ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಹಗರಣ | ಪ್ರಾದೇಶಿಕ ಆಯುಕ್ತರು– ಕಳಂಕಿತರ ನಡುವೆ ಒಳ ಒಪ್ಪಂದ: ವಿಶ್ವನಾಥ್‌ ಆರೋಪ

Last Updated 11 ಜೂನ್ 2021, 7:36 IST
ಅಕ್ಷರ ಗಾತ್ರ

ಮೈಸೂರು: ‘ಭೂ ಹಗರಣದ ಆರೋಪ ಎದುರಿಸುತ್ತಿರುವ ಕಳಂಕಿತರು ಮತ್ತು ಮೈಸೂರಿನ ಪ್ರಾದೇಶಿಕ ಆಯುಕ್ತರ (ಆರ್‌ಸಿ) ನಡುವೆ ಒಳಒಪ್ಪಂದ ಆಗಿದ್ದು, ಎಲ್ಲ ಹಗರಣಗಳನ್ನೂ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ’ ಎಂದು ವಿಧಾನ ಪರಿಷತ್ ಸದಸ್ಯ ಎಚ್‌.ವಿಶ್ವನಾಥ್‌ ಆರೋಪಿಸಿದ್ದಾರೆ.

‘ಶಾಸಕ ಸಾ.ರಾ.ಮಹೇಶ್‌ ರಾಜಕಾಲುವೆ ಒತ್ತುವರಿ ಮಾಡಿ ಕಲ್ಯಾಣಮಂಟಪ ನಿರ್ಮಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರು ತನಿಖೆಗೆ ತಂಡವನ್ನು ರಚಿಸಿದ್ದಾರೆ. ಅವರು ಯಾವ ರೀತಿಯ ವರದಿ ನೀಡುವರು ಎಂಬುದು ನಮಗೆ ಗೊತ್ತಿದೆ. ಒಳ ಒಪ್ಪಂದ ನಡೆದು ವರದಿ ಈಗಲೇ ಸಿದ್ಧವಾಗಿದೆ. ಸೋಮವಾರ ವರದಿ ಸಲ್ಲಿಸಲಿದ್ದಾರೆ. ಆ ವರದಿಯು ಕಳಂಕಿತರಿಗೆ ಕ್ಲೀನ್‌ಚಿಟ್‌ ನೀಡಲಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಆರ್‌ಸಿ ಕಚೇರಿ ಮುಂದೆ ಗುರುವಾರ ನಡೆದದ್ದು ಹೈಡ್ರಾಮಾ ಅಲ್ಲದೆ ಬೇರೇನೂ ಅಲ್ಲ. ಇಂತಹ ಸಂದರ್ಭದಲ್ಲಿ ಪ್ರಾದೇಶಿಕ ಆಯುಕ್ತರು ಮನವಿ ಸ್ವೀಕರಿಸಿ ಪರಿಶೀಲನೆ ನಡೆಸುತ್ತೇನೆ ಎನ್ನಬೇಕಿತ್ತು. ಆದರೆ ಸ್ಥಳದಲ್ಲೇ ಸಮಿತಿ ರಚನೆ ಮಾಡಿ ಮೂರು ದಿನಗಳಲ್ಲಿ ತನಿಖೆ ಮಾಡಿಸುತ್ತೇನೆ ಎಂದಿದ್ದಾರೆ. ಅವರ ಕಾರ್ಯವೈಖರಿ ನೋಡಿ ಮೈಸೂರಿನ ಜನ ಬೆರಗಾಗಿದ್ದಾರೆ. ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಂಡಿದ್ದಾರೆ’ ಎಂದು ಅನುಮಾನ ವ್ಯಕ್ತಪಡಿಸಿದರು.

‘ಸಾ.ರಾ.ಮಹೇಶ್‌ ರಾಜಕಾಲುವೆ ಒತ್ತುವರಿ ಮಾಡಿ ಸಾ.ರಾ.ಚೌಲ್ಟ್ರಿ ನಿರ್ಮಿಸಿದ್ದಾರೆ’ ಎಂದು ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆರೋಪಿಸಿದ್ದರು. ಇದನ್ನು ಖಂಡಿಸಿ ಸಾ.ರಾ.ಮಹೇಶ್‌, ಗುರುವಾರ ತಮ್ಮ ಬೆಂಬಲಿಗರೊಂದಿಗೆ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಧರಣಿ ನಡೆಸಿದ್ದರು.

ರೋಹಿಣಿ ಸಿಂಧೂರಿ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆಗೆ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್‌ ಅವರು ಏಳು ಮಂದಿಯ ತನಿಖಾ ತಂಡ ರಚಿಸಿದ್ದರು. ಜೂನ್ 13ರ ಒಳಗಾಗಿ ವರದಿ ಸಲ್ಲಿಸುವಂತೆಯೂ ಆದೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT