ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಆರಂಭದ ಬಗ್ಗೆ ನಡೆಯದ ಚರ್ಚೆ: ಎಚ್‌.ವಿಶ್ವನಾಥ್ ಬೇಸರ

Last Updated 18 ಅಕ್ಟೋಬರ್ 2020, 14:19 IST
ಅಕ್ಷರ ಗಾತ್ರ

ಮೈಸೂರು: ‘ಶಾಲೆಗಳನ್ನು ಆರಂಭಿಸುವುದಾದರೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಯಾವ್ಯಾವು ಎಂಬುದರ ಕುರಿತು ಚರ್ಚೆ ನಡೆಸಬೇಕಿದೆ. ಆದರೆ, ದುರಾದೃಷ್ಟವಶಾತ್ ದೇಶದಲ್ಲಿ ಈ ರೀತಿಯ ಚರ್ಚೆಗಳೇ ನಡೆಯುತ್ತಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಜ್ಞಾನವರ್ಧಿನಿ ಎಜುಕೇಷನಲ್ ಟ್ರಸ್ಟ್ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಶಿಕ್ಷಣ ತಜ್ಞ ಡಾ.ಪ್ರಸನ್ನ ಹೆಗಡೆ ರಚಿಸಿರುವ ‘ಕೊರೊನಾ ಜೊತೆಗೆ ಶಾಲಾ ಬದುಕು’ ಕೃತಿಯನ್ನು ಭಾನುವಾರ ಬಿಡುಗಡೆ ಮಾಡಿದ ಅವರು ಮಾತನಾಡಿದರು.

‘ತರಗತಿಯಲ್ಲಿ ಮಕ್ಕಳಿಗೆ ದೊರೆಯುವ ಶಿಕ್ಷಣಕ್ಕೂ, ಆನ್‌ಲೈನ್ ಶಿಕ್ಷಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಒಂದು ವೇಳೆ ಆನ್‌ಲೈನ್ ಶಿಕ್ಷಣ ಪ್ರಾರಂಭಿಸಿದರೂ, ಎಲ್ಲ ಮಕ್ಕಳಿಗೂ ಶಿಕ್ಷಣ ದೊರೆಯುವುದಿಲ್ಲ’ ಎಂದರು.

‘ದೇಶ–ರಾಜ್ಯದಲ್ಲಿ ಶಾಲೆಗಳ ಆರಂಭದ ವಿಚಾರಕ್ಕೆ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸುವುದು, ನಂತರ ಹಿಂಪಡೆಯುವುದು ಸರಿಯಲ್ಲ. ಸುತ್ತೋಲೆ ಹೊರಡಿಸುವ ಮುನ್ನವೇ ಚರ್ಚೆ ನಡೆಸಬೇಕು. ಯೂರೋಪ್‌ನ ಹಲವು ರಾಷ್ಟ್ರಗಳಲ್ಲಿ ಈ ಬಗ್ಗೆ ಅರ್ಥಪೂರ್ಣ ಚರ್ಚೆಗಳು ನಡೆದಿದೆ. ಆದರೆ, ದುರಾದೃಷ್ಟವಶಾತ್ ನಮ್ಮಲ್ಲಿ ಆ ರೀತಿಯ ಚರ್ಚೆಗಳು ನಡೆಯುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕೊರೊನಾದಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಇದನ್ನು ಹೋಗಲಾಡಿಸುವ ಪ್ರಯತ್ನ ಮಾಡಬೇಕು. ಭಯ ಪಡುವ ಬದಲು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಜನರು ಹಾಗೂ ಸರ್ಕಾರ ವಿವೇಚನೆಯಿಂದ ವರ್ತಿಸಬೇಕು’ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಡಾ.ಪಾಂಡುರಂಗ, ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಮೊರಬದ ಮಲ್ಲಿಕಾರ್ಜುನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಶಿಕ್ಷಣ ತಜ್ಞ ಡಾ.ಪ್ರಸನ್ನ ಹೆಗಡೆ ಮತ್ತಿತರರಿದ್ದರು.

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ
‘ಸಿದ್ದರಾಮಯ್ಯ ತಮ್ಮ ಅಧಿಕಾರದ ಅವಧಿಯಲ್ಲಿ ಚೆನ್ನಾಗಿ ಕೆಲಸ ಮಾಡಿದ್ದರೆ ಚಾಮುಂಡೇಶ್ವರಿಯಲ್ಲಿ ಏಕೆ ಸೋಲುತ್ತಿದ್ದರು? ಮತ್ತೆ ಕಾಂಗ್ರೆಸ್‌ ಸರ್ಕಾರ ಏಕೆ ಅಧಿಕಾರಕ್ಕೆ ಬರಲಿಲ್ಲ?’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್.ವಿಶ್ವನಾಥ್‌ ತಿರುಗೇಟು ನೀಡಿದರು.

ಪ್ರವಾಹ ನಿರ್ವಹಣೆ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಲೇವಡಿ ಮಾಡಿದ್ದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್‌ ಭಾನುವಾರ ಇಲ್ಲಿ ಗುಡುಗಿದರು.

‘ಜನರು ನಾವಾಡುವ ಭಾಷೆಯನ್ನೂ ಕೂಡ ಗಮನಿಸುತ್ತಿರುತ್ತಾರೆ. ವಿಧಾನಸಭೆಯ ವಿರೋಧ ‍ಪಕ್ಷದ ನಾಯಕರಾಗಿ ಬಳಸುವ ಪದಗಳ ಮೇಲೆ ಎಚ್ಚರಿಕೆ ಇರಬೇಕು. ವಿರೋಧ ಪಕ್ಷಗಳು ಎಷ್ಟು ಬಲ‌ವಾಗಿರುತ್ತವೆಯೋ ? ಸರ್ಕಾರಗಳು ಸಹ ಅಷ್ಟೇ ಬಲವಾಗಿರುತ್ತವೆ. ‘ದಮ್ಮು ಇದೇಯೇನ್ರೀ ಅವನಿಗೆ’ ಅನ್ನುವುದು ಒಳ್ಳೆ ಭಾಷೆಯಾ ?’ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT