ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಿಂದ ಹಿಮಾಚಲ ಶಿಖರಕ್ಕೆ: ಹಂಪ್ಟಾ ಕಣಿವೆಯ 14,100 ಮೀ. ಎತ್ತರ ಏರಿದ ಖುಷಿ

Last Updated 22 ಆಗಸ್ಟ್ 2021, 7:19 IST
ಅಕ್ಷರ ಗಾತ್ರ

ಮೈಸೂರು: ಕೊರೊನಾ ಕಾಲದ ಒತ್ತಡ ನಿವಾರಣೆಗೆ ಸಾಹಸಯಾತ್ರೆ ಮಾಡಿದ್ದ ಮೈಸೂರಿನ ಚಾರಣಿಗರ ತಂಡವು ಹಿಮಾಚಲ ಪ್ರದೇಶದ ಹಂಪ್ಟಾ ಕಣಿವೆಯಲ್ಲಿ 14,100 ಮೀ. ಎತ್ತರವೇರಿ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದೆ.

ಮೈಸೂರಿನ ಟೈಗರ್‌ ಎಡ್ವಂಚರ್ಸ್ ಫೌಂಡೇಷನ್ ಡಿಎಸ್‌ಡಿ ಸೋಲಂಕಿ ನೇತೃತ್ವದಲ್ಲಿ ಮೈಸೂರಿನ ಐವರು ಹಾಗೂ ಸಕಲೇಶಪುರದ ಇಬ್ಬರು ಐದು ದಿನದ 41 ಕಿ.ಮೀ ಚಾರಣಯಾತ್ರೆಯಲ್ಲಿ ಜೊತೆಯಾಗಿದ್ದರು.

ವಿಮಾನದಲ್ಲಿ ಚಂಡೀಗಡ, ನಂತರ ರಸ್ತೆ ಮೂಲಕ ಕುಲ್ಲು ಜಿಲ್ಲೆಯ ನಗ್ಗರ್ ಹಳ್ಳಿಯ ಚೆತ್ತಿ ಬೇಸ್ ಕ್ಯಾಂಪ್‌ಗೆ ತೆರಳಿ ಮರುದಿನ ರೋರಿಚ್ ಆರ್ಟ್ ಗ್ಯಾಲರಿ ಮತ್ತು ಮ್ಯೂಸಿಯಂಗೆ ಭೇಟಿ ನೀಡಿ ಚಾರಣಕ್ಕೆ ಅನುವಾದರು. ಜುಲೈ 23ರಂದು ಜೊಬ್ರಿ ಜಲ ವಿದ್ಯುತ್ ಕೇಂದ್ರವನ್ನು ತಲುಪಿ ಹಂಪ್ಟಾ ಕಣಿವೆ ಮೂಲಕ ಚಿಕ್ಕಾ ಕ್ಯಾಂಪ್ ಸೇರಿದರು.

‘ಭಾಲು ಘೇರ ಕ್ಯಾಂಪಿನೆಡೆಗಿನ ದಾರಿಯಲ್ಲಿ ಮಂಜುಗಟ್ಟಿದ ಚಿಕ್ಕ ತೊರೆ ದಾಟುವಾಗ ದಿಗ್ಭ್ರಮೆಯಾಯಿತು. ಅದರಲ್ಲಿಳಿದರೆ ರಕ್ತ ಹೆಪ್ಪುಗಟ್ಟುವುದು ಖಂಡಿತ. ಪರಸ್ಪರ ಕೈಹಿಡಿದುಕೊಂಡು ದಾಟಿದ್ದು ಮೈನವಿರೇಳಿಸಿದ ಅನುಭವ’ ಎನ್ನುತ್ತಾರೆ ಸಕಲೇಶಪುರದ ಹರೀಶ್ ಕುಮಾರ್ ಮಗ್ಗೆ.

‘ಹಂಪ್ಟಾ ಪಾಸ್ ದಾಟಿ ಸ್ಪಿತಿ ಕಣಿವೆ ತಲುಪಿ ಹಚ್ಚ ಹಸಿರಿನ ಹುಲ್ಲು ಹಾಸು, ಚಿಕ್ಕ ಚಿಕ್ಕ ಝರಿ ಹಾಗು ಮಂಜುಗಟ್ಟಿದ್ದ ಹಾದಿ ಸವೆಸುತ್ತಾ, ಶಿಖರದ ತುತ್ತತುದಿಯನ್ನು ತಲುಪಿ ತ್ರಿವರ್ಣ ಧ್ವಜ ಹಾರಿಸಿ ಸ್ಪಿತಿ ಕಣಿವೆಗೆ ಇಳಿದು ಶಿಯೋಗರು ತಲುಪಿದಾಗ ಮಂಡಿಗಳು ನಡುಗುತ್ತಿದ್ದವು‌’‌ ಎಂದು ಸ್ಮರಿಸಿದರು.

‘ಕಾರ್ಗಿಲ್ ವಿಜಯ ದಿವಸ ಕ್ಯಾಂಪಿನ ಪಕ್ಕದಲ್ಲೇ ಇದ್ದ ತೊರೆಯನ್ನು ದಾಟುವಾಗ ನೀರು ಗಡ ಗಡ ನಡುಗಿಸಿತ್ತು’ ಎಂದು ಮೈಸೂರಿನ ಛಾಯಾಗ್ರಾಹಕ ಮಂಜುನಾಥ್ ಗೌಡ ಹೇಳಿದರು.

‘ಚಳಿ, ಮಳೆ, ಗಾಳಿ, ಹಿಮಪಾತ, ಭೂಕುಸಿತ ಜೊತೆಗೆ ರಸ್ತೆ ಬದಿಯಲ್ಲಿ ಗಂಟೆಗಟ್ಟಲೆ ಕಾಯುವುದು, ದಾರಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ವಾಹನಗಳನ್ನು ಹೊರಗೆಳೆಯುವುದು...ಒಂದಲ್ಲಾ, ಎರಡಲ್ಲ! ಹಲವು ಸವಾಲುಗಳು ಬಂದವು. ಯಾರೂ ಎದೆಗುಂದಲಿಲ್ಲ’ ಎಂದು ತಂಡದ ನಾಯಕ ಡಿಎಸ್‌ಡಿ ಸೋಲಂಕಿ ನಕ್ಕರು.

35 ವರ್ಷಗಳ ಚಾರಣ ಯಾತ್ರೆಯಲ್ಲಿ ಅವರು ಹಿಮಾಲಯ ವ್ಯಾಪ್ತಿಯಲ್ಲೇ 50 ಬಾರಿ ಸಂಚರಿಸಿದ್ದಾರೆ. ಹಿಮಾಚಲಪ್ರದೇಶದಲ್ಲಿ 30, ಉತ್ತರಾಖಂಡದಲ್ಲಿ 13, ಜಮ್ಮು–ಕಾಶ್ಮೀರದಲ್ಲಿ 5, ಸಿಕ್ಕಿಂ ಮತ್ತು ನೇಪಾಳದಲ್ಲಿ ತಲಾ ಒಂದು ಚಾರಣ ನಡೆಸಿದ್ದಾರೆ.

ಹಾಸನದ ನಾಗೇಶ್ ಕುಮಾರ್, ಹರೀಶ್ ಕುಮಾರ್, ಮೈಸೂರಿನ ಮಂಜುನಾಥ್ ನಾಯಕ್, ಕೃಷ್ಣಮೂರ್ತಿ, ಮಂಜುನಾಥ್ ಗೌಡ ಮತ್ತು ವಿದ್ಯಾರ್ಥಿನಿ ಅದಿತಿ ಆರ್.ರಾವ್ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT