಸಂಸ್ಕರಣೆಗಾಗಿಯೇ, ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ 2016ರಲ್ಲೇ ಹೊಸ ಘಟಕಗಳ ಆರಂಭಕ್ಕೆ ಮಹಾನಗರ ಪಾಲಿಕೆ ಆಡಳಿತ ಮುಂದಾಗಿದೆ.

ಹಳೇ ಕೆಸರೆ ಬಳಿ 200 ಟನ್‌, ರಾಯನಕೆರೆ ಬಳಿ 150 ಟನ್ ತ್ಯಾಜ್ಯ ವಿಲೇವಾರಿಯ ಸಂಸ್ಕರಣ ಘಟಕ ನಿರ್ಮಾಣಕ್ಕೆ 2018ರಲ್ಲಿ ಹಸಿರು ನಿಶಾನೆ ಸಿಕ್ಕಿದ್ದರೂ; ವಿವಿಧ ಕಾರಣದಿಂದ ಇಂದಿಗೂ ಕಸ ಸಂಸ್ಕರಣೆ ಕಾರ್ಯ ಶುರುವಾಗಿಲ್ಲ.

ಕುಂಬಾರಕೊಪ್ಪಲು, ಜೆ.ಪಿ.ನಗರದ ಸ್ಮಶಾನದ ಬಳಿ, ಸೀವೇಜ್‌ ಫಾರ್ಮ್‌ನ ಗುಂಡೂರಾವ್ ನಗರದಲ್ಲಿ ತಲಾ ಒಂದೊಂದು ಶೂನ್ಯ ತ್ಯಾಜ್ಯ ಸಂಸ್ಕರಣಾ ಘಟಕ, ಕೆಸರೆ ಹಾಗೂ ಜೋಡಿ ತೆಂಗಿನಮರದ ಸ್ಮಶಾನದ ಬಳಿ ತಲಾ ಎರಡು ಘಟಕ ಕಾರ್ಯಾಚರಿಸುತ್ತಿವೆ. ಮೈಸೂರು ವಿಶ್ವವಿದ್ಯಾಲಯದ ಒಳಭಾಗದ ಒಂದು ಘಟಕ ವಿ.ವಿ.ಗೆ ಸೀಮಿತವಾಗಿದೆ. ಇವು ಜೆ–ನರ್ಮ್‌ ಯೋಜನೆಯಡಿ ಅನುಷ್ಠಾನಗೊಂಡ ಘಟಕಗಳು.

ನಿತ್ಯವೂ 450 ಟನ್‌ ಕಸ ಉತ್ಪತ್ತಿ
ಮೈಸೂರು ನಗರದಲ್ಲಿ ನಿತ್ಯವೂ 450 ಟನ್‌ ಕಸ ಉತ್ಪತ್ತಿಯಾಗುತ್ತಿದೆ. ವಿದ್ಯಾರಣ್ಯಪುರಂನಲ್ಲಿರುವ ಸೀವೇಜ್‌ ಫಾರ್ಮ್‌ನಲ್ಲಿ ನಿತ್ಯ 180 ಟನ್‌ ಕಸವನ್ನು ಸಂಸ್ಕರಣೆಗೊಳಪಡಿಸಲಾಗುತ್ತಿದೆ. 50 ಟನ್‌ ಕಸ ನಗರದ ವಿವಿಧೆಡೆಯಿರುವ ಶೂನ್ಯ ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಸಂಸ್ಕರಣೆಗೊಳಪಡುತ್ತಿದೆ. ಉಳಿದ 220 ಟನ್‌ ಕಸದ ಗುಡ್ಡ ಸೇರುತ್ತಿದೆ. ಇದರಿಂದ ದಿನದಿಂದ ದಿನಕ್ಕೆ ಕಸದ ರಾಶಿ ಬೆಳೆಯುತ್ತಿದೆ.

ಹಿಂದಿನ ವರ್ಷ ಸಂಸ್ಕರಣೆಗೊಳಗಾಗಬೇಕಿದ್ದ ಘನ ತ್ಯಾಜ್ಯದ ರಾಶಿ 2.5 ಲಕ್ಷ ಟನ್‌ನಷ್ಟಿದ್ದರೆ; ಇದೀಗ ಇದು 3 ಲಕ್ಷದಿಂದ 3.5 ಲಕ್ಷ ಟನ್‌ಗೆ ಹೆಚ್ಚಿದೆ. ಇದರ ಬೆನ್ನಿಗೆ ಸಮಸ್ಯೆಯೂ ಉಲ್ಬಣಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT