ಶನಿವಾರ, ಅಕ್ಟೋಬರ್ 16, 2021
23 °C
ಜಂಬೂಸವಾರಿ ಸಿಬ್ಬಂದಿಯ ವೈದ್ಯಕೀಯ ತಪಾಸಣೆ

ಮೈಸೂರು: ಗಜಪಡೆಗೆ ಪೂಜೆ, ಮಾವುತರಿಗೆ ಸಮವಸ್ತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ದಸರಾ ಗಜಪಡೆಗೆ ಅರಣ್ಯ ಸಚಿವರಿಂದ ವಿಶೇಷ ಪೂಜೆ, ಜಂಬೂಸವಾರಿ ಸಿಬ್ಬಂದಿಗೆ ಆರೋಗ್ಯ ತಪಾಸಣೆ, ಸಮವಸ್ತ್ರ ವಿತರಣೆಯ ಕಾರ್ಯಕ್ರಮಗಳ ಮೂಲಕ ಅರಮನೆಯು ಗುರುವಾರ ವಿಶೇಷ ಗಮನ ಸೆಳೆಯಿತು.

ಅರಣ್ಯ ಇಲಾಖೆ ಸಚಿವ ಉಮೇಶ್‌ಕತ್ತಿ ಅವರು ಸಂಸಾರ ಸಮೇತರಾಗಿ ಗುರುವಾರ ಇಲ್ಲಿನ ಅರಮನೆಗೆ ಭೇಟಿ ನೀಡಿ, ದಸರಾ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಿದರು. ಆನೆಗಳ ತಾಲೀಮು, ಜಂಬೂಸವಾರಿಯ ಸಿದ್ಧತೆ, ಆನೆಗಳ ಆರೋಗ್ಯ ಸೇರಿದಂತೆ ಹಲವು ಮಾಹಿತಿಗಳನ್ನು ಪಡೆದುಕೊಂಡ ಅವರು, ಆನೆಗಳಿಗೆ ಬೆಲ್ಲ, ಕಾಯಿ, ಕಬ್ಬು ತಿನ್ನಿಸಿದರು. ಮಾವುತರಿಗೆ ಸಮವಸ್ತ್ರದ ಕಿಟ್‌ ವಿತರಿಸಿ, ಶುಭ ಹಾರೈಸಿದರು.

ಆರೋಗ್ಯ ತಪಾಸಣೆ; ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಮಾವುತರು, ಕಾವಾಡಿಗಳು ಸೇರಿದಂತೆ ಎಲ್ಲ ಸಿಬ್ಬಂದಿಗೆ ಗುರುವಾರ ಅರಣ್ಯ ಇಲಾಖೆ ವತಿಯಿಂದ ವೈದ್ಯಕೀಯ ಶಿಬಿರವನ್ನು ಏರ್ಪಡಿಸಲಾಗಿತ್ತು. 4 ಆಸ್ಪತ್ರೆಗಳ ವೈದ್ಯರು ಸುಮಾರು 40ಕ್ಕೂ ಹೆಚ್ಚು ಸಿಬ್ಬಂದಿಯ ಆರೋಗ್ಯ ತಪಾಸಣೆ ನಡೆಸಿದರು.

ಸುರಿಯುತ್ತಿದ್ದ ಮಳೆಯ ನಡುವೆಯೂ ವೈದ್ಯರು, ಶೂಶ್ರೂಷಕರು ತಪಾಸಣೆ ನಡೆಸಿದ್ದು ವಿಶೇಷವಾಗಿತ್ತು. ಯಾವುದೇ ಸಂದರ್ಭದಲ್ಲಿ ಅನಾರೋಗ್ಯಕ್ಕೀಡಾದರೆ ತಕ್ಷಣ ಸ್ಪಂದಿಸುವ ಭರವಸೆ ನೀಡುವ ಮೂಲಕ ಸಿಬ್ಬಂದಿಯಲ್ಲಿ ಆತ್ಮವಿಶ್ವಾಸ ತುಂಬಿದರು.

ನಾರಾಯಣ ಹೃದಯಾಲಯ, ಐ ಕೇರ್, ಸೆಕ್ಯೂರ್ ಆಸ್ಪತ್ರೆ ಹಾಗೂ ಎ.ಎಂ.ಫೌಂಡೇಷನ್‌ ವೈದ್ಯ–ಸಿಬ್ಬಂದಿ ಭಾಗಿಯಾಗಿದ್ದರು. ಕಣ್ಣು, ಹಲ್ಲು, ರಕ್ತ, ರಕ್ತದೊತ್ತಡ, ಮಧುಮೇಹ ಸೇರಿದಂತೆ ಹಲವು ಬಗೆಯ ತಪಾಸಣೆಗಳು ನಡೆದವು. ಎಪಿಸಿಸಿಎಫ್ ಜಗತ್‌ರಾಮನ್, ಡಿಸಿಎಫ್ ವಿ.ಕರಿಕಾಳನ್, ಎಸಿಎಫ್ ರವಿಶಂಕರ್ ಇದ್ದರು.

ಆನೆಗಳ ಯೋಗಕ್ಷೇಮ ವಿಚಾರಿಸಿದ ರಾಜವಂಶಸ್ಥರು

ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪತ್ನಿ ತ್ರಿಷಿಕಾ ತಮ್ಮ ಪುತ್ರ ಆದ್ಯಾವೀರ್‌ ಒಡೆಯರ್ ಅವರು ಜೊತೆಗೆ, ಸುರಿಯುತ್ತಿದ್ದ ಮಳೆಯ ನಡುವೆಯೇ ಅರಮನೆ ಆನೆಗಳ ಯೋಗಕ್ಷೇಮ ವಿಚಾರಿಸಿದರು.

ದಸರಾ ಮತ್ತು ಅರಮನೆ ಆನೆಗಳಿಗೆ ಬಾಳೆಹಣ್ಣುಗಳನ್ನು ತಿನ್ನಿಸಿದ ಅವರು ಮಾವುತರು ಮತ್ತು ಕಾವಾಡಿಗಳ ಜತೆ ಕೆಲಕಾಲ ಮಾತನಾಡಿದರು.

ಮಳೆಯಲ್ಲಿ ಮಿಂದ ಗಜಪಡೆ

ನಗರದಲ್ಲಿ ಸುರಿದ ಧಾರಾಕಾರ ಮಳೆಯಲ್ಲಿ ದಸರಾ ಗಜಪಡೆ ಮಿಂದೆದ್ದಿತು. ಮಳೆಯಲ್ಲಿಯೇ ನೆನೆಯತ್ತ ಆನೆಗಳು ಚೆಲ್ಲಾಟದಲ್ಲಿ ತೊಡಗಿದ್ದವು. ಕಾವಾಡಿಗಳು ಮಳೆಯ ಜತೆಗೆ ಪೈಪ್‌ ಮೂಲಕ ನೀರನ್ನು ಬಿಟ್ಟು ಮಜ್ಜನ ಮಾಡಿಸಿದರು. ಈ ದೃಶ್ಯಗಳನ್ನು ಸಾರ್ವಜನಿಕರು ಕಣ್ತುಂಬಿಕೊಂಡು ಖುಷಿಪಟ್ಟರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು