ಭಾನುವಾರ, ಅಕ್ಟೋಬರ್ 20, 2019
27 °C
ವಿಚಾರ ಸಂಕಿರಣದಲ್ಲಿ ನ್ಯಾಯಮೂರ್ತಿ ಎಚ್.ಪಿ.ಸಂದೇಶ್‌ ಹೇಳಿಕೆ

ಯಾರೂ ಮೇಲಲ್ಲ‍; ಸಂವಿಧಾನವೇ ಶ್ರೇಷ್ಠ

Published:
Updated:
Prajavani

ಮೈಸೂರು: ‘ಶಾಸಕಾಂಗ, ‌‌‌ಕಾರ್ಯಾಂಗ, ನ್ಯಾಯಾಂಗದ ನಡುವೆ ಘರ್ಷಣೆ ನಡೆಯುತ್ತಿದೆ. ಯಾರು ಮೇಲು ಎಂಬ ತಿಕ್ಕಾಟ ಶುರುವಾಗಿದ್ದು, ಪದೇಪದೇ ಅತಿಕ್ರಮಣ ನಡೆಯುತ್ತಿದೆ. ಆದರೆ, ಇಲ್ಲಿ ಯಾರೂ ಮೇಲಲ್ಲ; ಸಂವಿಧಾನವೇ ಸರ್ವಶ್ರೇಷ್ಠ’ ಎಂದು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಎಚ್.ಪಿ.ಸಂದೇಶ್‌ ಹೇಳಿದರು.

ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ‘ಭಾರತದಲ್ಲಿ ಕಾನೂನು ಮತ್ತು ಸಾಮಾಜಿಕ ಪರಿವರ್ತನೆ: ವಿವಾದಗಳು ಹಾಗೂ ಸವಾಲುಗಳು’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಸಂವಿಧಾನದ ಆಶೋತ್ತರಗಳಿಗೆ ಸ್ಪಂದಿಸುವುದು ಈ ಮೂರು ಅಂಗಗಳು ಮಾತ್ರವಲ್ಲ; ಪ್ರತಿ ಪ್ರಜೆಯ ಜವಾಬ್ದಾರಿಯೂ ಇದೆ’ ಎಂದರು.

‘ಜನರ ಎದುರೇ ಹತ್ಯೆಯಾಗಿದ್ದರೂ ನ್ಯಾಯಾಲಯ ಏನೂ ಮಾಡುತ್ತಿಲ್ಲ ಎಂದು ಕೆಲವರು ಟೀಕಿಸುತ್ತಾರೆ. ತಪ್ಪಿತಸ್ಥರನ್ನು ಗುರುತಿಸಲು ನ್ಯಾಯಾಲಯಕ್ಕೆ ಸಾಕ್ಷಿ ಬೇಕು, ಆದರೆ ಎಲ್ಲರೂ ಹಣದ ಹಿಂದೆ ಬಿದ್ದಿದ್ದು, ಮೋಹ ಆವರಿಸಿಕೊಂಡಿದೆ. ಅತ್ಯಾಚಾರ ನಡೆದಿದ್ದರೂ ಕೋರ್ಟ್‌ಗೆ ಬಂದಾಗ, ಏನಾಯಿತು ಎಂಬುದೇ ಗೊತ್ತಿಲ್ಲ ಎನ್ನುವವರಿದ್ದಾರೆ. ಕಣ್ಣೆದುರು ಹತ್ಯೆ ಮಾಡಿದರೂ ನ್ಯಾಯಾಲಯಕ್ಕೆ ಬಂದು ಸಾಕ್ಷಿ ಹೇಳುವುದಿಲ್ಲ’ ಎಂದು ವಿಷಾದಿಸಿದರು.

‘ಕಾನೂನು ರೂಪಿಸಿದರಷ್ಟೇ ಸಾಲದು, ಸಮರ್ಪಕ ಅನುಷ್ಠಾನವೂ ಆಗಬೇಕು. ಆಗ ಮಾತ್ರ ದೇಶದ ಅಭ್ಯುದಯ ಸಾಧ್ಯ. ಇದು ನಮ್ಮ ಮುಂದೆ ಇರುವ ದೊಡ್ಡ ಸವಾಲು ಕೂಡ’ ಎಂದು ನುಡಿದರು.

ಭ್ರಷ್ಟ ರಾಜಕಾರಣಿಗಳು, ಭ್ರಷ್ಟ ಪ್ರಜೆಗಳು:

‘ಗ್ರಾಮಮಟ್ಟದ ಒಂದು ಚುನಾವಣೆಯಲ್ಲೂ ಎಷ್ಟೊಂದು ಖರ್ಚು ಮಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ದುಡ್ಡು ಕೊಟ್ಟರೆ ಮಾತ್ರ ಜನ ವೋಟು ಹಾಕುತ್ತಾರೆ. ದೇಶದಲ್ಲಿ ಭ್ರಷ್ಟ ರಾಜಕಾರಣಿಗಳ ಜೊತೆಗೆ ಪ್ರಜೆಗಳೂ ಭ್ರಷ್ಟರಾಗಿರುವುದು ದುರ್ದೈವ’ ಎಂದು  ವಿಷಾದಿಸಿದರು.

‘ಗ್ರಾಮ ರಾಜ್ಯ ಕಟ್ಟುವ ಕನಸನ್ನು ಗಾಂಧೀಜಿ ಕಂಡರು. ತಳಮಟ್ಟದ ಜನರಿಗೂ ಅಧಿಕಾರ ಸಿಗಬೇಕು, ಅದರಿಂದ ರಾಷ್ಟ್ರದ ಅಭ್ಯುದಯ ಆಗಬೇಕೆಂಬುದು ಅವರ ಚಿಂತನೆ ಆಗಿತ್ತು. ಅವರ ಚಿಂತನೆ ಇಟ್ಟುಕೊಂಡು ಅಧಿಕಾರ ವಿಕೇಂದ್ರೀಕರಣ ಮಾಡಲಾಯಿತು. ಆದರೆ, ಆಗಿದ್ದು ಭ್ರಷ್ಟಾಚಾರದ ವಿಕೇಂದ್ರೀಕರಣ’ ಎಂದು ಟೀಕಿಸಿದರು.

‘ಸ್ವಾತಂತ್ರ್ಯ ಪೂರ್ವದಲ್ಲಿ ರಾಷ್ಟ್ರನಾಯಕರು ಬಹಳಷ್ಟು ಮಂದಿ ಇದ್ದರು. ಆನಂತರದ ದಿನಗಳಲ್ಲಿ ಎಷ್ಟು ಜನ ರಾಷ್ಟ್ರ ನಾಯಕರನ್ನು ಗುರುತಿಸಲು ಸಾಧ್ಯವಾಗಿದೆ? ನಾವು ರಾಜಕಾರಣಿಗಳನ್ನು ಸೃಷ್ಟಿಸುತ್ತಿದ್ದೇವೆಯೇ ಹೊರತು ಮುತ್ಸದ್ದಿಗಳನ್ನು ಅಲ್ಲ. ರಾಷ್ಟ್ರದ ಅಭ್ಯುದಯದ ಬಗ್ಗೆ ಚಿಂತನೆ ಮಾಡುವ ವ್ಯಕ್ತಿಗಳನ್ನು ಟಾರ್ಚ್‌ ಹಿಡಿದು ಹುಡುಕಬೇಕಿದೆ’ ಎಂದರು.

Post Comments (+)