ಬುಧವಾರ, ಅಕ್ಟೋಬರ್ 28, 2020
24 °C
ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ: ಪಾಲಿಕೆ–ಗದ್ದಲದಿಂದ ಕಾರ್ಯಸೂಚಿ ಅನುಮೋದನೆಗೆ ತೊಡಕು

ಮೈಸೂರು: ಕೌನ್ಸಿಲ್‌ ಸಭೆ ನುಂಗಿದ ಕೋವಿಡ್‌, ಹಾಥರಸ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೋವಿಡ್‌ ಹಾಗೂ ಹಾಥ ರಸ್‌ ಅತ್ಯಾಚಾರ ಪ್ರಕರಣ ವಿಚಾರವಾಗಿ ಶುರುವಾದ ಗದ್ದಲ ಮೈಸೂರು ಮಹಾನಗರ ಪಾಲಿಕೆಯ ಕೌನ್ಸಿಲ್‌ ಸಭೆಯ ಪ್ರಮುಖ ಭಾಗವನ್ನು ನುಂಗಿ ಹಾಕಿತು. ಕಾರ್ಯಸೂಚಿ ಅನುಮೋದ ನೆಗೆ ತೊಡಕು ಉಂಟು ಮಾಡಿತು.

ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್‌ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ವಿಚಾರವಾಗಿ ಮೂರೂ ಪಕ್ಷಗಳ ಸದಸ್ಯರು ವಾದ-ಪ್ರತಿವಾದದಲ್ಲಿ ತೊಡಗಿದರು. ಹೀಗಾಗಿ, ಮೇಯರ್‌ ಎರಡು ಬಾರಿ ಸಭೆಯನ್ನು ಮುಂದೂಡಬೇಕಾಯುತು. ಪರಿಣಾಮವಾಗಿ ಸಾಕಷ್ಟು ಸಮಯ ವ್ಯರ್ಥವಾಯಿತು.

‘ರಾಜ್ಯ ಸರ್ಕಾರದ ಆದೇಶವಿದ್ದರೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ. ಇದಕ್ಕೆ ಸರ್ಕಾರವೇ ಹೊಣೆ. ಇದು ಕೆಟ್ಟ ಸರ್ಕಾರ’ ಎಂದು ಕಾಂಗ್ರೆಸ್‌ ಸದಸ್ಯರು ಮಾಡಿದ ಆರೋಪ ಗದ್ದಲಕ್ಕೆ ಕಾರಣವಾಯಿತು.

ಕೋವಿಡ್‌-19 ಪರಿಸ್ಥಿತಿ ಕುರಿತು ಮಾತನಾಡಿದ ಆರಿಫ್‌ ಹುಸೇನ್‌, ‘ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗಾಗಿ ಶೇ 50 ಹಾಸಿಗೆಗಳನ್ನು ಮೀಸಲಿಟ್ಟು ,ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿ ಸೋಂಕಿತರು ಹಾಗೂ ಮೃತರ ಪ್ರಮಾಣ ಹೆಚ್ಚುತ್ತಿದ್ದರೂ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ವ್ಯವಸ್ಥೆ ಮಾಡಿ ಚಿಕಿತ್ಸೆ ನೀಡುತ್ತಿಲ್ಲ’ ಎಂದು ಹರಿಹಾಯ್ದರು. ಆಯೂಬ್‌ ಖಾನ್ ಸೇರಿದಂತೆ ಹಲವು ಸದಸ್ಯರು ಅವರಿಗೆ ಬೆಂಬಲವಾಗಿ ದನಿಗೂಡಿಸಿದರು.

ಆಯುಕ್ತ ಗುರುದತ್ತ ಹೆಗಡೆ ಪ್ರತಿಕ್ರಿಯಿಸಿ, ’ಕೋವಿಡ್‌ ಚಿಕಿತ್ಸೆಗೆ ಹಾಸಿಗೆ ವ್ಯವಸ್ಥೆ ಕಲ್ಪಿಸಲು ಖಾಸಗಿ ಆಸ್ಪತ್ರೆಗಳು ಮುಂದಾಗಿವೆ. ಆದರೆ, ಚಿಕಿತ್ಸೆ ನೀಡಲು ವೈದ್ಯಕೀಯ ಸಿಬ್ಬಂದಿ ಕೊರತೆ ಇದೆ. ಹೀಗಾಗಿ, ಪಾಲಿಕೆ ವತಿಯಿಂದಲೇ ವ್ಯವಸ್ಥೆ ಮಾಡಲು  ಚರ್ಚಿಸಲಾಗುವುದು ಎಂದರು.

‘ಬಡಜನರಿಗೆ ಕೋವಿಡ್‌ ಚಿಕಿತ್ಸೆ ನೀಡುವಲ್ಲಿ ಖಾಸಗಿ ಆಸ್ಪತ್ರೆಗಳು ನಿರ್ಲಕ್ಷ್ಯವಹಿಸಿವೆ. ಲಕ್ಷಗಟ್ಟಲೇ ಹಣ ವಸೂಲಿ ಮಾಡುತ್ತಿವೆ. ಇಷ್ಟಾಗಿಯೂ ಏಕೆ ಕ್ರಮಕೈಗೊಂಡಿಲ್ಲ? ಮೈಸೂರು ಜಿಲ್ಲೆಯ ವಿಚಾರದಲ್ಲಿ ಮಲತಾಯಿ ಧೋರಣೆ ಏಕೆ’ ಎಂದು ಆರಿಫ್‌ ಸೇರಿದಂತೆ ಕಾಂಗ್ರೆಸ್‌ನ ಕೆಲ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಪದ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಪಾಲಿಕೆ ಸದಸ್ಯರು,  ಮೇಯರ್‌ ಪೀಠದ ಮುಂಭಾಗ ಧಾವಿಸಿ ಪ್ರತಿಭಟಿಸಿದರು. ಸರ್ಕಾರದ ವಿರುದ್ಧದ ಹೇಳಿಕೆಯನ್ನು ವಾಪಸ್ ಪಡೆಯಲು ಒತ್ತಾಯಿಸಿದರು. ಹೀಗಾಗಿ, ಗೊಂದಲ ಉಂಟಾಗಿದ್ದರಿಂದ ಸಭೆಯನ್ನು ಹತ್ತು ನಿಮಿಷ ಮುಂದೂಡಲಾಯಿತು.

ಮತ್ತೆ ಸಭೆ ಆರಂಭವಾಗುತ್ತಿದ್ದಂತೆ ಬಿಜೆಪಿಯ ಸದಸ್ಯರು ಪ್ರತಿಭಟನೆ ಮುಂದುವರಿಸಿದರು. ಆರಿಫ್‌ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದರು.

ಈ ಹಂತದಲ್ಲಿ ಉತ್ತರ ಪ್ರದೇಶದ ಹಾಥರಸ್‌ ಅತ್ಯಾಚಾರ ಪ್ರಕರಣ ಪ್ರತಿಧ್ವನಿಸಿತು. ‘ಈ ಪ್ರಕರಣವನ್ನೂ ಅಲ್ಲಿನ ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ನಾವು ಸರ್ಕಾರದ ನಿರ್ಲಕ್ಷ್ಯ ಧೋರಣೆ ಗಳನ್ನು ಒಪ್ಪಿಕೊಳ್ಳಬೇಕೇ’ ಎಂದು ಪ್ರಶ್ನಿಸಿದರು. ಇಲ್ಲೇಕೆ ಆ ವಿಚಾರ ಎಂದು ಬಿಜೆಪಿ ಸದಸ್ಯರು ಆಕ್ಷೇಪಿಸಿದರು. ಗದ್ದಲ ನಿಲ್ಲದ ಕಾರಣ ಮೇಯರ್‌ ತಸ್ನೀಂ ಮತ್ತೆ ಸಭೆ ಮುಂದೂಡಿದರು. ಬಳಿಕ ಆರಿಫ್‌ ವಿಷಾದ ವ್ಯಕ್ತಪಡಿಸಿದ ಕಾರಣ ಸಭೆ ನಡೆಯಿತು. 

₹ 50 ಲಕ್ಷ ಅನುದಾನ ಏನಾಯಿತು?

ಕೌನ್ಸಿಲ್ ಸಭೆಯಲ್ಲಿ ಅನುದಾನ ವಿಚಾರವಾಗಿ ಸದಸ್ಯರು ಹಾಗೂ ಆಯುಕ್ತರ ನಡುವೆ ಜಟಾಪಟಿ ನಡೆಯಿತು.
ಅಭಿವೃದ್ಧಿ ಕಾಮಗಾರಿಗಳಿಗಾಗಿ ಪ್ರತಿ ವಾರ್ಡ್‌ಗೆ ₹ 50 ಲಕ್ಷ ಅನುದಾನ ನೀಡಲು ಕಳೆದ ವರ್ಷ ನಡೆದ ಕೌನ್ಸಿಲ್‌ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿತ್ತು. ಅನುದಾನ ಬಿಡುಗಡೆ ವಿಚಾರ ಸ್ಪಷ್ಟಪಡಿಸಿ ಎಂದು ಪಾಲಿಕೆ ಸದಸ್ಯರು ಪಟ್ಟು ಹಿಡಿದರು.

ಈ ಸಂಬಂಧ ಅಸಮಾಧಾನ ಹೊರಹಾಕಿದ ಮೇಯರ್‌ ತಸ್ನೀಂ, ಅನುದಾನದ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕು. ಮೇಯರ್‌‌ ಸ್ಥಾನಕ್ಕೂ ಗೌರವವಿದೆ. ಆಯುಕ್ತರೇ ಸ್ಪಷ್ಟನೆ ನೀಡಿ ಎಂದು ಕೇಳಿದರು. 

ಆಯುಕ್ತ ಗುರುದತ್ತ ಹೆಗಡೆ ಪ್ರತಿಕ್ರಿಯಿಸಿ, ‘ಪಾಲಿಕೆಯ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ. ಹೀಗಾಗಿ, ದೊಡ್ಡ ಮೊತ್ತದ ಅನುದಾನ ಕಷ್ಟವಾಗುತ್ತದೆ. ಹಣಕಾಸು ಪರಿಸ್ಥಿತಿ ನೋಡಿ ನಿರ್ಧಾರಕ್ಕೆ ಬರಲಾಗುವುದು’ ಎಂದರು.

ಶ್ವೇತಪತ್ರ ಹೊರಡಿಸಿ: ಕಳೆದ ಕೌನ್ಸಿಲ್‌ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದ್ದ ಅನುದಾನ ಬಿಡುಗಡೆ ವಿಚಾರವಾಗಿ ನಾವು ಕೇಳುತ್ತಿದ್ದೇವೆ. ಪಾಲಿಕೆಯ ಆದಾಯ ಕುರಿತು ಶ್ವೇತಪತ್ರ ಹೊರಡಿಸಿ’ ಎಂದು ಬಿಜೆಪಿ ಸದಸ್ಯ ಬಿ.ವಿ.ಮಂಜುನಾಥ್‌ ಹೇಳಿದರು.

ನೀರಿನ ತೆರಿಗೆ ಸಂಗ್ರಹದಲ್ಲೂ ಗೊಂದಲ

ನಗರಕ್ಕೆ ಕಾವೇರಿ, ಕಬಿನಿಯಿಂದ 280 ಎಂಎಲ್‌ಡಿ ನೀರು ಬಂದರೂ ಸಮಸ್ಯೆ ಆಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. 120 ಎಂಎಲ್‌ಡಿ ನೀರಿಗೆ ಮಾತ್ರ ಪ್ರತಿ ತಿಂಗಳು ₹ 4.50 ಕೋಟಿ ತೆರಿಗೆ ಸಂಗ್ರಹವಾಗುತ್ತಿದೆ. ಇನ್ನುಳಿದ ನೀರಿನ ತೆರಿಗೆ ಏನಾಯಿತು ಎಂದು ಸದಸ್ಯ ಶಿವಕುಮಾರ್‌ ಪ್ರಶ್ನಿಸಿದರು.

ನೀರು ಪೂರೈಕೆ ವಿಚಾರದಲ್ಲಿ ಅನಗತ್ಯ ದುಂದುವೆಚ್ಚ ಆಗುತ್ತಿದೆ. ಇದೊಂದೇ ಅಲ್ಲ; ಎಲ್ಲ ವಿಚಾರಗಳಲ್ಲೂ ತಾಂತ್ರಿಕ ಹಾಗೂ ವ್ಯವಸ್ಥಿತ ನ್ಯೂನತೆ ಇದೆ’ ಎಂದರು.

ಮಾಸ್ಕ್‌ ದಂಡ ಪಾಲಿಕೆಗೆ ಬರುತ್ತಿದೆಯೇ?

‘ನಗರ ವ್ಯಾಪ್ತಿಯಲ್ಲಿ ಮಾಸ್ಕ್‌ ಧರಿಸದೇ ಓಡಾಡುವವರ ಮೇಲೆ ಪಾಲಿಕೆಯಿಂದ ವಿಧಿಸುವ ದಂಡದ ಹಣ ಎಲ್ಲಿಗೆ ಹೋಗುತ್ತಿದೆ? ಅದು ಪಾಲಿಕೆಗೆ ತಲುಪುತ್ತಿದೆಯೇ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಸುಬ್ಬಯ್ಯ ಪ್ರಶ್ನಿಸಿದರು.

ಅದಕ್ಕೆ ಆಯುಕ್ತರು ಪ್ರತಿಕ್ರಿಯಿಸಿ, ಪಾಲಿಕೆಯಿಂದ ಸಂಗ್ರಹವಾಗುವ ದಂಡ ಪಾಲಿಕೆಗೇ ಬರುತ್ತಿದೆ ಎಂದರು.

ಆಸ್ತಿ ತೆರಿಗೆ ಹೆಚ್ಚಳ ಬೇಡ

ಕೋವಿಡ್‌ ಕಾರಣ ಒಂದು ವರ್ಷದ ಮಟ್ಟಿಗೆ ಆಸ್ತಿ ತೆರಿಗೆಯಲ್ಲಿ ಶೇ 15ರಷ್ಟು ಹೆಚ್ಚಳ ಮಾಡಬಾರದು ಎಂದು ಕೌನ್ಸಿಲ್‌ ಸಭೆಯಲ್ಲಿ ನಿರ್ಣಯ ಕೈಗೊಂಡು, ನಗರಾಭಿವೃದ್ಧಿಗೆ ಇಲಾಖೆ ಒಪ್ಪಿಗೆಗಾಗಿ ಪ್ರಸ್ತಾವನೆ ಕಳಿಸಿಕೊಡಲು ತೀರ್ಮಾನಿಸಿತು. 

ಅಲ್ಲದೇ, ಪಾಲಿಕೆ ವತಿಯಿಂದ ಹೈಟೆಕ್‌ ಶೌಚಾಲಯ ನಿರ್ಮಾಣ ಬೇಡವೆಂದು ಸಭೆಯಲ್ಲಿ ನಿರ್ಧರಿಸಲಾಯಿತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.