ಮಣ್ಣಿನ ಮಗ ಎಂಬುದನ್ನು ತೋರಿಸುವ ಅಗತ್ಯವಿಲ್ಲ: ಎಚ್‌.ಡಿ. ಕುಮಾರಸ್ವಾಮಿ

7
ಸುತ್ತೂರು ಮಠಕ್ಕೆ ಭೇಟಿ ನೀಡಿದ ಎಚ್‌.ಡಿ.ಕುಮಾರಸ್ವಾಮಿ ದಂಪತಿ

ಮಣ್ಣಿನ ಮಗ ಎಂಬುದನ್ನು ತೋರಿಸುವ ಅಗತ್ಯವಿಲ್ಲ: ಎಚ್‌.ಡಿ. ಕುಮಾರಸ್ವಾಮಿ

Published:
Updated:
Deccan Herald

ಮೈಸೂರು: ‘ಕೊಡಗು, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರಿನಲ್ಲಿ ಮಳೆ ಹಾನಿ ಉಂಟಾಗಿದ್ದು, ಪರಿಹಾರ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ಸುತ್ತೂರು ಮಠಕ್ಕೆ ಶನಿವಾರ ಭೇಟಿ ನೀಡಿದ ಕುಮಾರಸ್ವಾಮಿ ಹಾಗೂ ಪತ್ನಿ ಅನಿತಾ ಕುಮಾರಸ್ವಾಮಿ ದಂಪತಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಭಾರಿ ಮಳೆಯಿಂದಾಗಿ ದೊಡ್ಡ ಮಟ್ಟದಲ್ಲಿ ನಷ್ಟ ಉಂಟಾಗಿದೆ. ಯಾವುದೇ ಸಮಸ್ಯೆ ಉದ್ಭವವಾದರೂ ಅದನ್ನು ಬಗೆಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಈ ವಿಷಯದಲ್ಲಿ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇನೆ. ಇದಕ್ಕೆ ಹಣದ ಕೊರತೆ ಇಲ್ಲ. ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಗೆ ₹5 ಕೋಟಿ ಹಣ ನೀಡಲಾಗಿದೆ. ಇನ್ನೂ ಹಣ ಬೇಕಾದರೆ ತಕ್ಷಣ ಬಿಡುಗಡೆ ಮಾಡುತ್ತೇನೆ’ ಎಂದು ಹೇಳಿದರು.

‘ಕೊಡಗು ಜಿಲ್ಲೆಗೆ ಮೊದಲ ಹಂತದಲ್ಲಿ ₹100 ಕೋಟಿ ನೀಡುವುದಾಗಿ ಘೋಷಿಸಿದ್ದೆ. ಈ ಪೈಕಿ ₹20 ಕೋಟಿಯನ್ನು ಬಿಡುಗಡೆ ಮಾಡಿದ್ದೇನೆ. ಅಲ್ಲಿ ಮಳೆ ನಿಂತ ಬಳಿಕ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತದೆ’ ಎಂದರು.

‘ಆಂಧ್ರಪ್ರದೇಶದಲ್ಲಿ ಅಜೀಂ ಪ್ರೇಮ್‌ಜಿ ಅವರ ಫೌಂಡೇಷನ್‌ ಮೂಲಕ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಮಾಡಲಾಗುತ್ತಿದೆ. 6 ಲಕ್ಷಕ್ಕೂ ಹೆಚ್ಚು ರೈತ ಕುಟುಂಬಗಳು ಅದರಲ್ಲಿ ಭಾಗಿಯಾಗಿವೆ. ಕರ್ನಾಟಕದಲ್ಲಿ ಈ ಪದ್ಧತಿ ಜಾರಿಗೊಳಿಸಲು ಸಹಕಾರ ನೀಡುವುದಾಗಿ ಅಜೀಂ ಪ್ರೇಮ್‌ಜಿ ಅವರು ಶುಕ್ರವಾರ (ಆಗಸ್ಟ್‌ 10) ಪತ್ರ ಬರೆದಿದ್ದಾರೆ. ನಾನೇ ಖುದ್ದು ಆಂಧ್ರಪ್ರದೇಶದ ಒಂದು ಭಾಗಕ್ಕೆ ಕೆಲವೇ ದಿನಗಳಲ್ಲಿ ಭೇಟಿ ನೀಡುತ್ತೇನೆ’ ಎಂದು ತಿಳಿಸಿದರು.

ವರ್ಗಾವಣೆ ದಂಧೆ ಸುಳ್ಳು: ‘ಎಲ್ಲಿ ವರ್ಗಾವಣೆ ದಂಧೆ ನಡೆದಿದೆ ತೋರಿಸಿ. ಪ್ರತಿ ಸರ್ಕಾರ ರಚನೆ ಆದಾಗ ಆಡಳಿತ ದೃಷ್ಟಿಯಿಂದ ವರ್ಗಾವಣೆ ಮಾಡಲಾಗುತ್ತದೆ. ಹಾಗಿದ್ದರೆ, ಬಿಜೆಪಿಯವರು 5 ವರ್ಷ ಆಡಳಿತ ನಡೆಸುವಾಗ ಯಾವ ನಿಯಮ ಅನುಸರಿಸುತ್ತಿದ್ದರು? ಈ ಬಗ್ಗೆ ತಿಳಿಸಿದರೆ ನಾನು ಉತ್ತರ ಕೊಡುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ವಿಶ್ವನಾಥ್‌, ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್‌, ಡಿ.ಸಿ.ತಮ್ಮಣ್ಣ, ಎನ್‌.ಮಹೇಶ್‌, ಶಾಸಕ ಅನಿಲ್‌ ಚಿಕ್ಕಮಾದು ಮೊದಲಾದವರು ಇದ್ದರು.

‘ಮಣ್ಣಿನ ಮಗ ಎಂಬುದನ್ನು ತೋರಿಸುವ ಅಗತ್ಯವಿಲ್ಲ’:

ಭತ್ತ ನಾಟಿ ಮಾಡುವ ಮೂಲಕ ಮಣ್ಣಿನ ಮಗ ಎಂಬುದನ್ನು ತೋರಿಸಿಕೊಳ್ಳುವ ಅಗತ್ಯವಿಲ್ಲ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಜಲಾಶಯಗಳಲ್ಲಿ ನೀರಿನ ಕೊರತೆ ಉಂಟಾಗಿದ್ದರಿಂದ ಮಂಡ್ಯ ಜಿಲ್ಲೆಯ ರೈತರು 3ರಿಂದ 4 ವರ್ಷಗಳಿಂದ ಭತ್ತ ನಾಟಿ ಮಾಡಿರಲಿಲ್ಲ. ಆದರೆ, ಈಗ ಉತ್ತಮ ಮಳೆಯಾಗಿದ್ದು, ಸೀತಾಪುರ ಎಂಬ ಹಳ್ಳಿಯಲ್ಲಿ ಭತ್ತ ನಾಟಿ ಮಾಡುವ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡುತ್ತಿದ್ದೇನೆ. ರೈತರು ಭತ್ತ ನಾಟಿ ಮಾಡುವುದು ಹೊಸದಲ್ಲ. ನನಗೆ ಪ್ರಚಾರಕ್ಕಿಂತ ಮುಖ್ಯವಾಗಿ ರೈತರಿಗೆ ಉತ್ಸಾಹ ತುಂಬುದು ಮುಖ್ಯ. ಬಿಜೆಪಿಯವರ ಟೀಕೆಗೆ ಉತ್ತರಿಸುವುದಿಲ್ಲ. ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಜರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !