ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಅಲ್ಲಿದೆ ನಮ್ಮನೆ, ಇಲ್ಲಿದ್ದೇವೆ ಸುಮ್ಮನೆ!

Last Updated 30 ಜುಲೈ 2022, 18:55 IST
ಅಕ್ಷರ ಗಾತ್ರ

ಮೈಸೂರು: ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಗುಡಿಬಂಡ ಮಂಡಲ್‌ಗೆ ಸೇರಿದ ಹಿರೇತುರ್ಪಿ ಗ್ರಾಮದ ಕನ್ನಡಿಗರು ಎರಡು ತಿಂಗಳ ಹಿಂದೆ ಆಂಜನೇಯ ಜಾತ್ರೆ ಪ್ರಯುಕ್ತ ಪೌರಾಣಿಕ ನಾಟಕ ‘ಮೂರೂವರೆ ವಜ್ರಗಳು’ ಮತ್ತು ‘ಕುಡುಕ ಕಟ್ಟಿದ ತಾಳಿ’ ನಾಟಕ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದರು. ಅಲ್ಲಿನ ಅಧಿಕಾರಿಗಳು, ‘ತೆಲುಗು ನಾಡಿನಲ್ಲಿ ಕನ್ನಡ ನಾಟಕ ಏಕೆ’ ಎಂದು ಅನುಮತಿ ನಿರಾಕರಿಸಿದ್ದರು!

ಆದರೆ, ಸುಮ್ಮನಿರದ ಕನ್ನಡಿಗರು, ‘ಕನ್ನಡದ ನಾಟಕಕ್ಕೆ ಏಕೆ ಅಡ್ಡಿ’ ಎನ್ನುತ್ತ ರಂಗ ಪ್ರದರ್ಶನ ಮಾಡಿಯೇ ಬಿಟ್ಟರು.

ತೆಲುಗು ನಾಡಿನಲ್ಲಿದ್ದರೂ ಅಲ್ಲಿನ ಕನ್ನಡಿಗರು ಕನ್ನಡದ ಅಸ್ಮಿತೆಯಲ್ಲೇ ಬದುಕುತ್ತಿದ್ದಾರೆ. ಕರ್ನಾಟಕ ಏಕೀಕರಣದ ನಂತರ ಗಡಿನಾಡ ಕನ್ನಡಿಗರು ನಿತ್ಯವೂ ಇಂಥ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ವಾಗ್ವಾದಕ್ಕೆ ಮುಖಾಮುಖಿ ಆಗುತ್ತಲೇ ಇದ್ದಾರೆ. ಹಲವು ಸವಾಲು ಎದುರಾದರೂ ಅವರು ಧೃತಿಗೆಟ್ಟಿಲ್ಲ. ಕನ್ನಡದ ಮೇಲಿನ ಅಭಿಮಾನವೂ ಕಡಿಮೆಯಾಗಿಲ್ಲ.

2022ರ ಏಪ್ರಿಲ್‌ 4ರಲ್ಲಿ ಸತ್ಯಸಾಯಿ ಜಿಲ್ಲೆ ಅಸ್ತಿತ್ವಕ್ಕೆ ಬಂತು. ಅಲ್ಲಿಯವರೆಗೆ ಅನಂತಪುರ ಜಿಲ್ಲೆಗೆ ಸೇರಿದ್ದ, ಅದಕ್ಕೂ ಮುನ್ನ ಮೈಸೂರು ಸಂಸ್ಥಾನದ ಆಡಳಿತದಲ್ಲಿದ್ದ ಮಡಕಶಿರಾ ತಾಲ್ಲೂಕಿನ ಮಡಕಶಿರಾ, ಅಗಳಿ, ರೊಳ್ಳೆ, ಗುಡಿಬಂಡ, ಅಮರಾಪುರ ಮಂಡಲದ ಕನ್ನಡಿಗರು ಇಂದಿಗೂ ಅಲ್ಲಿ ಪರಕೀಯರೇ. ಹಿರೇತುರ್ಪಿ ಗ್ರಾಮವು ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನಿಂದ 8 ಕಿ.ಮೀ ಮತ್ತು ಪಾವಗಡ ಗಡಿ ಗ್ರಾಮದಿಂದ 2.5 ಕಿ.ಮೀ. ದೂರದಲ್ಲಿದೆ.

ಶಿಕ್ಷಣ, ಉದ್ಯೋಗ ಮತ್ತು ಕೌಟುಂಬಿಕ ಸಂಬಂಧಗಳಿಗಾಗಿ ಕರ್ನಾಟಕದ ಮೇಲೆ ತಪ್ಪದ ಅವಲಂಬನೆ ಮತ್ತು ಗಡಿಯ ಒಳಗೂ–ಹೊರಗೂ ಆವರಿಸುವ ಪರಕೀಯ ಪ್ರಜ್ಞೆ–ರಾಜ್ಯದ ವಿವಿಧ ಭಾಗದ ಗಡಿಕನ್ನಡಿಗರನ್ನು ಹೈರಾಣು ಮಾಡಿದೆ.

ಗಂಡು ಮಕ್ಕಳಿಗೆ ಪೋಷಕರು ಕರ್ನಾಟಕದಿಂದಲೇ ಹೆಣ್ಣು ತರುತ್ತಾರೆ. ಹೀಗಾಗಿ ತಾಯಿಯ ಆಧಾರ್‌ ಕಾರ್ಡ್‌ನಲ್ಲಿ ಕರ್ನಾಟಕದ ವಿಳಾಸ. ತಂದೆಯ ಆಧಾರ್‌ ಕಾರ್ಡ್‌ನಲ್ಲಿ ತೆಲುಗುನಾಡಿನ ವಿಳಾಸ. ನಂತರ, ಕಾರ್ಡ್‌ನಲ್ಲಿ ವಿಳಾಸವಷ್ಟೇ ಬದಲಾಗುತ್ತದೆ.

‘ತಂದೆಯದ್ದು ತೆಲುಗು, ತಾಯಿಯದ್ದು ಕನ್ನಡ. ನನ್ನದು ಕಂದೆಲುಗು ಭಾಷೆ’ ಎನ್ನುತ್ತಾರೆ ಸಂಶೋಧಕ ಸಿ.ಶಿವಣ್ಣ. ಅವರ ಮಾತೃಭಾಷೆ ಕನ್ನಡ. ಗುಡಿಬಂಡ ಮಂಡಲದ ಪ್ರೌಢಶಾಲೆಯಲ್ಲಿ ಅವರು ತೆಲುಗು ಮಾಧ್ಯಮದಲ್ಲಿ ಓದಿದ್ದಾರೆ. ಮಡಕಶಿರಾದಲ್ಲಿ ಪಿಯುಸಿ, ಪೆನುಕೊಂಡದಲ್ಲಿ ಪದವಿ, ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿ ಮಾಡಿದ್ದಾರೆ.

ಸಿ.ಶಿವಣ್ಣ ಕನ್ನಡ, ತೆಲುಗು ಎರಡರಲ್ಲೂ ಕೃತಿಗಳನ್ನು ರಚಿಸಿದ್ದಾರೆ. ಮಡಕಶಿರಾ ಮಂಡಲದ ಗೌಡನಹಳ್ಳಿಯ ಜಿಲ್ಲಾ ಪರಿಷತ್‌ ಉನ್ನತ ಪ್ರೌಢಶಾಲೆಯಲ್ಲಿ ಅವರು ತೆಲುಗು ಶಿಕ್ಷಕರು. ಆದರೂ ಅವರು ಅಲ್ಲಿ ‘ಕನ್ನಡದ ಕವಿ’ ಎಂದೇ ಪ್ರಸಿದ್ಧ!

‘ಕರ್ನಾಟಕ ಸರ್ಕಾರ ನಮ್ಮ ಊರುಗಳಿಗೆ ಗಡಿಪ್ರದೇಶ ಎಂಬ ಮಾನ್ಯತೆ ನೀಡಬೇಕು. ಶಿಕ್ಷಣ, ಉದ್ಯೋಗದ ಅವಕಾಶ ಕಲ್ಪಿಸಬೇಕು. ಆದರೆ, ನಮ್ಮ ಸಮಸ್ಯೆಯನ್ನು ಸರ್ಕಾರ ಅರ್ಥ ಮಾಡಿಕೊಳ್ಳುತ್ತಲೇ ಇಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಅನಂತಪುರ ಜಿಲ್ಲೆಯ ಮತ್ತೊಂದು ಮೂಲೆಯಲ್ಲಿರುವ, ಬಳ್ಳಾರಿ ಗಡಿಭಾಗದ ಡಿ.ಹಿರೇಹಾಳ್‌ಗೆ ಹೋಗಿ ನಿಂತರೂ ಇದೇ ಮಾತು ಮಾರ್ದನಿಸುತ್ತದೆ.

‘ಕುದುರೆ’ ನೋಡಿ ‘ಗುರ‍್ರೆ’ ಎಂದರು!

ಹಲವು ವರ್ಷಗಳ ಹಿಂದೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಗಡಿಗ್ರಾಮ ಗೌನಿಪಲ್ಲಿಯ ಕನ್ನಡ ಶಾಲೆಯ 3ನೇ ತರಗತಿಗೆ ತೆರಳಿದ್ದ ಅಂದಿನ ಡಿಡಿಪಿಐ ಪಿ.ಎಂ.ಕುಮಾರ್‌, ‘ಕುದುರೆಯ ಚಿತ್ರ ತೋರಿಸಿ, ‘ಇದೇನು’ ಎಂದು ಕೇಳಿದಾಗ ಮಕ್ಕಳು ಒಂದೇ ಉಸಿರಿಗೆ ‘ಗುರ‍್ರೆ’ ಎಂದಿದ್ದರು. ಗುರ‍್ರಂ ಎಂದರೆ ತೆಲುಗು, ಗುರ‍್ರೆ ಎಂದರೆ ಕನ್ನಡ ಎಂಬುದು ಮಕ್ಕಳ ತಿಳಿವಳಿಕೆಯಾಗಿತ್ತು!

ಪರಿಣಾಮವಾಗಿ, ಆ ಮಕ್ಕಳಿಗೆ ಹಾಗೂ ಬೇರೆ ಜಿಲ್ಲೆಗಳ ಶಿಕ್ಷಕರ ಅನುಕೂಲಕ್ಕೆಂದು ತೆಲುಗು ಜಾನಪದ ಶಿಶುಪ್ರಾಸಗಳನ್ನು ‘ಗಿಲಕಿ’ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸುವ ಅವಕಾಶ ಅದೇ ಶಾಲೆಯ ಮುಖ್ಯಶಿಕ್ಷಕರಾಗಿದ್ದ ಕನ್ನಡದ ಲೇಖಕ, ಅನುವಾದಕ ಸ.ರಘುನಾಥ ಅವರಿಗೆ ದೊರಕಿತ್ತು. ರಾಜ್ಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಅದನ್ನು ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT