ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಪದವೀಧರರ ಕ್ಷೇತ್ರ: ಇತಿಹಾಸ ಬರೆದ ಕಾಂಗ್ರೆಸ್, BJP, JDS ಸೋತಿದ್ದೇಕೆ?

ಹಳೆ ಮೈಸೂರಿನಲ್ಲಿ ಫಲ ನೀಡದ ಬಿಜೆಪಿ ಪ್ರಯತ್ನ
Last Updated 16 ಜೂನ್ 2022, 11:23 IST
ಅಕ್ಷರ ಗಾತ್ರ

ಮೈಸೂರು:ತೀವ್ರ ಕುತೂಹಲ ಕೆರಳಿಸಿದ್ದ ವಿಧಾನಪರಿಷತ್ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ 12,205 ಮತಗಳ ಅಂತರದಿಂದ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಈ ಕ್ಷೇತ್ರದಲ್ಲಿ ಪ್ರಪ್ರಥಮ ಬಾರಿಗೆ ಕಾಂಗ್ರೆಸ್ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದೆ. ಅಲ್ಲದೇ, ಬಿಜೆಪಿ ಹಾಗೂ ಜೆಡಿಎಸ್ ಭದ್ರಕೋಟೆಯಾಗಿದ್ದ ಕ್ಷೇತ್ರವನ್ನು ‘ಕೈ’ ವಶ ಮಾಡಿಕೊಂಡಿದೆ.

ಇಲ್ಲಿನ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಬುಧವಾರ ಬೆಳಿಗ್ಗೆ ಆರಂಭವಾದ ಮತ ಎಣಿಕೆ ಕಾರ್ಯವು ಗುರುವಾರ ಮಧ್ಯಾಹ್ನ 1ರ ಸುಮಾರಿಗೆ ಪೂರ್ಣಗೊಂಡಿತು. ಬಿಜೆಪಿಯ ಮೈ.ವಿ.‌ ರವಿಶಂಕರ್ 33,878 ಮತಗಳನ್ನು ಗಳಿಸಿದರು.ಜೆಡಿಎಸ್ ಅಭ್ಯರ್ಥಿ ಎಚ್.ಕೆ. ರಾಮು 19,630 ಮತಗಳನ್ನಷ್ಟೆ ಪಡೆಯಲು ಶಕ್ತರಾಗುವುದರೊಂದಿಗೆ ಪಕ್ಷವು ಮುಖಭಂಗ ಅನುಭವಿಸಿತು. ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳನ್ನು ಒಳಗೊಂಡಿರುವ ಹಳೆ ಮೈಸೂರು ಭಾಗದ ಈ ಕ್ಷೇತ್ರವನ್ನು ಈ ಹಿಂದೆ ಬಿಜೆಪಿ ಹಾಗೂ ಜೆಡಿಎಸ್‌ ಅಭ್ಯರ್ಥಿಗಳು ಪ್ರತಿನಿಧಿಸಿದ್ದರು. ಹಾಲಿ ಜೆಡಿಎಸ್‌ ವಶದಲ್ಲಿತ್ತು. ಕಾಂಗ್ರೆಸ್‌ನ ಈ ಗೆಲುವು, ಜೆಡಿಎಸ್‌ ಭದ್ರಕೋಟೆಯಲ್ಲಿ ಬಿರುಕು ಉಂಟಾಗಿರುವುದನ್ನು ತೋರಿಸಿದೆ.

ಎಲಿಮಿನೇಷನ್ ಪ್ರಕ್ರಿಯೆಯಲ್ಲಿ 17 ಅಭ್ಯರ್ಥಿಗಳನ್ನು ಎಲಿಮಿನೇಟ್ ಮಾಡಿದ ಬಳಿಕವೂ, ಅತಿ ಹೆಚ್ಚು ಮತ ಗಳಿಸಿದ್ದ ಮಧು ಅವರಿಗೆ ನಿಗದಿತ ಕೋಟಾ ತಲುಪಲು (46083) 808 ಮತಗಳ ಕೊರತೆ ಎದುರಾಯಿತು. ಆಗ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿ ಸ್ಪರ್ಧಿ ಮೈ.ವಿ. ರವಿಶಂಕರ್ ಅವರ ಮತಪತ್ರದಲ್ಲಿ ಅಗತ್ಯವಿರುವ 808 ಮತಗಳು ಬರುವವರೆಗೆ ಮಾತ್ರವೇ ಎಣಿಕೆ ಪ್ರಕ್ರಿಯೆಯನ್ನು ಅಧಿಕಾರಿಗಳು ನಡೆಸಿದರು. ಕೋಟಾ ತಲುಪುತ್ತಿದ್ದಂತೆಯೇ ಮಧು ಅವರನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸಲಾಯಿತು. ನಿರಂತರ 29 ತಾಸುಗಳವರೆಗೆ ಪ್ರಕ್ರಿಯೆ ನಡೆಯಿತು. ಈ ಕ್ಷೇತ್ರದಲ್ಲಿ ಇಷ್ಟು ಸುದೀರ್ಘ ಸಮಯದವರೆಗೆ ಮತ ಎಣಿಕೆ ಕಾರ್ಯ ನಡೆದದ್ದು ಕೂಡ ದಾಖಲೆಯೇ.

ಮಧು ಜಿ. ಮಾದೇಗೌಡ ಗೆಲುವಿಗೆ ಕಾರಣವಾಗಿದ್ದೇನು?

ಮಂಡ್ಯದ ಮಾಜಿ ಸಂಸದ ಹಾಗೂ ರೈತ ನಾಯಕ‌ ದಿವಂಗತ ಜಿ.ಮಾದೇಗೌಡರ ಪುತ್ರ ಎಂಬ ನಾಮಬಲ ಮಧು ಕೈಹಿಡಿದಿದೆ. ಚುನಾವಣೆ ಘೋಷಣೆಗೆ ವರ್ಷವಿರುವಾಗಲೇ ಅಭ್ಯರ್ಥಿ ಹೆಸರನ್ನು ಕಾಂಗ್ರೆಸ್‌ ಪ್ರಕಟಿಸಿತ್ತು. ಅಭ್ಯರ್ಥಿಯು, ವ್ಯವಸ್ಥಿತವಾಗಿ ಮತದಾರರ ನೋಂದಣಿ ಮಾಡಿಸಿದ್ದು ಹಾಗೂ ಅವರನ್ನು ತಮ್ಮದೇ ಜಾಲದ ಮೂಲಕ ತಲುಪಿದ್ದು ಸಹಕಾರಿಯಾಯಿತು.

ಬಂಡಾಯ ಉಂಟಾಗದಂತೆ ಹಾಗೂ ಪಕ್ಷದ ಪರ ಪ್ರಚಾರ ಮಾಡುವಂತೆ ಸಿದ್ದರಾಮಯ್ಯ ಅವರು ಟಿಕೆಟ್ ಆಕಾಂಕ್ಷಿಗಳ ಮನವೊಲಿಸಿದ್ದರು. ನಾಲ್ಕೂ ಜಿಲ್ಲೆಗಳಲ್ಲಿ ಹಾಲಿ ಹಾಗೂ ಮಾಜಿ ಶಾಸಕರು, ಮುಖಂಡರು ಹಾಗೂ ಪದಾಧಿಕಾರಿಗಳ ಸಂಘಟಿತ ಪ್ರಯತ್ನ ಕೈ ಹಿಡಿಯಿತು. ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದ ಸಿದ್ದರಾಮಯ್ಯ, ಬೆಂಬಲಿಗರಿಗೆ ಸ್ಪಷ್ಟ ಸೂಚನೆ ನೀಡಿದ್ದರು. ಬಿಜೆಪಿ ಹಾಗೂ ಜೆಡಿಎಸ್‌ಗೆ ಬಿದ್ದ ಒಳೇಟು ಮತ್ತು ವಿಧಾನಪರಿಷತ್‌ ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಅವರ ಬೆಂಬಲ ಗೆಲುವಿನ‌ ದಡ ಸೇರಲು ನೆರವಾಯಿತು. ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳ ಆಡಳಿತದ ವಿರುದ್ಧ ಬೇಸತ್ತಿದ್ದ ಪದವೀಧರರನ್ನು ಸೆಳೆದುಕೊಳ್ಳುವಲ್ಲಿ ಕಾಂಗ್ರೆಸ್ ರೂಪಿಸಿದ ಕಾರ್ಯತಂತ್ರ ಫಲ‌ ನೀಡಿದೆ.

ವಿಧಾನಪರಿಷತ್‌ ದಕ್ಷಿಣ ಪದವೀಧರರ ಕ್ಷೇತ್ರ: ಬಿಜೆಪಿ ಸೋಲಿಗೆ ಕಾರಣಗಳೇನು?

* ಅತಿಯಾದ ಆತ್ಮವಿಶ್ವಾಸ

* ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮದೇ ಸರ್ಕಾರವಿದ್ದು, ನೌಕರರು ಹಾಗೂ ಶಿಕ್ಷಕರು ಮತ ಚಲಾಯಿಸುತ್ತಾರೆಂಬ ನಂಬಿಕೆ.

* ಮಂಡ್ಯ ಹಾಗೂ ಹಾಸನ ಜಿಲ್ಲೆಗಳಲ್ಲಿ ಮತ್ತು ಮೈಸೂರು ನಗರದಲ್ಲಿ ಬಿಜೆಪಿಗೆ ನಿರೀಕ್ಷಿತ ಮತಗಳು ಬರಲಿಲ್ಲ.

* ಟಿಕೆಟ್ ದೊರೆಯದ ಅಸಮಾಧಾನಗೊಂಡಿದ್ದ ವಿಧಾನಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಪೂರ್ಣ ಪ್ರಮಾಣದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗದಿದ್ದುದು.

* ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.‌ ಸೋಮಶೇಖರ್ ಹೊರತುಪಡಿಸಿ ಉಳಿದ ಮೂರು ಜಿಲ್ಲೆಗಳ ಉಸ್ತುವಾರಿ ಸಚಿವರು ಸಂಪೂರ್ಣವಾಗಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗದಿರುವುದು.

* ಸಿದ್ದರಾಮಯ್ಯ ಅವರನ್ನು ಟೀಕಿಸುವ ಭರದಲ್ಲಿ ವಕೀಲರನ್ನು ಸಂಸದ ಪ್ರತಾಪ ಸಿಂಹ ಅಪಮಾನಿಸಿದರೆಂಬ ಆಕ್ರೋಶ ಪಕ್ಷಕ್ಕೆ ತಿರುಗುಬಾಣವಾಯಿತು.

* ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಸಚಿವ ವಿ.ಸೋಮಣ್ಣ ಅವರ ಮುಸುಕಿನ ಗುದ್ದಾಟ ಮತ್ತು ಬಿ.ಎಸ್. ಯಡಿಯೂರಪ್ಪ ಅವರು ಈ ಕ್ಷೇತ್ರದಲ್ಲಿ ಪ್ರಚಾರ ಮಾಡದಿರುವುದು ಮತ ಗಳಿಕೆ ಪ್ರಮಾಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು.

* ಮೈಸೂರು ನಗರದಲ್ಲಿ ಬಿಜೆಪಿ ಅಂದಾಜಿಸಿದ್ದ ಮತಗಳು ಬಾರದಿರುವುದು‌. ಪ್ರಬಲ ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡ ಅವರ ಕಾರ್ಯತಂತ್ರ ಅರಿಯಲು ವಿಫಲವಾಗಿದ್ದು ಬಿಜೆಪಿಯ ಮುಖಭಂಗಕ್ಕೆ ಕಾರಣವಾಗಿದೆ.

* 2ನೇ ಪ್ರಾಶಸ್ತ್ಯದ ಮತಗಳನ್ನು ಕೇಳದೆ, ಮೊದಲ ಪ್ರಾಶಸ್ತ್ಯದ ಮತಗಳಿಗಷ್ಟೆ ಕೇಂದ್ರೀಕರಿಸಿದ್ದ ಲೆಕ್ಕಾಚಾರ ಫಲ ನೀಡಲಿಲ್ಲ.

ಜೆಡಿಎಸ್ ಸೋಲಿಗೆ ಕಾರಣವೇನು?

* ಕ್ಷೇತ್ರವು ಪಕ್ಷದ ಭದ್ರಕೋಟೆ ಎಂಬ ಅತಿಯಾದ ಆತ್ಮವಿಶ್ವಾಸದಿಂದ ಪ್ರಚಾರ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ಕೊಡದಿರುವುದು.

* ಎಚ್.ಡಿ. ಕುಮಾರಸ್ವಾಮಿ ಹಾಗೂ ಆ ಪಕ್ಷದ ಸ್ಥಳೀಯ ನಾಯಕರು ಪರಿಣಾಮಕಾರಿಯಾಗಿ ಪ್ರಚಾರ ಕಾರ್ಯದಲ್ಲಿ ತೊಡಗಲಿಲ್ಲ.

* ಜೆಡಿಎಸ್ ಅಭ್ಯರ್ಥಿ ವಿರುದ್ಧ ಅದೇ ಪಕ್ಷದ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರು ಬಹಿರಂಗವಾಗಿಯೇ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಯಾಚನೆ ಮಾಡಿದ್ದುದು ಪರಿಣಾಮ ಬೀರಿದೆ. ಜೊತೆಗೆ ಮಂಡ್ಯದ ಮುಖಂಡ ಕೀಲಾರ ಜಯರಾಮ್ ಮೊದಲಾದವರು ಕೂಡ ಜೆಡಿಎಸ್ ಪಕ್ಷಕ್ಕೆ ಮಗ್ಗುಲು ಮುಳ್ಳಾಗಿ ಕಾಡಿದರು.

* ‘ಅಭ್ಯರ್ಥಿ ಎಚ್.ಕೆ. ರಾಮು ಪಕ್ಷದ ಕಾರ್ಯಕರ್ತರಲ್ಲ, ಅವರು ಹೊರಗಿನಿಂದ ಬಂದವರು’ ಎಂಬ ಭಾವನೆಯು ಬಹುತೇಕ ಕಾರ್ಯಕರ್ತರಲ್ಲಿ ಮನೆ ಮಾಡಿದ್ದುದು.

* ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡರ ಸಾಮರ್ಥ್ಯವನ್ನು ಹಗುರವಾಗಿ ಪರಿಗಣಿಸಿದ್ದರಿಂದ ಮಂಡ್ಯ ಜಿಲ್ಲೆಯಲ್ಲಿ ತೀವ್ರ ಹಿನ್ನಡೆಯಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.

ಮಧುಗೆ ಪ್ರಮಾಣಪತ್ರ ವಿತರಣೆ

ವಿಧಾನಪರಿಷತ್‌ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಜಯ ಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ ಅವರಿಗೆ ಪ್ರಾದೇಶಿಕ ಆಯುಕ್ತರೂ ಆಗಿರುವ ಚುನಾವಣಾಧಿಕಾರಿ ಡಾ.ಜಿ.ಸಿ. ಪ್ರಕಾಶ್ ಮತ್ತು ಸಹಾಯಕ ಚುನಾವಣಾಧಿಕಾರಿ ಪ್ರಮಾಣಪತ್ರವನ್ನು ಗುರುವಾರ ವಿತರಿಸಿದರು. ಮುಖಂಡ ಪಿ.ಎಂ. ನರೇಂದ್ರಸ್ವಾಮಿ ಹಾಗೂ ತನ್ವೀರ್‌ ಸೇಠ್ ಮತ್ತು ಮುಖಂಡರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT