ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಹುದ್ದೆಗೆ ರಾಜೀನಾಮೆ: ಯಡಿಯೂರಪ್ಪ ಹೇಳಿಕೆ ಸ್ವಾಗತಿಸುತ್ತೇನೆ ಎಂದ ವಿಶ್ವನಾಥ್

Last Updated 6 ಜೂನ್ 2021, 9:47 IST
ಅಕ್ಷರ ಗಾತ್ರ

ಮೈಸೂರು: ‘ಹೈಕಮಾಂಡ್‌ ಹೇಳುವಾಗ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡುತ್ತೇನೆ ಎನ್ನುವ ಮೂಲಕ ಬಿ.ಎಸ್‌.ಯಡಿಯೂರಪ್ಪ ಬಹಳ ದೊಡ್ಡ ಮಾತನ್ನಾಡಿದ್ದಾರೆ. ಅವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ’ ಎಂದು ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ತಿಳಿಸಿದರು.

ಭಾನುವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿ, ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ಎಲ್ಲವೂ ಹೈಕಮಾಂಡ್‌ ತೀರ್ಮಾನದಂತೆ ನಡೆಯುತ್ತದೆ. ದೆಹಲಿಯ ನಾಯಕರು ಹೇಳಿದಂತೆ ನಡೆಯುವುದು ಮೊದಲಿಂದಲೂ ಇರುವ ಪರಿಪಾಠ. ನಾನು ಕೂಡಾ ದೆಹಲಿ ನಾಯಕರ ಮಾತನ್ನು ಮೀರುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ. ರಾಜ್ಯದ ಆಡಳಿತ, ಜನರ ಹಿತದೃಷ್ಟಿಯಿಂದ ಅಧಿಕಾರ ಬಿಟ್ಟುಕೊಡಲು ಸಿದ್ದವಿದ್ದೇನೆ ಎಂದಿರುವುದನ್ನು ನಾಡಿನ ಜನರೂ ಸ್ವಾಗತಿಸುತ್ತಾರೆ’ ಎಂದರು.

‘ನಾಯಕತ್ವ ಬದಲಾವಣೆ ಬಗ್ಗೆ ಯಾರೋ ಮಾತನಾಡಿದ್ದಾರೆ, ‘ಸೈನಿಕ’ ದೆಹಲಿಗೆ ಹೋಗಿ ಯಾರನ್ನೋ ಭೇಟಿಯಾದ ಎಂಬ ಕಾರಣಕ್ಕೆ ಅವರು ರಾಜೀನಾಮೆ ಕೊಡುತ್ತಿಲ್ಲ. ಬಿಜೆಪಿಯಲ್ಲಿ ವಯಸ್ಸಿನ ಲಕ್ಷ್ಮಣ ರೇಖೆ ಇದೆ. 75 ವರ್ಷ ದಾಟಿದವರಿಗೆ ಯಾವುದೇ ಹುದ್ದೆ ಬೇಡ ಎಂಬ ನಿಯಮ ಇದೆ. ಯಡಿಯೂರಪ್ಪ ಅವರಿಗೆ ವಿನಾಯಿತಿ ಕೊಟ್ಟಿದ್ದರು. ಆದರೆ ವಯಸ್ಸು, ಆರೋಗ್ಯ ಎಲ್ಲವೂ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಮನವರಿಕೆ ಅವರಿಗೆ ಆಗಿದೆ. ಅರ್‌ಎಸ್‌ಎಸ್‌ ಕೂಡಾ ಅವರ ಮನವೊಲಿಸಿರಬಹುದು’ ಎಂದು ತಿಳಿಸಿದರು.

ವೀರಶೈವ ಸಮುದಾಯಕ್ಕೆ ಅವಕಾಶ ನೀಡಲಿ: ರಾಜ್ಯದಲ್ಲಿ ನನಗೆ ಪರ್ಯಾಯ ನಾಯಕರು ಇದ್ದಾರೆ ಎಂದು ಹೇಳಿರುವುದು ಕೂಡಾ ಯಡಿಯೂರಪ್ಪ ಅವರ ದೊಡ್ಡ ಮಾತು. ಮುಖ್ಯಮಂತ್ರಿ ಸ್ಥಾನ ಅಲಂಕರಿಸಲು ಸಮರ್ಥರಾದವರು ಬಿಜೆಪಿಯಲ್ಲಿ ಇದ್ದಾರೆ ಎಂದಿದ್ದಾರೆ. ಹೊಸ ಮುಖ್ಯಮಂತ್ರಿ ಮಾಡುವಾಗ ವೀರಶೈವ ಸಮುದಾಯಕ್ಕೆ ಆದ್ಯತೆ ನೀಡಲಿ. ಸಾಕಷ್ಟು ಅನುಭವ ಹೊಂದಿರುವ ಮುರುಗೇಶ ನಿರಾಣಿ, ನೇರ ಮಾತಿಗೆ ಹೆಸರುವಾಸಿಯಾದ ಬಸನಗೌಡ ಪಾಟೀಲ ಯತ್ನಾಳ್ ಅಂತಹವರಿಗೆ ಅವಕಾಶ ಕೊಡಬೇಕು ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT