ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌1ಎನ್‌1:ಜಿಲ್ಲೆಯಲ್ಲಿ 117 ಪ್ರಕರಣ

ಮೈಸೂರು ನಗರದಲ್ಲಿ ಅಧಿಕ; ಚಿಕಿತ್ಸೆಗೆ ಅಗತ್ಯ ಕ್ರಮ
Last Updated 5 ಮೇ 2019, 19:48 IST
ಅಕ್ಷರ ಗಾತ್ರ

ಮೈಸೂರು: ಜನವರಿಯಿಂದ ಏಪ್ರಿಲ್‌ 30ರ ವರೆಗೆ ಮೈಸೂರು ಜಿಲ್ಲೆಯಲ್ಲಿ ಒಟ್ಟು 117 ಎಚ್‌1ಎನ್‌1 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ 81 ಪ್ರಕರಣಗಳು ಮೈಸೂರು ನಗರ ವ್ಯಾಪ್ತಿಯಲ್ಲಿ ವರದಿಯಾಗಿವೆ.

ಆದರೆ ಎಚ್‌1ಎನ್‌1 ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಂಡಿದ್ದು, ಯಾರೂ ಆತಂತಕ್ಕೆ ಒಳಗಾಗಬಾರದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ಮೈಸೂರು ನಗರದಲ್ಲಿ ಎಚ್‌1ಎನ್‌1 ಪ್ರಕರಣ ಅಲ್ಪ ಹೆಚ್ಚಿದೆ. ಕಾಯಿಲೆಯಿಂದ ಬಳಲುತ್ತಿರುವವರು ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ. ರೋಗ ಹರಡದಂತೆ ಆರೋಗ್ಯ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್‌.ವೆಂಕಟೇಶ್ ಹೇಳಿದ್ದಾರೆ.

ಮೈಸೂರು ನಗರ ಹೊರತುಪಡಿಸಿ ತಾಲ್ಲೂಕಿನ ಇತರೆಡೆಗಳಲ್ಲಿ 10 ಪ್ರಕರಣಗಳು ವರದಿಯಾಗಿವೆ. ನಂಜನಗೂಡಿನಲ್ಲಿ 9, ತಿ.ನರಸೀಪುರದಲ್ಲಿ 3, ಎಚ್‌.ಡಿ.ಕೋಟೆಯಲ್ಲಿ 2, ಹುಣಸೂರಿನಲ್ಲಿ 5 ಮತ್ತು ಕೆ.ಆರ್‌.ನಗರದಲ್ಲಿ 7 ಪ್ರಕರಣಗಳು ದೃಢಪಟ್ಟಿವೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಕಾಯಿಲೆಗೆ ಉಚಿತ ಚಿಕಿತ್ಸೆ ಲಭ್ಯವಿದೆ. ರೋಗದ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ವೈದ್ಯರನ್ನು ಕಾಣಬೇಕು. ಕೆ.ಆರ್‌.ಆಸ್ಪತ್ರೆ ಒಳಗೊಂಡಂತೆ ಇತರ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಕೆಲದಿನಗಳ ಹಿಂದೆ ನಂಜನಗೂಡು ತಾಲ್ಲೂಕಿನಲ್ಲಿ ಎರಡು ಪ್ರಕರಣಗಳು ವರದಿಯಾಗಿದ್ದವು. ಇಲಾಖೆಯ ಸಿಬ್ಬಂದಿ ಆ ಭಾಗದಲ್ಲಿ ಇತರರಿಗೆ ರೋಗ ಹರಡಿದೆಯೇ ಎಂಬುದನ್ನು ಪರಿಶೀಲಿಸಿದ್ದಾರೆ ಎಂದು ತಿಳಿಸಿದರು.

ಮೈಸೂರು ಅಲ್ಲದೆ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಜನವರಿ ಬಳಿಕ ಹೆಚ್ಚು ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆಯ ಅಂಕಿ–ಅಂಶ ತಿಳಿಸಿತ್ತು. ರಾಜ್ಯದಲ್ಲಿ ಕಳೆದ 4 ತಿಂಗಳಲ್ಲಿ ಒಟ್ಟು 39 ಮಂದಿ ಈ ಕಾಯಿಲೆಯಿಂದ ಮೃತಪಟ್ಟಿದ್ದಾರೆ.

ಎಚ್‌1ಎನ್‌1 ಬಗ್ಗೆ ನಿಗಾ ಇಟ್ಟು ಚಿಕಿತ್ಸೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಇಲಾಖೆ ಆಯುಕ್ತರ ಕಚೇರಿ ಎಲ್ಲ ಜಿಲ್ಲೆಗಳ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT