ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗುರುತು’ ಸಂಘಟನೆಗೆ ಒಂದು ವರ್ಷ ಪೂರ್ಣ

ಚೊಚ್ಚಲ ಕೃತಿ ಲೋಕಾರ್ಪಣೆ, ಹಲವು ವಿಷಯಗಳ ಚಿಂತನ– ಮಂಥನ
Last Updated 10 ಜೂನ್ 2019, 16:47 IST
ಅಕ್ಷರ ಗಾತ್ರ

ಮೈಸೂರು: ಒಂದು ವರ್ಷ ಪೂರ್ಣಗೊಂಡ ಸಂಭ್ರಮದಲ್ಲಿ ‘ಗುರುತು’ ಸಂಘಟನೆ ಒಂದು ವರ್ಷದಲ್ಲಿ ತಾನು ನಡೆಸಿದ 52 ಚರ್ಚಾಕೂಟಗಳ ಸಾರವುಳ್ಳ ‘ಗುರುತು’ ಎಂಬ ಪುಸ್ತಕವನ್ನು ಸೋಮವಾರ ಬಿಡುಗಡೆ ಮಾಡಿತು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಅರವಿಂದ ಮಾಲಗತ್ತಿ ಅವರು ಪುಸ್ತಕವನ್ನು ಬಿಡುಗಡೆ ಮಾಡುವ ಮೂಲಕ ಸಂಘಟನೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಒಂದು ವರ್ಷದಲ್ಲಿ 52 ಕಾರ್ಯಕ್ರಮಗಳನ್ನು ಮಾಡಿರುವ ಸಂಘಟನೆಯು ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಸಮಾಜದಲ್ಲಿ ವಿಚಾರದ ಕಿಡಿಯನ್ನು ಹೊತ್ತಿಸಲಿ ಎಂದು ಆಶಿಸಿದರು.

ತಾಯಿ ಬೇರಿಗಿಂತ ಸಣ್ಣಸಣ್ಣ ಉಪಬೇರುಗಳೇ ಮುಖ್ಯ. ‘ಗುರುತು’ ಸಂಘಟನೆಯು ಸಹ ಸಮಾಜದಲ್ಲಿ ಉಪಬೇರಿನಂತೆ ಕಾರ್ಯನಿರ್ವಹಿಸುತ್ತಿದೆ. ಇದೊಂದು ರೀತಿಯ ಸಾಮಾಜಿಕ ಶಾಲೆ ಎಂದು ಅವರು ವ್ಯಾಖ್ಯಾನಿಸಿದರು.

‘ಗುರುತು’ ಪುಸ್ತಕದಲ್ಲಿ ಸಣ್ಣ ಸಣ್ಣ ಲೇಖನಗಳಿವೆ. ಇವು ಗಾತ್ರದಲ್ಲಿ ಸಣ್ಣದಾದರೂ ಬಲು ಮಹತ್ವವಾದ ಲೇಖನಗಳಾಗಿವೆ. ಇಂದಿನ ಕಾಲಕ್ಕೆ ಇಂತಹ ಪುಟ್ಟ ಲೇಖನಗಳ ಅಗತ್ಯ ಇದೆ ಎಂದು ಅವರು ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘ಮೈಸೂರು ವಿಶ್ವವಿದ್ಯಾನಿಲಯ ಹಿಂದೆ ಬಹಳ ದೊಡ್ಡ ವಿಚಾರ ಕೇಂದ್ರವಾಗಿತ್ತು. ಅಲ್ಲಿನ ಗಾಂಧಿ ಭವನ ಮುಕ್ತವಾಗಿತ್ತು. ಅಲ್ಲಿ ವಿಚಾರವಾದಿ ವೇದಿಕೆಗಳು, ವಿದ್ಯಾರ್ಥಿ ವಿಚಾರ ವೇದಿಕೆಗಳು ಸ್ಥಾಪನೆಗೊಂಡು ಚರ್ಚೆಗಳು ನಡೆಯುತ್ತಿದ್ದವು. ಆದರೆ, ಈಗ ಈ ಪರಿಸ್ಥಿತಿ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಸಾಹಿತಿ ಬನ್ನೂರು ಕೆ.ರಾಜು ಮಾತನಾಡಿ, ‘ಗುರುತು’ ಬಳಗಕ್ಕೆ ಅಧ್ಯಕ್ಷರು, ಕಾರ್ಯದರ್ಶಿಗಳು ಎಂದಿಲ್ಲ. ಎಲ್ಲರೂ ಸಮಾನ ಮನಸ್ಕರು. ಒಳ್ಳೆಯ ಉದ್ದೇಶದಿಂದ ಯಾರು ಬೇಕಾದರೂ ಬಳಗ ಸೇರಬಹುದು’ ಎಂದು ಹೇಳಿದರು.

ಇದಕ್ಕೂ ಮುನ್ನ ಸಾಹಿತಿ ಗಿರೀಶ್‌ಕಾರ್ನಾಡ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪ್ರಕಾಶಕ ಸಂಸ್ಕೃತಿ ಸುಬ್ರಹ್ಮಣ್ಯ, ಗುರುತು ಬಳಗದ ವಿನೋದ್ ಮಹದೇವಪುರ, ನಂಜುಂಡಸ್ವಾಮಿ, ರವಿ, ಚಂದ್ರಶೇಖರ್, ಯತಿರಾಜ್, ವರಹಳ್ಳಿ ಆನಂದ, ಎನ್.ಪುನೀತ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT