ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ದಾರಿಯಲ್ಲೇ ಜಿಟಿಡಿ ನಡಿಗೆ!

ಕಾಂಗ್ರೆಸ್‌ ಸೇರ್ಪಡೆ ಸುಳಿವು ನೀಡಿದ ‘ಚಾಣಕ್ಯ’ l ಕುಮಾರಸ್ವಾಮಿ ವರ್ತನೆಗೆ ಅಸಮಾಧಾನ
Last Updated 25 ಆಗಸ್ಟ್ 2021, 8:14 IST
ಅಕ್ಷರ ಗಾತ್ರ

ಮೈಸೂರು: ಜೆಡಿಎಸ್‌ ತೊರೆಯುವ ನಿರ್ಧಾರದ ಕುರಿತು ಮಂಗಳವಾರ ಬಹಿರಂಗವಾಗಿ ಮಾತನಾಡಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಸದ್ಯ ಮೈಸೂರು ಭಾಗದ ರಾಜಕಾರಣದಲ್ಲಿ ಸಂಚಲನೆ ಮೂಡಿಸಿದ್ದಾರೆ. ಇದೇ ವೇಳೆ, ಕಾಂಗ್ರೆಸ್‌ ಸೇರುವ ಇಂಗಿತವನ್ನು ವ್ಯಕ್ತಪಡಿಸಿರುವ ಅವರು ಆ ನಿರ್ಧಾರಕ್ಕೇ ಅಂಟಿಕೊಂಡರೆ, ಮೂರು ಪ್ರಮುಖ ಪಕ್ಷಗಳಲ್ಲೂ ಒಂದು ಸುತ್ತು ಬಂದಂತಾಗುತ್ತದೆ. ಈಗಾಗಲೇ ಅವರು ಬಿಜೆಪಿಯಲ್ಲಿದ್ದು ಹೊರಬಂದ ಅನುಭವವನ್ನೂ ಪಡೆದಿದ್ದಾರೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಅಂದಿನ ಮುಖ್ಯಮಂತ್ರಿ, ‘ರಾಜಕೀಯ ಶತ್ರು’ ಸಿದ್ದರಾಮಯ್ಯ ಅವರನ್ನು 36,042 ಮತಗಳ ಅಂತರದಲ್ಲಿ ಸೋಲಿಸಿದ್ದ ದೇವೇಗೌಡರು ಈಗ ಅವರ ಮೂಲಕವೇ ಪಕ್ಷ ಸೇರ್ಪಡೆಗೆ ಸಜ್ಜಾಗಿದ್ದಾರೆ. ವಿಪರ್ಯಾಸವೆಂದರೆ ಸಿದ್ದರಾಮಯ್ಯನವರು 2006ರಲ್ಲಿ ಕಾಂಗ್ರೆಸ್‌ ಸೇರಿದಾಗ ಅವರೊಂದಿಗೆ ಹೋಗದೇ ದೇವೇಗೌಡರು ಜೆಡಿಎಸ್‌ನಲ್ಲೇ ಉಳಿದಿದ್ದರು. ಈಗ ಒಂದೂವರೆ ದಶಕದ ನಂತರ ಸಿದ್ದರಾಮಯ್ಯನವರ ದಾರಿಯನ್ನೇ ತುಳಿದಿದ್ದಾರೆ.

70ರ ದಶಕದಿಂದಲೂ ರಾಜಕೀಯ ಕ್ಷೇತ್ರದಲ್ಲಿದ್ದು, ಹಳೇ ಮೈಸೂರು ಭಾಗದಲ್ಲಿ 'ಚಾಣಕ್ಯ' ಎಂದೇ ಪ್ರಸಿದ್ಧರಾದ ದೇವೇಗೌಡ ಸಿದ್ದರಾಮಯ್ಯ ನವರೊಂದಿಗೆ ಎರಡು ದಶಕಕ್ಕೂ ಹೆಚ್ಚು ಕಾಲ ರಾಜಕೀಯ ಸಖ್ಯವನ್ನು ಹೊಂದಿದ್ದರು. ಸಹಕಾರ ಕ್ಷೇತ್ರದಲ್ಲಿ ಹೆಜ್ಜೆ ಗುರುತು ಮೂಡಿಸಿರುವ ಅವರು 1983ರಲ್ಲಿ ಮೈಸೂರು ಎಪಿಎಂಸಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಸಾರ್ವಜನಿಕ ಜೀವನವನ್ನು ಪ್ರವೇಶಿಸಿದ್ದರು.

1998ರಲ್ಲಿ ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಜನತಾದಳ ಅಭ್ಯರ್ಥಿಯಾಗಿ ಆಯ್ಕೆಯಾಗಿ, ಅದೇ ಕ್ಷೇತ್ರದಿಂದ 2004ರಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಗೆದ್ದಿದ್ದರು. 2008ರಲ್ಲಿ ಬಿಜೆಪಿ ಸೇರಿ ಸ್ಪರ್ಧಿಸಿ ಮೂರನೇ ಸ್ಥಾನಕ್ಕೆ ಇಳಿದು ಸೋತಿದ್ದರು. 2013ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿಯೇ ಸ್ಪರ್ಧಿಸಿದ್ದ ಅವರು ಕಾಂಗ್ರೆಸ್‌ ಅಭ್ಯರ್ಥಿ ಎಂ.ಸತ್ಯನಾರಾಯಣ ಅವರನ್ನು ಸೋಲಿಸಿದ್ದರು.

ಎರಡು ಬಾರಿ ಕಾಂಗ್ರೆಸ್‌ ಅನ್ನು ಮಣಿಸಿದ ಕ್ಷೇತ್ರದಿಂದಲೇ ಅವರು ಮತ್ತೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಇಂಗಿತವನ್ನು ವ್ಯಕ್ತಪಡಿಸಿರುವುದು, ’ರಾಜಕೀಯದಲ್ಲಿ ಯಾವಾಗ, ಏನು ಬೇಕಾದರೂ ಆಗಬಹುದು’ ಎಂಬ ನಾಣ್ಣುಡಿಗೆ ಹೇಳಿಮಾಡಿಸಿದ ನಡೆಯಂತೆ ಕಾಣುತ್ತದೆ.

2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ್ದ ಅವರು, ತಮ್ಮ ಗೆಲುವಿಗೆ ಜೆಡಿಎಸ್‌ ಮುಖಂಡರು ಮತ್ತು ಕಾರ್ಯಕರ್ತರ ಶ್ರಮವೇ ಕಾರಣ ಎಂದು ಪ್ರತಿಪಾದಿಸಿದ್ದರು.

’ಐದು ಬಾರಿ ಗೆದ್ದಿದ್ದರೂ ಕ್ಷೇತ್ರವನ್ನು ಸಿದ್ದರಾಮಯ್ಯ ಸಂಪೂರ್ಣ ನಿರ್ಲಕ್ಷ್ಯಿಸಿದ್ದರು. ಅವರ ಅಹಂಕಾರವೇ ನನ್ನ ಗೆಲುವಿಗೆ ದಾರಿ ಮಾಡಿತು’ ಎಂದೂ ಹೇಳಿದ್ದರು. ಇದೀಗ ಅವರು ಜೆಡಿಎಸ್‌ನ ಎಚ್‌.ಡಿ.ಕುಮಾರಸ್ವಾಮಿ ಕುರಿತು ಅಂಥದ್ದೇ ಅಸಮಾಧಾನ ವ್ಯಕ್ತ‍‍ಪಡಿಸಿ ಮತ್ತೆ ಸಿದ್ದರಾಮಯ್ಯನವರೊಂದಿಗೇ ನಡೆಯಲು ನಿರ್ಧರಿಸಿದ್ದಾರೆ. ಈ ಸನ್ನಿವೇಶದಲ್ಲಿ ಅವರು ತಮ್ಮ ಮಗ ಜಿ.ಡಿ.ಹರೀಶಗೌಡರ ಕೈಯನ್ನೂ ಹಿಡಿದಿರುವುದು ಅವರ ಕುಟುಂಬದ ರಾಜಕೀಯ ಭವಿಷ್ಯಕ್ಕೂ ದಿಕ್ಸೂಚಿಯಾಗಿದೆ.

ಸೇರ್ಪಡೆಗೆ ಪಕ್ಷಾಂತರ ನಿಷೇಧ ಕಾಯ್ದೆ ತಡೆ: ‘ಜಿ.ಟಿ.ದೇವೇಗೌಡರು ಕಾಂಗ್ರೆಸ್‌ ಸೇರಲು ಸಿದ್ಧರಾಗಿರುವುದನ್ನು ಸ್ವಾಗತಿಸುತ್ತೇವೆ. ಆದರೆ ಅವರು ಜೆಡಿಎಸ್‌ನಿಂದ ಗೆದ್ದಿರುವುದರಿಂದ ಸದ್ಯ ಪಕ್ಷಕ್ಕೆ ಸೇರಲು ಸಾಧ್ಯವಿಲ್ಲ. ಪಕ್ಷಾಂತರ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಿದಂತಾಗುತ್ತದೆ’ ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯಕುಮಾರ್‌ ಅಭಿಪ್ರಾಯಪಟ್ಟರು.

‘ಕೆಪಿಸಿಸಿ ಸೂಚನೆ ನೀಡಿದ ಬಳಿಕ ಸಮಿತಿಯು ಸ್ಥಳೀಯ ಶಾಸಕರ ಸಭೆಯನ್ನು ನಡೆಸಿ ಚರ್ಚಿಸಬೇಕು. ಆದರೆ ಇದುವರೆಗೂ ಸೂಚನೆ ಬಂದಿಲ್ಲ. ಬಂದ ಬಳಿಕ ಸ್ಥಳೀಯ ಶಾಸಕರ ಸಭೆ ನಡೆಸಿ, ಅಲ್ಲಿ ವ್ಯಕ್ತವಾಗುವ ಅಭಿಪ್ರಾಯವನ್ನು ಸಂಗ್ರಹಿಸಿ ವರದಿ ಸಲ್ಲಿಸಲಾಗುವುದು’ ಎಂದರು.

ದೇವೇಗೌಡರ ನಡೆ ಕುರಿತು ಶಾಸಕ ಸಾ.ರ.ಮಹೇಶ್‌ ಹಾಗೂ ಜೆಡಿಎಸ್‌ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹಸ್ವಾಮಿ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

ತಂದೆ–ಮಗ ಇಬ್ಬರಿಗೂ ಅವಕಾಶ ಕಡಿಮೆ: ‘ಜಿ.ಟಿ.ದೇವೇಗೌಡರು ಕಾಂಗ್ರೆಸ್‌ಗೆ ಹೋಗಲಿದ್ದಾರೆ ಎಂಬ ಸಂಗತಿ ಮೊದಲೇ ಗೊತ್ತಿತ್ತು. ಆದರೆ ಅವರು ಅಲ್ಲಿಗೆ ಹೋಗುವುದರಿಂದ ಅವರು ಮತ್ತು ಅವರ ಮಗನಿಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ದೊರಕುವುದು ಕಷ್ಟಕರವೆನಿಸುತ್ತದೆ’ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT