ಜತೆಯಾಗಿ ಅಖಾಡಕ್ಕಿಳಿದ ಸಿದ್ದರಾಮಯ್ಯ–ಜಿ.ಟಿ.ದೇವೇಗೌಡ

ಶುಕ್ರವಾರ, ಏಪ್ರಿಲ್ 26, 2019
21 °C
ಮೈತ್ರಿ ಅಭ್ಯರ್ಥಿ ಪರ ಬಿರುಸಿನ ಪ್ರಚಾರ

ಜತೆಯಾಗಿ ಅಖಾಡಕ್ಕಿಳಿದ ಸಿದ್ದರಾಮಯ್ಯ–ಜಿ.ಟಿ.ದೇವೇಗೌಡ

Published:
Updated:
Prajavani

ಮೈಸೂರು: ಹಳೆಯ ವೈರತ್ವ, ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿದ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಮೈತ್ರಿ ಅಭ್ಯರ್ಥಿ ಪರ ಜಂಟಿ ಪ್ರಚಾರ ಕೈಗೊಂಡು ಕಾಂಗ್ರೆಸ್‌, ಜೆಡಿಎಸ್‌ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿದರು.

ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯ ವೇಳೆ ರಾಜಕೀಯ ವೈರತ್ವ ಬೆಳೆಸಿಕೊಂಡಿದ್ದ ಇಬ್ಬರು ನಾಯಕರು ಭಾನುವಾರ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಡಕೊಳ, ಜಯಪುರ, ಇಲವಾಲ ಮತ್ತು ಸಿದ್ದಲಿಂಗಪುರದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಇಬ್ಬರು ನಾಯಕರು ಕಡಕೊಳದಲ್ಲಿ ಭಾನುವಾರ ಮಧ್ಯಾಹ್ನ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು. ಮೊದಲು ಸಿದ್ದರಾಮಯ್ಯ ವೇದಿಕೆಗೆ ಬಂದರೆ, ಅಲ್ಪ ಸಮಯದ ಬಳಿಕ ಜಿ.ಟಿ.ದೇವೇಗೌಡ ವೇದಿಕೆಯೇರಿದರು. ಇಬ್ಬರೂ ಹಸ್ತಲಾಘವ ನೀಡಿ ಅಕ್ಕಪಕ್ಕ ಕುಳಿತುಕೊಂಡರು. ಆತ್ಮೀಯವಾಗಿ ಮಾತನಾಡಿದರು.

‘ನಾನು ಮತ್ತು ಜಿ.ಟಿ.ದೇವೇಗೌಡ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ದ್ದೇವೆ. ನಾವು 13 ವರ್ಷಗಳಿಂದ ಬೇರೆ ಬೇರೆ ಇದ್ದೆವು. ಕಳೆದ ಚುನಾವಣೆಯಲ್ಲಿ ನಾನು, ಅವನೇ ಫೈಟ್‌ ಮಾಡಿದ್ದೆವು. ಈಗ ಅವೆಲ್ಲವನ್ನೂ ಮರೆತುಬಿಟ್ಟು ಒಂದಾಗಿದ್ದೇವೆ. ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬುದೇ ನಮ್ಮ ಗುರಿ’ ಎಂದು ಸಿದ್ದರಾಮಯ್ಯ ಹೇಳಿದರು.

‘ನಾಯಕರು ಒಂದಾಗಿ ಬಿಡ್ತಾರೆ, ನಮಗೆ ಇಲ್ಲಿ ಕಷ್ಟ ಎಂದು ಕಾರ್ಯ ಕರ್ತರು ಹೇಳುತ್ತಾರೆ. ಅದು ನಿಜ. ಏಕೆಂದರೆ ಚುನಾವಣೆ ವೇಳೆ ನಾಯಕರು ಕಾರ್ಯಕರ್ತರಷ್ಟು ಜಗಳವಾಡಿರು ವುದಿಲ್ಲ. ತಳಮಟ್ಟದ ಕಾರ್ಯಕರ್ತರು ಹೆಚ್ಚು ಜಗಳವಾಡಿರುತ್ತಾರೆ. ಆದರೂ ದೇಶವನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಜತೆಯಾಗಬೇಕಿದೆ. ನಮಗೆ ದೇಶ ಮುಖ್ಯ’ ಎಂದರು.

ರಾಮಮಂದಿರ ಕಟ್ಟುವುದಕ್ಕೆ ಆಕ್ಷೇಪವಿಲ್ಲ: ಬಿಜೆಪಿಯವರು ಬಡವರು, ದಲಿತರು ಮತ್ತು ಮಹಿಳೆಯರ ಬಗ್ಗೆ ಮಾತನಾಡುವುದಿಲ್ಲ. ಹಿಂದುತ್ವ, ಜಾತಿ, ಧರ್ಮ, ರಾಮಮಂದಿರದ ಬಗ್ಗೆ ಮಾತ್ರ ಮಾತನಾಡುತ್ತಾರೆ. ರಾಮಮಂದಿರ ಕಟ್ಟುವುದಕ್ಕೆ ನಾವೇನೂ ಬೇಡ ಅನ್ನಲ್ಲ. ಕಟ್ಟದೇ ಇರುವುದಕ್ಕೆ ನಮ್ಮ ಆಕ್ಷೇಪಣೆ. ರಾಮಮಂದಿರ ಕಟ್ಟುತ್ತೇವೆ ಎಂದು ಹೇಳಿ ಎಷ್ಟು ವರ್ಷಗಳು ಉರುಳಿದವು ಎಂದು ಪ್ರಶ್ನಿಸಿದರು.

ವಾಜಪೇಯಿ ಅವರು ಆರು ವರ್ಷ ಮತ್ತು ನರೇಂದ್ರ ಮೋದಿ ಅವರು ಐದು ವರ್ಷ ಪ್ರಧಾನಿಯಾಗಿ ಅಧಿಕಾರದಲ್ಲಿದ್ದರು. ರಾಮಮಂದಿರ ಕಟ್ಟದಂತೆ ಬಿಜೆಪಿಯವರ ಕೈಗಳನ್ನು ಕಟ್ಟಿಹಾಕಿದ್ದು ಯಾರು. ಏಕೆ ಕಟ್ಟಿಲ್ಲ ಎಂಬುದಕ್ಕೆ ಇವರ ಬಳಿ ಉತ್ತರವಿ ದೆಯಾ? ಪ್ರತಿ ಚುನಾವಣೆ ಸಮಯದಲ್ಲಿ ರಾಮನ ಹೆಸರಿಲ್ಲಿ ಮತ ಕೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಇನ್ನು ಸ್ಪರ್ಧಿಸಲ್ಲ: ಜಯಪುರದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ನಾನು ಇನ್ನು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸು ವುದಿಲ್ಲ. ನೀವೆಲ್ಲರೂ ಜತೆಯಾಗಿ ಅಭಿವೃದ್ಧಿ ಕೆಲಸಕ್ಕೆ ಕೈಜೋಡಿಸಿ’ ಎಂದು ಕರೆ ನೀಡಿದರು.

ಜಿ.ಟಿ.ದೇವೇಗೌಡ ಮಾತನಾಡಿ. ‘ನಾವಿಬ್ಬರು 1983 ರಿಂದ 2006ರ ವರೆಗೆ ಜತೆಗಿದ್ದೆವು. ಆದರೆ ರಾಜಕೀಯ ಕಾರಣಗಳಿಂದ ದೂರವಾಗಿದ್ದೆವು. ಸಿದ್ದ ರಾಮಯ್ಯ–ಜಿ.ಟಿ.ದೇವೇಗೌಡ ಪರಸ್ಪರ ಮಾತನಾಡಲ್ಲ, ಜತೆಯಾಗಿ ವೇದಿಕೆ ಏರಲ್ಲ, ಒಟ್ಟಾಗಿ ಪ್ರಚಾರಕ್ಕೆ ಬರಲ್ಲ ಎಂಬ ಆತಂಕ ಕೆಲವರಲ್ಲಿದ್ದವು. ಅವುಗಳನ್ನು ದೂರ ಮಾಡಿದ್ದೇವೆ’ ಎಂದರು.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ವಿಧಾನಸಭೆ ಚುನಾ ವಣೆಗಳಲ್ಲಿ ನಾವು ಪರಸ್ಪರ ಪೈಪೋಟಿ ನಡೆಸಿದ್ದು ನಿಜ. ಆದರೆ ದೇಶದ ಸಮಗ್ರ ಅಭಿವೃದ್ಧಿ ಮತ್ತು ಬಡವರ ಮೇಲಿನ ಕಾಳಜಿಯಿಂದ ಈಗ ಕೈಜೋಡಿ ಸಬೇಕಿದೆ. ನರೇಂದ್ರ ಮೋದಿ ಅವರನ್ನು ಸೋಲಿಸಿ ರಾಹುಲ್ ಗಾಂಧಿ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕು. ಅದಕ್ಕಾಗಿ ಪರಸ್ಪರ ಭಿನ್ನಾಭಿಪ್ರಾಯ ಮರೆತು ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.

ವಿಧಾನಪರಿಷತ್‌ ಸದಸ್ಯ ಸಿ.ಎಂ.ಇಬ್ರಾಹಿಂ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಮಾದೇಗೌಡ, ಮುಖಂಡರಾದ ಸಿದ್ದೇಗೌಡ, ನರಸೇಗೌಡ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !