ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಮೈದುಂಬುತ್ತಿರುವ ಕಪಿಲೆ, ನುಗು

ಜಿಲ್ಲೆಯಲ್ಲಿ ಮುಂಗಾರಿನ ಸಂಭ್ರಮ; ಎಲ್ಲೆಡೆ ಆಶ್ಲೇಷ ಮಳೆಯ ಅಬ್ಬರ
Last Updated 5 ಆಗಸ್ಟ್ 2020, 16:35 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯಲ್ಲಿ ಆಶ್ಲೇಷ ಮಳೆ ಅಬ್ಬರಿಸುತ್ತಿದ್ದು, ಕಪಿಲಾ ಮತ್ತು ನುಗು ನದಿಗಳು ಮೈದುಂಬಿ ಹರಿಯುತ್ತಿವೆ. ಕಬಿನಿ ಜಲಾಶಯದಿಂದ 50 ಸಾವಿರ ಕ್ಯುಸೆಕ್‌ನಷ್ಟು ನೀರನ್ನು ಹೊರಬಿಡಲಾಗುತ್ತಿದ್ದು, ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ.

ಜಲಾಶಯದ ಮಗ್ಗುಲಿನಲ್ಲೇ ಇರುವ ಬಿದರಹಳ್ಳಿ ಸೇತುವೆ ಮುಳುಗಡೆಯಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಜಲಾಶಯದ ಪಾತ್ರದಲ್ಲಿರುವ ಹಲವು ಜಮೀನುಗಳ ಮುಳುಗಡೆ ಭೀತಿಯನ್ನು ಎದುರಿಸುತ್ತಿವೆ.

ನಂಜನಗೂಡಿನಲ್ಲಿ ಹದಿನಾರುಕಾಲು ಮಂಟಪ ಅರ್ಧ ಮುಳುಗಡೆಯಾಗಿದ್ದರೆ, ಸ್ನಾನಘಟ್ಟದ ಮೆಟ್ಟಿಲುಗಳು ಮುಳುಗಿವೆ. ತಾಲ್ಲೂಕು ಆಡಳಿತವು ಈಗಾಗಲೇ ತಗ್ಗು ಪ್ರದೇಶಗಳ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಿದೆ.

ಪ್ರವಾಹ ಇನ್ನಷ್ಟು ಹೆಚ್ಚಿದರೆ ತೀರದಲ್ಲಿರುವ ಅಯ್ಯಪ್ಪಸ್ವಾಮಿ ದೇವಾಲಯ, ಚಾಮುಂಡೇಶ್ವರಿ ದೇವಾಲಯ, ಮಲ್ಲನಮೂಲೆ ಮಠ ಮುಳುಗಡೆಯಾಗುವ ಆತಂಕ ಎದುರಾಗಿದೆ.

ನದಿ ಪಾತ್ರದಲ್ಲಿರುವ ಕುರುಬಗೇರಿ, ನಯನಕ್ಷತ್ರಿಯ ಬೀದಿ, ಹಳ್ಳದಕೇರಿ, ಸರಸ್ವತಿ ಕಾಲೊನಿ ಮೊದಲಾದ ತಗ್ಗು ಪ್ರದೇಶಗಳಿಗೆ ಪ್ರವಾಹ ಭೀತಿ ಎದುರಾಗಿದೆ. ನಗರಸಭಾ ಆಯುಕ್ತ ಕರಿಬಸವಯ್ಯ ನಿನ್ನೆಯಿಂದ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿ ಜನರಿಗೆ ಎಚ್ಚರಿಕೆ ನೀಡಿ, ಸುರಕ್ಷಿತ ಪ್ರದೇಶಕ್ಕೆ ತೆರಳಲು ಸೂಚಿಸಿದ್ದಾರೆ.

ಸುತ್ತೂರು ಬಳಿ ಮೈದುಂಬಿದ ನದಿ

ಇಲ್ಲಿಗೆ ಸಮೀಪದ ಸುತ್ತೂರು ಬಳಿ ಕಪಿಲಾ ನದಿ ಬುಧವಾರ ಮೈದುಂಬಿ ಹರಿಯಿತು. ಸುತ್ತೂರು, ನಗರ್ಲೆ, ಬಿಳುಗಲಿ, ಹೊಸಕೋಟೆ, ಬಕ್ಕಳ್ಳಿ ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದೆ. ಇನ್ನೂ 6 ಅಡಿಯಷ್ಟು ನೀರು ಬಂದರೆ ಸೇತುವೆ ಮುಳುಗಡೆಯಾಗುತ್ತದೆ.

ಮನೆ ಕುಸಿತ

ಎಚ್.ಡಿ.ಕೋಟೆ: ತಾಲ್ಲೂಕಿನ ಹಿರೇಹಳ್ಳಿ ಹಾಡಿಯ ಬಸವರಾಜು ಎಂಬುವವರ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಮನೆ ಬೀಳುವ ಮುನ್ಸೂಚನೆ ಗೊತ್ತಾಗುತ್ತಿದ್ದಂತೆ ಎಲ್ಲರೂ ಪಕ್ಕದ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ತಾಲ್ಲೂಕಿನಾದ್ಯಂತ 22 ಮನೆಗಳಿಗೆ ಹಾನಿಯಾಗಿದೆ. ಜಾನುವಾರುಗಳನ್ನು ಮೇಯಿಸಲು ಸಾಧ್ಯವಾಗದೆ ರೈತರು ಪರದಾಡುತ್ತಿದ್ದಾರೆ. 10 ಎಕರೆ ಬಾಳೆ, 8 ಎಕರೆ ಹತ್ತಿ, 7 ಎಕರೆ ಅರಿಸಿನ ಬೆಳೆ ಹಾನಿಯಾಗಿದೆ.

ಹನಗೋಡಿನಲ್ಲಿ ಮನೆ ಕುಸಿತ

ಹನಗೋಡು: ಹೋಬಳಿಯಲ್ಲಿ ಮಳೆಯ ಅಬ್ಬರದಿಂದ ಬಿ.ಆರ್.ಕಾವಲಿನಲ್ಲಿ ರಾಮರಾಜ್ ಎಂಬವರ ಪತ್ನಿ ವಾಣಿ ಅವರಿಗೆ ಸೇರಿದ ಮನೆಯ ಗೋಡೆ, ಚಾವಣಿ ಕುಸಿದು ಬಿದ್ದಿದೆ. ಮನೆಯೊಳಗಿದ್ದ ಕುಟುಂಬದವರು ಪಾರಾಗಿದ್ದಾರೆ.

ಹಂಪಾಪುರದಲ್ಲಿ ಬೆಳೆ ಹಾನಿ

ಹಂಪಾಪುರ: ಹೋಬಳಿಯ ವಿವಿಧ ಗ್ರಾಮಗಳಲ್ಲಿ ನಾಟಿ ಮಾಡಿದ್ದ ಭತ್ತ ನೀರಿನಲ್ಲಿ ತೇಲಿಹೋಗಿದೆ. ಮುಸುಕಿನ ಜೋಳ ಮತ್ತು ಕಬ್ಬು ಭಾರಿ ಗಾಳಿಗೆ ನೆಲಕ್ಕೊರಗಿವೆ. ಬೆಳಗನಹಳ್ಳಿ ಗ್ರಾಮದಲ್ಲಿ ಕಟಾವಿನ ಹಂತಕ್ಕೆ ಬಂದಿದ್ದ ಬಾಳೆಗಳು ಅರ್ಧಕ್ಕೆ ಮುರಿದಿವೆ. ಇನ್ನೂ ಕೆಲ ರೈತರ ಜಮೀನುಗಳಲ್ಲಿ ಬಾಳೆ ಬುಡ ಸಮೇತ ಬಿದ್ದಿದ್ದು, ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT