ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಎಡಗೈ ಒಳಪಂಗಡದ ಅನಾಥ ಆತ್ಮಕತೆ--– ಎಡಕ್ಕೆ ಸುಣ್ಣ, ಬಲಕ್ಕೆ ಬೆಣ್ಣೆ

Last Updated 3 ಮೇ 2018, 19:30 IST
ಅಕ್ಷರ ಗಾತ್ರ

ಉತ್ತರ ಕರ್ನಾಟಕದ ಉದ್ದಗಲಕ್ಕೆ ‘ಪ್ರಜಾವಾಣಿ’ ಕೈಗೊಂಡ ಚುನಾವಣಾ ಪಯಣದಲ್ಲಿ ಕೊರೆದು ಕಂಡದ್ದು ಎಡಗೈ ಒಳಪಂಗಡದ ಅಳಲಿನ ಆಳದ ಗೆರೆಗಳು.

ರಾಜ್ಯದ ‘ಅಸ್ಪೃಶ್ಯ’ ಪರಿಶಿಷ್ಟ ಜಾತಿಗಳೆನಿಸಿದ ಹೊಲೆಯ (ಬಲಗೈ) ಮತ್ತು ಮಾದಿಗ (ಎಡಗೈ) ಒಳಪಂಗಡಗಳ ನಡುವಿನ ಪರಸ್ಪರ ಮುನಿಸು, ಆಗ್ರಹಗಳಿಗೆ ದಶಕಗಳ ಇತಿಹಾಸವಿದೆ. ಸರಳೀಕರಿಸಿ ಹೇಳುವುದಾದರೆ, ಎಡಗೈ ಒಳಪಂಗಡದ ಜನಸಂಖ್ಯೆ ಬಲಗೈ ಒಳಪಂಗಡಕ್ಕಿಂತ ಹೆಚ್ಚು. ಶೈಕ್ಷಣಿಕವಾಗಿ, ರಾಜಕೀಯವಾಗಿ ಮುಂದುವರಿದ ಒಳಪಂಗಡ ಬಲಗೈ. ಎಡಗೈ ಹಿಂದೆ ಬಿದ್ದಿರುವುದು ವಾಸ್ತವ. ಸ್ಪೃಶ್ಯ ದಲಿತ ಜಾತಿಗಳಾದ ಲಂಬಾಣಿ ಮತ್ತು ಬೋವಿ ಕೂಡ ತಮಗೆ ಸಲ್ಲಬೇಕಾಗಿರುವುದಕ್ಕಿಂತ ಹೆಚ್ಚಿನ ಪಾಲಿನ ಮೀಸಲಾತಿಯನ್ನು ಕಬಳಿಸುತ್ತಿವೆ ಎಂಬುದು ಎಡಗೈ ಅಳಲು. ಪರಿಶಿಷ್ಟ ಜಾತಿಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಕಲ್ಪಿಸಬೇಕೆಂಬ ಎಡಗೈ ಬೇಡಿಕೆ ದಶಕಗಳಷ್ಟು ಹಳೆಯದು.

ರಾಜಕಾರಣದ ಮಾತಿಗೆ ಬಂದರೆ, ಬಲಿಷ್ಠ ಜಾತಿಗಳು ಈ ಎರಡೂ ಒಳಪಂಗಡಗಳನ್ನು ದೂರ ಇರಿಸಲು ಬಯಸುತ್ತವೆ. ಮೀಸಲು ಕ್ಷೇತ್ರದ ಟಿಕೆಟ್‌ಗಳನ್ನು ತಮ್ಮೊಂದಿಗೆ ‘ಸಾಮರಸ್ಯ’ದಿಂದ ವರ್ತಿಸುವ ದಲಿತರಿಗೇ ನೀಡಬೇಕೆಂದು ಬಯಸುತ್ತವೆ. ‘ಸಾಮರಸ್ಯ’ ಪದದ ಅರ್ಥ ಸ್ಪೃಶ್ಯ ದಲಿತ ಜಾತಿಗಳು ಎಂಬುದು ಗುಟ್ಟೇನೂ ಅಲ್ಲ. ಬಿಜೆಪಿಯಲ್ಲಿ ಈ ಆದ್ಯತೆ ಒಡೆದು ಕಾಣುವ ಸಂಗತಿ. ಮತ್ತೊಂದು ಪಕ್ಷದ ಲಿಂಗಾಯತ- ವೀರಶೈವ ನಿಯೋಗ ದಶಕದ ಹಿಂದೆ ದೆಹಲಿಗೆ ಬಂದು ತಮ್ಮ ಪಕ್ಷದ ಮುಖ್ಯಸ್ಥರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ‘ಸಾಮರಸ್ಯ’ದ ಅಂಶವೂ ಸೇರಿತ್ತು!

ಲಿಂಗಾಯತ-ವೀರಶೈವ ಪ್ರತ್ಯೇಕ ಧರ್ಮ ಕುರಿತು ಸರ್ಕಾರದ ಒಳಗಿನಿಂದ ಮತ್ತು ಹೊರಗಿನಿಂದ ವಿರೋಧವಿತ್ತು. ಆದರೂ ಅದನ್ನು ಲೆಕ್ಕಿಸದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೀರ್ಮಾನ ತೆಗೆದುಕೊಂಡಿತು. ಆದರೆ ದಲಿತರ ಒಳಮೀಸಲಾತಿ ಕುರಿತ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯ ಕುರಿತು ರಾಜ್ಯ ಸರ್ಕಾರ ಇದೇ ದಿಟ್ಟತನ ತೋರಿಸದೇ ಹೋಯಿತು ಎಂಬ ಅಸಮಾಧಾನ ಎಡಗೈ ಒಳಪಂಗಡದಲ್ಲಿ ಇದೆ. ಲಿಂಗಾಯತ-ವೀರಶೈವದ ನಿರ್ಧಾರವನ್ನು ಕೇವಲ ಆರು ತಿಂಗಳಲ್ಲಿ ತೆಗೆದುಕೊಳ್ಳುವ ರಾಜ್ಯ ಸರ್ಕಾರ, ಸದಾಶಿವ ಆಯೋಗದ ವರದಿಯನ್ನು ವರ್ಷಗಟ್ಟಲೆ ಜಾರಿಗೆ ತರದೆ ಕಾಲಹರಣ ಮಾಡಿತು ಎಂದು ಸಾತ್ವಿಕ ಆಕ್ರೋಶ ಪ್ರಕಟಿಸುತ್ತಾರೆ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುತ್ತಣ್ಣ ಬೆಣ್ಣೂರು.

ಈ ಗಾಯದ ಮೇಲೆ ಬರೆ ಎಳೆದಂತೆ, ಎಡಗೈ ಒಳಪಂಗಡಕ್ಕೆ ನೀಡುವ ಟಿಕೆಟ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಬದಲು ಕಾಂಗ್ರೆಸ್ ಪಕ್ಷ ಹನ್ನೊಂದರಿಂದ ಒಂಬತ್ತಕ್ಕೆ ಕತ್ತರಿಸಿದೆ. ಎಡಗೈ ಪಂಗಡ ಬಹುತೇಕ ಬಿಜೆಪಿ- ಜೆಡಿಎಸ್ ಬೆಂಬಲಿಗ ಸಮೂಹ ಎಂಬ ಕಾರಣವನ್ನು ಅನಧಿಕೃತವಾಗಿ ಮುಂದೆ ಮಾಡಿದೆ. ಆಯೋಗದ ವರದಿಯ ಶಿಫಾರಸುಗಳು ಜಾರಿ ಆಗದೇ ಇರಲು ಆಳುವ ಪಕ್ಷದ ಬಲಗೈ ಒಳಪಂಗಡದ ನಾಯಕರ ಕೈವಾಡವೇ ಕಾರಣವೆಂಬುದು ಬಹುತೇಕ ಎಡಗೈ ಮುಂದಾಳುಗಳ ನಂಬಿಕೆ. ಸದಾಶಿವ ವರದಿಯನ್ನು ಅಂಗೀಕರಿಸಿ, ವಿಧಾನಸಭೆ ಚುನಾವಣೆಯ ಹೊಸ್ತಿಲಿನಲ್ಲಿ ಎಡಗೈ ಒಳಪಂಗಡವನ್ನು ಇಡಿಯಾಗಿ ಒಲಿಸಿಕೊಳ್ಳುವ ಬಂಗಾರದಂತಹ ಅವಕಾಶವೊಂದನ್ನು ಕಾಂಗ್ರೆಸ್ ಕಳೆದುಕೊಂಡಿತು ಎನ್ನುವವರಿದ್ದಾರೆ. ಬಂಡಾಯ ಸಾಹಿತಿ ಎಲ್.ಹನುಮಂತಯ್ಯ ಅವರನ್ನು ಕಾಂಗ್ರೆಸ್ ಪಕ್ಷ ರಾಜ್ಯಸಭೆಗೆ ಆರಿಸಿ ಕಳುಹಿಸಿದ್ದು, ಆದಿ ಜಾಂಬವ ಅಭಿವೃದ್ಧಿ ನಿಗಮ ಮಾಡಿದ್ದು ಹೌದು. ಆದರೆ,
ಈ ಸಣ್ಣ ಸಮಾಧಾನಕರ ನಡೆಯು ಅಸಮಾಧಾನದ ಕುದಿಯನ್ನು ಆರಿಸಲಾರದು. ಮೊನ್ನೆ ಮೊನ್ನೆ ವಿಜಯಪುರದಲ್ಲಿ ಈ ಪಂಗಡದ ಉತ್ತರ ಕರ್ನಾಟಕದ ಮುಂದಾಳುಗಳನ್ನು ಕರೆದು ಮುಖ್ಯಮಂತ್ರಿ ಮಾತುಕತೆ ನಡೆಸಿದರು. ಮುಂಬರುವ ದಿನಗಳಲ್ಲಿ ಅನ್ಯಾಯ ಸರಿಪಡಿಸುತ್ತೇವೆ ಎಂಬ ಅವರ ಆಶ್ವಾಸನೆ ಸಮಾಧಾನ ತಂದಿಲ್ಲ.

ಈ ವಿಷಾದದ ಕತೆಯನ್ನು ಉತ್ತರ ಕರ್ನಾಟಕದ ಆ ಜನಾಂಗದ ನೆಲಮಟ್ಟದ ರಾಜಕೀಯ ಕಾರ್ಯಕರ್ತನೊಬ್ಬನ ಬಾಯಿಂದಲೇ ನೇರವಾಗಿ ಕೇಳುವುದು ಸಮಂಜಸ. (17 ವರ್ಷಗಳಿಂದ ಈ ಆಂದೋಲನದಲ್ಲಿದ್ದು, ಇದೀಗ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಬೆನ್ನು ಮಾಡಿರುವ ಈತ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಯೂ ಹೌದು. ಸ್ಥಳಾಭಾವದ ಕಾರಣ ಈ ಕತೆಯನ್ನು ಚುಟುಕಾಗಿಸಲಾಗಿದೆ):

-ಹಲವು ಅಡೆತಡೆ, ಹಿನ್ನಡೆಗಳ ನಂತರ ಒಳಮೀಸಲಾತಿ ಕುರಿತ ವರದಿ ನೀಡಲು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ಸಮೀಕ್ಷೆಯ ಕೆಲಸ ಆರಂಭಿಸಿದ್ದು 2010ರಲ್ಲಿ. ವರದಿ ಸಲ್ಲಿಸಿದ್ದು 2013ರಲ್ಲಿ. ಅದೇ ವರ್ಷ ಉತ್ತರ ಕರ್ನಾಟಕದ ಎಡಗೈ ಒಳಪಂಗಡದ ಜನ ಬೆಳಗಾವಿ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತಾರೆ. ಲಾಠಿ ಚಾರ್ಜ್ ನಡೆಯುತ್ತದೆ. ಅಂದಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸದನದಲ್ಲಿ ಈ ವಿಷಯ ಕುರಿತು ದನಿ ಏರಿಸಿ ಮಾತಾಡುತ್ತಾರೆ. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮೊದಲ ಅಧಿವೇಶನದಲ್ಲಿಯೇ ವರದಿ ಅಂಗೀಕರಿಸು
ವುದಾಗಿ ಸಾರುತ್ತಾರೆ. 2013ರ ಚುನಾವಣೆಯಲ್ಲಿ ಎಡಗೈ ಪಂಗಡ ಕಾಂಗ್ರೆಸ್ಸಿಗೂ ಬೆಂಬಲ ನೀಡುತ್ತದೆ. ಆದರೆ ಸಿದ್ದರಾಮಯ್ಯ ತಮ್ಮ ಮಾತು ನಡೆಸಿಕೊಡಲಿಲ್ಲ. ವರದಿಯನ್ನು ಸಚಿವ ಸಂಪುಟ ಸಭೆಗೇ ತರಲಿಲ್ಲ. ವೀರಶೈವ-ಲಿಂಗಾಯತ ವಿಷಯದಲ್ಲಿ ತೋರಿದ ಇಚ್ಛಾಶಕ್ತಿಯನ್ನು ಎಡಗೈ ಒಳಪಂಗಡದ ವಿಚಾರದಲ್ಲಿ ಪ್ರದರ್ಶಿಸಲಿಲ್ಲ.

ಬಲಗೈ ಒಳಪಂಗಡಕ್ಕೆ ಶೇ 5, ಎಡಗೈಗೆ ಶೇ 6, ಬೋವಿ, ಲಂಬಾಣಿ, ಕೊರಮ-ಕೊರಚ ಜನಾಂಗಗಳಿಗೆ ತಲಾ ಶೇ 1, ಅಲೆಮಾರಿ ಅಸ್ಪೃಶ್ಯ ಜಾತಿಗಳಿಗೆ ಶೇ 1ರಷ್ಟು ಒಳಮೀಸಲಾತಿಯನ್ನು ಆಯೋಗ ಕಲ್ಪಿಸಿತ್ತು. ಎಡಗೈ ಒಳಪಂಗಡ ರಾಜಿ ಸೂತ್ರವಾಗಿ ಶೇ 0.5ರಷ್ಟು ಮೀಸಲಾತಿಯನ್ನು ಬಲಗೈಗೆ ಬಿಟ್ಟುಕೊಡಲು ಒಪ್ಪಿ ತ್ಯಾಗದ ಮನೋಭಾವ ತೋರಿತು. ಆದರೂ ಈ ವರದಿಯನ್ನು ಅಂಗೀಕಾರ- ತಿರಸ್ಕಾರ ಎರಡೂ ಇಲ್ಲದೆ ಗೊಂದಲದಲ್ಲಿ ಇಡಲಾಯಿತು. ಸೋದರ ಪರಿಶಿಷ್ಟ ಜಾತಿಗಳು ಎಡಗೈ ಕುರಿತು ತಪ್ಪು ತಿಳಿದುಕೊಂಡವು. ರಾಹುಲ್ ಗಾಂಧಿಯವರು ನೀಡಿದ ಭರವಸೆಯನ್ನು ನಿರ್ಲಕ್ಷಿಸಲಾಯಿತು. ಕೂಡಲ ಸಂಗಮದಿಂದ ಬೆಂಗಳೂರಿಗೆ ಎಡಗೈ ಪಂಗಡದ ಪಾದಯಾತ್ರೆ ನಡೆಯುತ್ತದೆ. ಫ್ರೀಡಂ ಪಾರ್ಕಿನಲ್ಲಿ ಲಕ್ಷಾಂತರ ಜನ ಸೇರುತ್ತಾರೆ. ಆಗ ಮಾತುಕತೆಗೆ ಕರೆಯುವ ಸರ್ಕಾರ ಯಾವ ಕ್ರಮವನ್ನೂ ಜರುಗಿಸುವುದಿಲ್ಲ. ಬೋವಿ- ಲಂಬಾಣಿ ಶಾಸಕರು ಮತ್ತು ಬಲಗೈ ಒಳಪಂಗಡದ ಮುಂದಾಳುಗಳ ಒತ್ತಡಕ್ಕೆ ತಲೆ ಬಾಗಿತು ಸಿದ್ದರಾಮಯ್ಯ ನೇತೃತ್ವದ ಸರ್ಕಾರ. ದಲಿತ ಮುಖ್ಯಮಂತ್ರಿ ವಿಷಯ ಚಿತ್ರದುರ್ಗ ತಲುಪುವಷ್ಟರಲ್ಲಿ ತುಂಡಾಯಿತು. ಆಯೋಗದ ಶಿಫಾರಸುಗಳು ಅಂಗೀಕಾರ ಆಗದಂತೆ ತಡೆಯುವವರನ್ನು ಹೇಗೆ ನಂಬುವುದು?

120 ವಿಧಾನಸಭಾ ಕ್ಷೇತ್ರಗಳಲ್ಲಿ ಎಡಗೈ ಒಳಪಂಗಡದ ಜನಸಂಖ್ಯೆ ಹೆಚ್ಚಾಗಿದೆ. ಕಲಬುರ್ಗಿ ಮತ್ತು ಬೆಂಗಳೂರು ವಿಭಾಗದಲ್ಲಿ ಎಡಗೈ ಒಳಪಂಗಡಕ್ಕೆ ಏಳು ಟಿಕೆಟ್‌ಗಳನ್ನು ನೀಡಲಾಗಿದೆ. ಆದರೆ ಬೆಳಗಾವಿ ಮತ್ತು ಮೈಸೂರು ವಿಭಾಗದಲ್ಲಿ ಅನ್ಯಾಯ ಮಾಡಲಾಗಿದೆ. ಅನೂಚಾನವಾಗಿ ಎಡಗೈಗೆ ದೊರೆಯುತ್ತಿದ್ದ ಮುಧೋಳ ಮತ್ತು ರಾಯಭಾಗ ಕ್ಷೇತ್ರಗಳಲ್ಲಿ ಕೈ ಕೊಡಲಾಗಿದೆ. ಮುಧೋಳದಲ್ಲಿ ಬಂಡಿವಡ್ಡರ ಎಂಬ ಬೋವಿ ಅಭ್ಯರ್ಥಿಗೆ ಟಿಕೆಟ್ ನೀಡಿರುವುದು ಬಿಜೆಪಿಯೊಂದಿಗೆ ಒಳಒಪ್ಪಂದದ ರಾಜಕೀಯ ನಡೆದಿರುವುದರ ಕುರುಹು. ಎಡಗೈ ಒಳಪಂಗಡದ ಐದು ಮಂದಿ ಟಿಕೆಟ್ ಕೇಳಿದ್ದರೂ ಪರಿಗಣಿಸಿಲ್ಲ. ಇಡೀ ಉತ್ತರ ಕರ್ನಾಟಕದಲ್ಲಿ ಶಿರಹಟ್ಟಿ ಮತ್ತು ನಾಗಠಾಣದಲ್ಲಿ ಉಪಜಾತಿಗಳಿಗೆ ಎರಡು ಟಿಕೆಟ್ ಕೊಟ್ಟು ಕೈ ತೊಳೆದುಕೊಳ್ಳಲಾಗಿದೆ.

‘ಜಗಲಿ ಕಟ್ಟಾವ್ರು ಬೇಕೋ ಚಪ್ಲಿ ಹೊಲಿಯೋರು ಬೇಕೋ?’

‘ಉದಾಹರಣೆಗೆ, ರಾಯಚೂರು ಜಿಲ್ಲೆ ಲಿಂಗಸುಗೂರು ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್- ಬಿಜೆಪಿ- ಜೆಡಿಎಸ್‌ ಮೂರೂ ಪಕ್ಷಗಳು ಬೋವಿಗಳಿಗೇ ಟಿಕೆಟ್ ಕೊಟ್ಟಿವೆ. ಮಾದಿಗರು 36 ಸಾವಿರವಿದ್ದರೆ ಬೋವಿಗಳ ಸಂಖ್ಯೆ ನಾಲ್ಕು ಸಾವಿರ. ಆರ್ಥಿಕವಾಗಿ ಪ್ರಬಲರಾಗಿರುವ ಕಾರಣ ದುಡ್ಡು ಹಾಕಿ ಗೆದ್ದು ಬರುತ್ತಾರೆಂಬ ನಿರೀಕ್ಷೆ. ಕೊಪ್ಪಳ ಜಿಲ್ಲೆಯ ಕನಕಗಿರಿ ಮೀಸಲು ಕ್ಷೇತ್ರದಲ್ಲೂ ಕಾಂಗ್ರೆಸ್ಸಿನದು ಇದೇ ನಡೆ. ಎಡ ಒಳಪಂಗಡದ ಸಂಖ್ಯೆಯೇ ಹೆಚ್ಚು. ಬೋವಿ ಜನಾಂಗಕ್ಕೆ ಸೇರಿದ ಶಿವರಾಜ ತಂಗಡಗಿಯವರನ್ನು ತನ್ನ ಹುರಿಯಾಳನ್ನಾಗಿ ಹೂಡಿದೆ ಕಾಂಗ್ರೆಸ್ ಪಕ್ಷ. ಆದರೆ ಬಿಜೆಪಿ ಎಡ ಒಳಪಂಗಡಕ್ಕೆ ಟಿಕೆಟ್ ನೀಡಿದೆ. ಜಗಲಿ ಕಟ್ಟಾವರು ಬೇಕೋ, ಚಪ್ಲಿ ಹೊಲಿಯಾವ್ರು ಬೇಕೋ (ಸ್ಪೃಶ್ಯರು ಬೇಕೋ ಅಸ್ಪೃಶ್ಯರು ಬೇಕೋ) ಎಂದು ಅವಮಾನಿಸಿ ಮತ ಕೇಳುತ್ತಾರೆ ಕಾಂಗ್ರೆಸ್ ಅಭ್ಯರ್ಥಿ. ಮೇಲ್ಜಾತಿಗಳ ಮನ ಒಲಿಸಿಕೊಳ್ಳುವುದು ಈ ಅವಮಾನದ ಹಿಂದಿನ ಹುನ್ನಾರ. ಇಂತಹ ಸಮಯದಲ್ಲಿ ಬಿಜೆಪಿಗೆ ಮತ ಹಾಕದೆ ಇನ್ನೇನು ಮಾಡೋಣ ಎಂಬುದು ಎಡಗೈ ಪ್ರಶ್ನೆ.ಕಾಂಗ್ರೆಸ್ಸಿನ ದೊಡ್ಡವರಿಗೆ ಇದೆಲ್ಲ ಗೊತ್ತಿದೆ. ಆದರೆ ಸ್ಪೃಶ್ಯ ದಲಿತರನ್ನು ಬಳಸಿಕೊಂಡು ನಮ್ಮನ್ನು ಹಣಿಯುವ ತಂತ್ರ ಇದು ಎಂದು ದೂರುತ್ತಾರೆ.

ನಗರ ಪ್ರದೇಶಗಳಿಂದ ದೂರವಿರುವ ಹಳ್ಳಿಗಾಡಿನಲ್ಲಿ ಎಡ- ಬಲ ಎರಡೂ ಅಸ್ಪೃಶ್ಯ ಪಂಗಡಗಳು ಊರ ಹೊರಗಿದ್ದುಕೊಂಡೇ ಬದುಕುತ್ತಿವೆ. ಊರಿನ ದೇವಸ್ಥಾನ, ಬಾವಿ, ಹೋಟೆಲ್, ಕ್ಷೌರದಂಗಡಿಗೆ ಪ್ರವೇಶ ಇಲ್ಲ. ಈ ನೋವು ಇರದ ಲಂಬಾಣಿ, ಬೋವಿಗಳು ನಮ್ಮನ್ನು ಅವಮಾನಿಸಿ ರಾಜಕಾರಣ ಮಾಡಲು, ನಮ್ಮವರೇ ಆದ ಬಲಗೈ ತಲೆಯಾಳುಗಳು ಪ್ರೋತ್ಸಾಹಿಸುತ್ತಾರೆ. ನಾವು ಒಳಮೀಸಲಾತಿ ಕೇಳುವುದರಲ್ಲಿ ತಪ್ಪೇನಿದೆ?

ಕೊಪ್ಪಳ, ರಾಯಚೂರು, ಬಳ್ಳಾರಿಯಲ್ಲಿ ಒಬ್ಬ ಮಾದಿಗನಿಗೂ ಟಿಕೆಟ್ ಕೊಟ್ಟಿಲ್ಲ. ರಾಯಚೂರು, ಕೊಪ್ಪಳ ಎರಡೂ ಕಡೆ ಬೋವಿಗಳಿಗೆ ಕೊಡಲಾಗಿದೆ. ಎಡಗೈ ಪಂಗಡಗಳಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ (ಹಣವನ್ನು ನೀರಿನಂತೆ ಖರ್ಚು ಮಾಡುವವರು). ರಾಜ್ಯದ ಪರಿಶಿಷ್ಟ ಜಾತಿಗಳ ಪೈಕಿ ಎಡಗೈ ಒಳಪಂಗಡದ್ದೇ ಅತಿ ಹೆಚ್ಚಿನ ಜನಸಂಖ್ಯೆ (ಸದಾಶಿವ ಆಯೋಗದ ಪ್ರಕಾರ 38 ಲಕ್ಷ). ನಂತರದ ಸ್ಥಾನ ಬಲಗೈ ಒಳಪಂಗಡದ್ದು (32 ಲಕ್ಷ). ಒಟ್ಟು 36 ಮೀಸಲು ಕ್ಷೇತ್ರಗಳ ಪೈಕಿ ಎಡಗೈಗೆ ಸಿಕ್ಕಿದ್ದು ಒಂಬತ್ತು, ಬಲಗೈಗೆ 17 ಹಾಗೂ ಎಡಗೈ ಪಂಗಡಕ್ಕೆ ಹೋಲಿಸಿದರೆ ಕಡಿಮೆ ಜನಸಂಖ್ಯೆಯುಳ್ಳ ಲಂಬಾಣಿ ಮತ್ತು ಬೋವಿಗಳಿಗೆ ತಲಾ ಐದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT