ಗುರುವಾರ , ಫೆಬ್ರವರಿ 25, 2021
30 °C
ಹುಲಿ ಕಂಡ ಒಂದೇ ಗಂಟೆಯಲ್ಲೇ ಸಾಕಾನೆಗಳ ನೆರವಿನಿಂದ ನಡೆಸಿದ ಕಾರ್ಯಾಚರಣೆ ಯಶಸ್ವಿ

ಎಚ್‌.ಡಿ ಕೋಟೆ: ಮೂವರ ಬಲಿ ಪಡೆದ ಹುಲಿ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಚ್.ಡಿ.ಕೋಟೆ: ತಾಲ್ಲೂಕಿನ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂವರನ್ನು ಕೊಂದು ಸಾರ್ವಜನಿಕರಲ್ಲಿ ತಲ್ಲಣ ಸೃಷ್ಟಿಸಿದ್ದ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಹುಲಿ ಕಾಣಿಸಿಕೊಂಡ ಕೇವಲ ಒಂದು ಗಂಟೆ ಅವಧಿಯಲ್ಲಿ ಇಡೀ ಕಾರ್ಯಾಚರಣೆ ಮುಗಿದಿದೆ.‌ ಸೆರೆ ಸಿಕ್ಕಿರುವುದು ಗಂಡು ಹುಲಿಯಾಗಿದ್ದು 6ರಿಂದ 8 ವರ್ಷದ್ದಾಗಿದೆ. ಮೈಮೇಲೆ ತರಚಿದ ಗಾಯಗಳು ಕಂಡು ಬಂದಿವೆ. ಕೆಳದವಡೆಯಲ್ಲಿ ಕೆಲ ಹಲ್ಲು ಇಲ್ಲ.

ಗುರುವಾರ ವ್ಯಕ್ತಿಯನ್ನು ಕೊಂದ ಜಾಗದಿಂದಲೇ ಸಿಬ್ಬಂದಿ ಹುಡುಕಾಟ ಆರಂಭಿಸಿದರು. ಮತ್ತಿಗೋಡು ಶಿಬಿರದಿಂದ ಬಂದಿದ್ದ ಆನೆಗಳು ಸಾಥ್ ನೀಡಿದವು. ಹುಲಿಯ ಹೆಜ್ಜೆಗುರುತು ಹಿಡಿದು ಆನೆಯ ಮೇಲೆ ಕುಳಿತ ಅಧಿಕಾರಿಗಳು ಸಮೀಪದಲ್ಲೇ ಇದ್ದ ಮಚ್ಚೂರಿಗೆ ಬಂದರು.

ಪೊದೆಯೊಂದರ ಬಳಿ ಹುಲಿ ಹೋಗಿರುವುದನ್ನು ಖಚಿತಪಡಿಸಿಕೊಂಡು, ಕರುವೊಂದನ್ನು ಕಟ್ಟಿ ಹುಲಿಗಾಗಿ ಕಾದರು. ಮಧ್ಯಾಹ್ನ 12.45ರ ಹೊತ್ತಿಗೆ ಪೊದೆಯ ಮಧ್ಯೆ ಹುಲಿ ಅಡಗಿರುವುದು ಗೋಚರಿಸಿತು. ಪಶುವೈದ್ಯ ಡಾ.ಉಮಾಶಂಕರ್ ಅವರು ಮೊದಲಿಗೆ ಅರಿವಳಿಕೆ ಚುಚ್ಚುಮದ್ದನ್ನು ರೈಫಲ್‌ನಿಂದ ಹಾರಿಸಿದರು.

ಆದರೂ, ಹುಲಿ ಪ್ರಜ್ಞೆ ತಪ್ಪಲಿಲ್ಲ. ಮತ್ತೊಮ್ಮೆ ಅರಿವಳಿಕೆ ಚುಚ್ಚುಮದ್ದು ಹಾರಿಸಲಾಯಿತು. ಪ್ರಜ್ಞೆತಪ್ಪಿದ ತಕ್ಷಣವೇ ಬಲೆ ಹಾಕಿ ಹಿಡಿದು ಬೋನಿಗೆ ತಳ್ಳಲಾಯಿತು. ಮೈಸೂರು ಸಮೀಪದ ಕೂರ್ಗಳ್ಳಿಯ ಚಾಮುಂಡಿ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಸಾಗಿಸಿದರು.

ಪಿಸಿಸಿಎಫ್ (ವನ್ಯಜೀವಿ) ಜಯರಾಂ, ನಾಗರಹೊಳೆ ಹುಲಿ ರಕ್ಷಿತಾರಣ್ಯದ ನಿರ್ದೇಶಕ ನಾರಾಯಣಸ್ವಾಮಿ, ಕೊಡಗು ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಲಿಂಗರಾಜ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಪಶುವೈದ್ಯರಾದ ಡಾ.ಅಬ್ದುಲ್ ಮುಜೀದ್, ಡಾ.ಉಮಾಶಂಕರ್ ಕಾರ್ಯಾಚರಣೆಯಲ್ಲಿ ಭಾಗಹಿಸಿದ್ದರು.

ಹುಲಿ ಗಾಯಗೊಂಡಿತ್ತು: ‘ಹುಲಿಯ ಹಿಂಗಾಲು, ಮುಂಗಾಲಿಗೆ ಗಾಯಗಳಾಗಿ ಕುಂಟುತ್ತಾ ನಡೆಯುತ್ತಿತ್ತು. ಹೀಗಾಗಿ, ಅದು ತೀರಾ ಕಡಿಮೆ ಪ್ರತಿರೋಧ ತೋರುವ ಮನುಷ್ಯರಂತಹ ಜೀವಿಗಳ ಮೇಲೆ ದಾಳಿ ಮಾಡುತ್ತಿತ್ತು’ ಎಂದು ಕೊಡಗಿನ ಸಿಸಿಎಫ್ ಲಿಂಗರಾಜ ಹೇಳಿದ್ದಾರೆ.

‘2016ರಿಂದ ಕ್ಯಾಮೆರಾದಲ್ಲಿ ಸೆರೆಯಾದ ಹುಲಿಯ ಛಾಯಾಚಿತ್ರಗಳನ್ನು ಪರಿಶೀಲಿಸಿ, ಮನುಷ್ಯರ ಮೇಲೆ ದಾಳಿ ಮಾಡಿದ ಹುಲಿಯನ್ನೇ ಈಗ ಹಿಡಿಯಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಈ ಹುಲಿಯು ಕಳೆದ ಒಂದು ತಿಂಗಳಲ್ಲಿ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ಮೂವರನ್ನು ಕೊಂದು ಹಾಕಿ ಭೀತಿ ಸೃಷ್ಟಿಸಿತ್ತು.

**

ಮುತ್ತಿಗೆ ಹಾಕಿದ ಗ್ರಾಮಸ್ಥರು: ಲಾಠಿ ಪ್ರಹಾರ

ಅರಣ್ಯ ಇಲಾಖೆ ಅಧಿಕಾರಿಗಳು ಜೀಪಿನಲ್ಲಿ ಹೋಗುತ್ತಿರುವುದನ್ನು ಕಂಡ ಗ್ರಾಮಸ್ಥರು, ಅಧಿಕಾರಿಗಳು ಹುಲಿ ಹಿಡಿಯದೇ ವಾಪಸ್‌ ಹೋಗುತ್ತಿದ್ದಾರೆ ಎಂದು ಆರೋಪಿಸಿ ಮಾನಿಮೂಲೆ ಹಾಡಿ ಸಮೀಪ ಘೇರಾವ್ ಹಾಕಿದರು. ಮುಚ್ಚಿದ ಟ್ರಕ್‌ನಲ್ಲಿ ಹುಲಿಯನ್ನು ಈಗಾಗಲೇ ಕಳುಹಿಸಲಾಗಿದೆ ಎಂಬ ಅಧಿಕಾರಿಗಳ ಮಾತನ್ನು ನಂಬದ ಜನರು ರಸ್ತೆತಡೆ ನಡೆಸಿದರು.

‘ಹುಲಿ ಹಿಡಿದಿರುವುದು ಸುಳ್ಳು. ಅಧಿಕಾರಿಗಳು ನಾಟಕ ಮಾಡುತ್ತಿದ್ದಾರೆ. ಒಂದು ವೇಳೆ ಹುಲಿ ಹಿಡಿದಿದ್ದರೆ ಅದನ್ನು ನಮಗೆ ತೋರಿಸಲೇಬೇಕು’ ಎಂದು ಬಿಗಿಪಟ್ಟು ಹಿಡಿದರು.

ಟ್ರಕ್‌ನ್ನು ವಾಪಸ್ ಕರೆಸಿಕೊಂಡು ಗ್ರಾಮಸ್ಥರಿಗೆ ತೋರಿಸುವ ಕುರಿತು ಚರ್ಚೆ ನಡೆಯಿತಾದರೂ ಒಂದು ವೇಳೆ ಹುಲಿಯನ್ನು ಗ್ರಾಮಸ್ಥರು ಕೊಂದು ಹಾಕಿದರೆ ಪರಿಸ್ಥಿತಿ ಕೈಮೀರಲಿದೆ ಎಂದು ವಾಪಸ್ ಕರೆಸಲಿಲ್ಲ. ಹುಲಿ ನೋಡದೇ ಸ್ಥಳದಿಂದ ಕದಲುವುದಿಲ್ಲ ಎಂದು ಗ್ರಾಮಸ್ಥರು ರಸ್ತೆಯಲ್ಲೇ ಕೂತರು. ಕೊನೆಗೆ, ಪೊಲೀಸರು ಲಾಠಿಪ್ರಹಾರ ಮಾಡಿ ಗುಂಪು ಚದುರಿಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನೆಲೆಸಿತ್ತು.

**

ಅರಣ್ಯ ಸಿಬ್ಬಂದಿ ಮೇಲೆ ಹುಲಿ ದಾಳಿ, ಕೂದಲೆಳೆ ಅಂತರದಲ್ಲಿ ಪಾರು

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಹಂಗಳ ಗ್ರಾಮದ ಜಮೀನೊಂದಕ್ಕೆ ಶುಕ್ರವಾರ ನುಗ್ಗಿರುವ ಹೆಣ್ಣು ಹುಲಿಯೊಂದು ಅರಣ್ಯ ಇಲಾಖೆ ಸಿಬ್ಬಂದಿ ರಾಮು ಎಂಬುವವರ ಮೇಲೆ ದಾಳಿ ಮಾಡಿದೆ.

ಬಲಗೈ ತೋಳಿನ ಮಾಂಸ ಕಿತ್ತು ಬಂದಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಹುಲಿಯನ್ನು ಕಾಡಿಗೆ ಓಡಿಸಲು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ ವೇಳೆ ದಾಳಿ ಮಾಡಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು.

ಆರೇಳು ವರ್ಷ ವಯಸ್ಸಿನ ಹುಲಿಯು ಬೆಳಿಗ್ಗೆ ಕುಂದುಕೆರೆ ವಲಯದ ಭಾಗದಿಂದ ಕಲ್ಲಿಗೌಡನಹಳ್ಳಿ ಮಾರಮ್ಮ ದೇವಿಯ ಗುಡಿಯ ಬಳಿ ಬಂದಿದೆ. ಇದನ್ನು ನೋಡಿದ ಸಾರ್ವಜನಿಕರು ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದರು.

ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹುಲಿಯನ್ನು ಕಾಡಿಗೆ ಓಡಿಸಲು ಪ್ರಯತ್ನ ಮಾಡಿದಾಗ ಎದುರುಗಡೆಯಿಂದ ಬಂದ ಸಾರ್ವಜನಿಕರಿಗೆ ಹೆದರಿ ಪೊದೆಯೊಂದರಲ್ಲಿ ಅಡಗಿ ಕುಳಿತಿದೆ. ಓಡಿಸಲು ಯತ್ನಿಸುತ್ತಿದ್ದಾಗ, ವಾಚರ್ ರಾಮು ಮೇಲೆ ದಾಳಿ ಮಾಡಿದೆ.

ಹುಲಿ ಪೊದೆಯಿಂದ ಇನ್ನೂ ಹೊರ ಬಂದಿಲ್ಲ. ನಾಗರಹೊಳೆಯಿಂದ ಆನೆಗಳು ಬಂದ ನಂತರ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

**

ಹುಲಿಯನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ. ಅದು ಆರೋಗ್ಯವಾಗಿದೆ. ಕೂರ್ಗಳ್ಳಿಯ ಚಾಮುಂಡಿ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಸಾಗಿಸಲಾಗಿದೆ.

–ಜಯರಾಂ, ಪಿಸಿಸಿಎಫ್ (ವನ್ಯಜೀವಿ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು