ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲ್ಲಹಳ್ಳಿಯ ಪೌರಕಾರ್ಮಿಕರಿಗೆ ಕಾಲೊನಿ ನಿರ್ಮಾಣ: ಶಿವಣ್ಣ

Last Updated 26 ಆಗಸ್ಟ್ 2021, 5:42 IST
ಅಕ್ಷರ ಗಾತ್ರ

ನಂಜನಗೂಡು: ‘ತಾಲ್ಲೂಕಿನ ಹುಲ್ಲಹಳ್ಳಿಯ 30 ಪೌರಕಾರ್ಮಿಕ ಕುಟುಂಬಗಳಿಗೆ ಒಂದೂವರೆ ಎಕರೆ ಪ್ರದೇಶದಲ್ಲಿ ಪೌರಕಾರ್ಮಿಕರ ಕಾಲೊನಿ ನಿರ್ಮಿಸಿ, ಸೂರು ಒದಗಿಸಲಾಗುವುದು’ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಭರವಸೆ ನೀಡಿದರು.

ತಾಲ್ಲೂಕಿನ ಹುಲ್ಲಹಳ್ಳಿಯ ಪೌರಕಾರ್ಮಿಕರ ಕಾಲೊನಿಗೆ ಬುಧವಾರ ಭೇಟಿ ನೀಡಿ, ಪೌರಕಾರ್ಮಿಕರಿಂದ ಅಹವಾಲು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಇಲ್ಲಿನ ಪೌರಕಾರ್ಮಿಕರಿಗೆ ಸೂರಿಲ್ಲ. ಕನಿಷ್ಠ ಸೌಲಭ್ಯಗಳಿಂದ ವಂಚಿತರಾಗಿ ಬದುಕು ಸಾಗಿಸುತ್ತಿದ್ದಾರೆ. ಪ್ರಜಾವಾಣಿ ಪತ್ರಿಕೆಯಲ್ಲಿ ಬಂದ ವರದಿಯನ್ನು ನೋಡಿ ಇಲ್ಲಿಗೆ ಬಂದಿದ್ದೇನೆ. ಪೌರಕಾರ್ಮಿಕರು ವಾಸವಿರುವ ಕಾಲೊನಿಯ ಪಕ್ಕದಲ್ಲೇ ನಾಲೆ ಹರಿಯುತ್ತಿರುವುದರಿಂದ, ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗಿ ತೊಂದರೆಯಾಗುತ್ತಿದೆ. ಕಾಲೊನಿಯ ಅರ್ಧದಷ್ಟು ಮನೆಗಳು ಸಂಪೂರ್ಣವಾಗಿ ಕುಸಿದು ಬಿದ್ದಿವೆ. ಗುಡಿಸಲುಗಳಲ್ಲಿ ಕಾರ್ಮಿಕರು ವಾಸವಿದ್ದಾರೆ. ಪುಟ್ಟಮ್ಮ ಅವರ ಮನೆಗೆ ಬೆಂಕಿ ಬಿದ್ದಿದ್ದರಿಂದ ಪುಟ್ಟ ಮಗುವಿನೊಂದಿಗೆ ಬಸ್ ನಿಲ್ದಾಣದಲ್ಲಿ ಕಾಲ ಕಳೆದಿದ್ದರು. ನಾಗರಿಕ ಸಮಾಜ ತಲೆ ತಗ್ಗಿಸುವ ಪರಿಸ್ಥಿತಿ ಇದು’ ಎಂದು ಹೇಳಿದರು.

‘ಕುರಿಹುಂಡಿ ಗ್ರಾಮದ ರಸ್ತೆಯಲ್ಲಿ ಒಂದೂವರೆ ಎಕರೆ ಪ್ರದೇಶದಲ್ಲಿ ಹೊಸದಾಗಿ ಪೌರಕಾರ್ಮಿಕರ ಕಾಲೊನಿ ನಿರ್ಮಿಸಲು ರಾಜೀವ್ ಗಾಂಧಿ ವಸತಿ ನಿಗಮದವರುಸಿದ್ಧತೆ ನಡೆಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಜತೆ ಮಾತನಾಡಿ ಶೀಘ್ರವಾಗಿ ಪೌರಕಾರ್ಮಿಕರಿಗೆ ಮನೆ ನಿರ್ಮಿಸಲು ಸೂಚಿಸಿದ್ದೇನೆ. ಹೊಸ ಕಾಲೊನಿ ನಿರ್ಮಾಣ ಕಾರ್ಯ ನಡೆಯು ವವರೆಗೆ ಪೌರ ಕಾರ್ಮಿಕರು ಪ್ರಸ್ತುತ ವಾಸಿಸುತ್ತಿರುವ ಮನೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ್, ಬಿಜೆಪಿ ಮುಖಂಡರಾದ ಎಸ್.ಎಂ.ಕೆಂಪಣ್ಣ, ದಲಿತ ಸಂಘರ್ಷ ಸಮಿತಿ ಮುಖಂಡರಾದ ಶಂಕರಪುರ ಸುರೇಶ್, ಬೊಕ್ಕಳ್ಳಿ ಲಿಂಗಯ್ಯ, ಪೌರಕಾರ್ಮಿಕರ ಮುಖಂಡರಾದ ಡಿ.ಆರ್.ರಾಜು, ಚೆಲುವರಾಜು, ಮಾಧು ಸ್ವಾಮಿ, ಉಮೇಶ್ ಉಪಸ್ಥಿತರಿದ್ದರು.

‘ಬಾಕಿ ವೇತನ ಪಾವತಿಗೆ ಕ್ರಮ’

‘ತಾಲ್ಲೂಕಿನ ಕಳಲೆ ಗ್ರಾಮ ಪಂಚಾಯಿತಿಯ ಪೌರಕಾರ್ಮಿಕ ಸಂಬಳವಿಲ್ಲದೆ ಜೀವನ ನಡೆಸಲು ತೊಂದರೆ ಪಡುತ್ತಿದ್ದಾರೆ. ಮೃತ ಪೌರಕಾರ್ಮಿಕನ ಕುಟುಂಬಕ್ಕೆ ಸರ್ಕಾರದಿಂದ ₹4 ಲಕ್ಷ ಪರಿಹಾರ ಧನ ನೀಡಲಾಗಿದೆ. ಉಳಿದ ₹4 ಲಕ್ಷವನ್ನು ಬ್ಯಾಂಕ್‌ನಲ್ಲಿ ಠೇವಣಿ ಇರಿಸಿ, ಅದರ ಬಡ್ಡಿಯಿಂದ ಕುಟುಂಬ ನಿರ್ವಹಣೆಗೆ ಬಳಸುವಂತೆ ವ್ಯವಸ್ಥೆ ಮಾಡಲಾಗುವುದು. ತಾಲ್ಲೂಕಿನ 42 ಗ್ರಾ.ಪಂ.ಗಳಲ್ಲಿ ಪೌರಕಾರ್ಮಿಕರಿಗೆ ನೀಡಬೇಕಿರುವ ಬಾಕಿ ವೇತನದ ಬಗ್ಗೆ ವರದಿ ಪಡೆಯುತ್ತೇನೆ. ಶೀಘ್ರ ವೇತನ ಪಾವತಿಗೆ ಕ್ರಮ ಕೈಗೊಳ್ಳುತ್ತೇನೆ’ ಎಂದು ಶಿವಣ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT