ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಪ್ರತ್ಯೇಕ ಧರ್ಮದಿಂದ ಮೀಸಲಾತಿ

ಕುಷ್ಟಗಿ: ಪಂಚಮಸಾಲಿ ಸಮಾವೇಶದಲ್ಲಿ ಶಾಸಕ ಕಾಶೆಪ್ಪನವರ ಹೇಳಿಕೆ
Last Updated 5 ಮಾರ್ಚ್ 2018, 9:18 IST
ಅಕ್ಷರ ಗಾತ್ರ

ಕುಷ್ಟಗಿ: ‘ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ದೊರೆತರೆ ಶೈಕ್ಷಣಿಕ, ಉದ್ಯೋಗ ಎಲ್ಲ ರೀತಿಯ ಮೀಸಲಾತಿಗಳು ದೊರೆಯುತ್ತವೆ’ ಎಂದು ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಘಟಕದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶೆಪ್ಪನವರ ಹೇಳಿದರು.

ಭಾನುವಾರ ಪಟ್ಟಣದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಪಂಚಮಸಾಲಿ ನೌಕರರ ಜಿಲ್ಲಾ ಮಟ್ಟದ ತೃತೀಯ ಸಮಾವೇಶದಲ್ಲಿ ಮಾತನಾಡಿದರು.

‘ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶೀಘ್ರದಲ್ಲಿ ಕೇಂದ್ರಕ್ಕೆ ಶಿಫಾರಸು ಮಾಡಲಿದ್ದಾರೆ. ಮಾನ್ಯತೆ ದೊರೆತ ನಂತರ ಲಿಂಗಾಯತಕ್ಕೆ ಅಲ್ಪ ಸಂಖ್ಯಾತ ಸ್ಥಾನಮಾನವೂ ದೊರೆಯುವುದರಲ್ಲಿ ಎರಡು ಮಾತಿಲ್ಲ. ಮೀಸಲಾತಿ ಅನ್ವಯ ಮಕ್ಕಳು, ವಿದ್ಯಾವಂತರಿಗೆ ಎಲ್ಲ ರೀತಿಯ ಅವಕಾಶಗಳೂ ಲಭ್ಯವಾಗುತ್ತವೆ. ಪ್ರತ್ಯೇಕ ಧರ್ಮಕ್ಕಾಗಿ ಎಲ್ಲರೂ ಬೆಂಬಲ ನೀಡೋಣ’ ಎಂದರು.

‘ಈ ಸಮುದಾಯ ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದೆ, ಮೇಲ್ವರ್ಗದವರು, ಬಹುಸಂಖ್ಯಾತರು ಎಂದು ಹೇಳಿಕೊಳ್ಳುತ್ತಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಈಗಲೂ ಅನೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ, ಆದರೆ, ಬೇಡಿಕೆ ಇನ್ನೂ ಈಡೇರಿಲ್ಲ, ಈ ಸಮುದಾಯಕ್ಕೆ ಶೇ 15ರ ಅನುಪಾತದಲ್ಲಿ ಮೀಸಲಾತಿ ದೊರೆಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕಿದೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಂಸದ ಎಸ್‌.ಶಿವರಾಮೇಗೌಡ ಮಾತನಾಡಿ, ‘ಸಮಾಜ ಮತ್ತು ನೌಕರರಿಗೆ ರಾಜಕೀಯ ಕೃಪೆ ಅನಿವಾರ್ಯವಾಗಿದೆ, ಹಾಗಾಗಿ ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಿಸುವಷ್ಟರ ಮಟ್ಟಿಗೆ ನೌಕರವರ್ಗ ಬೆಳೆಯಬೇಕು. ಆತ್ಮವಿಶ್ವಾಸ ಕಳೆದುಕೊಳ್ಳಬಾರದು, ಸಹೋದರ ಸಮಾಜದವರನ್ನೂ ಗೌರವಿಸಬೇಕು’ ಎಂದು ಹೇಳಿದರು.

ಮಾಜಿ ಸಚಿವ ಅಮರೇಗೌಡ ಬಯ್ಯಾಪುರ, ಪಂಚಮಸಾಲಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಗದೀಶ ಗೌಡಪ್ಪ ಪಾಟೀಲ, ಗೌರವಾಧ್ಯಕ್ಷ ಸೋಮನಗೌಡ ಪಾಟೀಲ, ಅಮರೇಶ ಕೌದಿ, ಹೈಕೋರ್ಟ್‌ನ ಸರ್ಕಾರಿ ವಕೀಲ ಬಿ.ಎಸ್‌.ಪಾಟೀಲ ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ವೇತಾ ಮೇಟಿ ವಿಶೇಷ ಉಪನ್ಯಾಸ ನೀಡಿದರು.

ತಾಲ್ಲೂಕು ಘಟಕದ ಅಧ್ಯಕ್ಷ ರಾಜು ಬಾಳಿತೋಟ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಶಾಸಕ ಹಸನ್‌ಸಾಬ್‌ ದೋಟಿಹಾಳ, ದೇವೇಂದ್ರಪ್ಪ ಬಳೂಟಗಿ, ನೀಲಮ್ಮ ಭಾವಿಮನಿ, ಕೆ.ಮಹೇಶ್‌, ಭೀಮಣ್ಣ ಅಗಸಿಮುಂದಿನ, ಬಸವರಾಜ ಹಳ್ಳೂರು, ಚಂದ್ರಶೇಖರ ನಾಲತ್ವಾಡ, ಶಂಭುಲಿಂಗನಗೌಡ ಹಲಗೇರಿ, ಮಲ್ಲಿಕಾರ್ಜುನ ಬಳ್ಳಾರಿ, ಸುರೇಶ ಶಡಶ್ಯಾಳ, ಫಾದರ್‌ ಎನ್‌.ಎ.ವಿನ್ಸೆಂಟ್‌, ದೇವೇಂದ್ರಗೌಡ ಮೇಟಿ ಇದ್ದರು. ಪಂಚಮಸಾಲಿ ಪತ್ತಿನ ಸಹಕಾರ ಸಂಘದ ಷೇರು ಸಂಗ್ರಹಣೆಗೆ ಚಾಲನೆ ನೀಡಲಾಯಿತು. ಮತ್ತು ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಸನ್ಮಾನಿಸಲಾಯಿತು. ಅಭಿವೃದ್ಧಿ ಅಧಿಕಾರಿ ನಿಂಗಪ್ಪ ಮೂಲಿಮನಿ ಸ್ವಾಗತಿಸಿದರು.

**

‘ಬಡ್ತಿ ಮೀಸಲಾತಿ: ಆದೇಶ ಕಡೆಗಣನೆ’

ಬಡ್ತಿ ಮೀಸಲಾತಿ ವಿಷಯದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವನ್ನು ಪಾಲಿಸುವಲ್ಲಿ ರಾಜ್ಯ ಸರ್ಕಾರ ಮೀನ ಮೇಷ ಎಣಿಸುತ್ತಿದೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಗದೀಶ ಗೌಡಪ್ಪ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.

‘ಅರ್ಹತೆ ಇದ್ದವರಿಗೂ ಅರ್ಹ ಹುದ್ದೆಗಳು ದೊರೆತಿಲ್ಲ, ಅನ
ರ್ಹರು ನಮ್ಮ ಮೇಲಿನ ಸ್ಥಾನಗಳಲ್ಲಿ ಕುಳಿತಿದ್ದಾರೆ.
ಅಹಿಂಸಾ ವರ್ಗಕ್ಕೆ ಬಡ್ತಿ ಮೀಸಲಾತಿಯಲ್ಲಿ ಅನ್ಯಾಯವಾಗಿದ್ದನ್ನು ಸರಿಪಡಿಸುವಂತೆ ನೀಡಿರುವ ನ್ಯಾಯಾಲಯದ ಆದೇಶವನ್ನು ರಾಜ್ಯ ಸರ್ಕಾರ ಗೌರವಿಸದಿರುವುದು ದುರದೃಷ್ಟಕರ. ಈ ವಿಷಯದಲ್ಲಿ ಎಲ್ಲರೂ ಸಂಘಟಿತರಾಗುವ ಅನಿವಾರ್ಯತೆ ಇದೆ’ ಎಂದರು.

ರಾಜ್ಯ ಹೈಕೋರ್ಟ್‌ನ ಸರ್ಕಾರಿ ವಕೀಲ ಬಿ.ಎಸ್‌.ಪಾಟೀಲ ಮಾತನಾಡಿ, ‘ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ವಿಷಯದಲ್ಲಿ ಮೀಸಲಾತಿ ವಿಚಾರ ಗೌಣವಾಗಿದೆ. ಪಂಚಮಸಾಲಿ ಸಮುದಾಯಕ್ಕೆ ಶೇ 15ರಷ್ಟು ಮೀಸಲಾತಿ ಬೇಡಿಕೆ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರತಿನಿಧಿಗಳಿಗೆ ಸಮುದಾಯ ಪೂರ್ಣ ಸಹಕಾರ ನೀಡಲಿದೆ. ಆದರೆ, ಈ ವಿಷಯವಾಗಿ ಜಯಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದಲ್ಲಿ ವಿಕಾಸಸೌಧಕ್ಕೆ ಮುತ್ತಿಗೆ ಹಾಕಿದಾಗ ನೀಡಿದ್ದ ಭರವಸೆಯನ್ನು ಸರ್ಕಾರ ಮರೆತಿದೆ’ ಎಂದು ದೂರಿದರು.

**

ಸಮಾಜದ ಅಭಿವೃದ್ಧಿಗೆ ರಾಜಕೀಯದ ಕೃಪೆ ಬೇಕು. ನೌಕರರು ರಾಜಕೀಯ ವ್ಯವಸ್ಥೆ ನಿಯಂತ್ರಿಸುವ ಶಕ್ತಿ ಬೆಳೆಸಿಕೊಳ್ಳಲು ಮುಂದಾಗಬೇಕು.

–ಎಸ್‌.ಶಿವರಾಮೇಗೌಡ, ಮಾಜಿ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT