ಹುಣಸೂರು: ಶೇ 77ರಷ್ಟು ಮತದಾನ

ಭಾನುವಾರ, ಮೇ 26, 2019
31 °C
ಬಿಸಿಲಿನ ಝಳಕ್ಕೆ ಮನೆಗಳಿಂದ ಹೊರಗೆ ಬಾರದ ಜನ; ಸಂಜೆ ಬಳಿಕ ಚೇತರಿಕೆ

ಹುಣಸೂರು: ಶೇ 77ರಷ್ಟು ಮತದಾನ

Published:
Updated:
Prajavani

ಹುಣಸೂರು: ತಾಲ್ಲೂಕಿನಲ್ಲಿ ಶೇ 77.45ರಷ್ಟು ಮತದಾನವಾಗಿದೆ. ಗ್ರಾಮೀಣ ಭಾಗದಲ್ಲಿ ಸಂಜೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.

ಬೆಳಿಗ್ಗೆಯಿಂದಲೇ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದರಿಂದ ಮತದಾರರು ಮನೆಗಳಿಂದ ಹೊರ ಬರಲು ಹಿಂದೇಟು ಹಾಕಿದರು. ಇದರಿಂದ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮತದಾನ ಪ್ರಮಾಣ ಕಡಿಮೆ ಇತ್ತು. ಸಂಜೆಯಾಗುತ್ತಿದ್ದಂತೆ ಬಿಸಿಲಿನ ಝಳ ಕಡಿಮೆಯಾದಂತೆ, ಜನರು ಮತಗಟ್ಟೆಗಳ ಕಡೆಗೆ ಮುಖ ಮಾಡಿದರು.

ನಗರದ 112ನೇ ಮತಗಟ್ಟೆಯಲ್ಲಿ ಶಾಸಕ ಅಡಗೂರು ಎಚ್‌.ವಿಶ್ವನಾಥ್ ಮತದಾನ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಂವಿಧಾನಾತ್ಮಕವಾಗಿ ದೊರೆತ ಮತದಾನದ ಹಕ್ಕನ್ನು ಎಲ್ಲರೂ ಚಲಾಯಿಸಬೇಕು. ಸರ್ಕಾರಿ ಸವಲತ್ತುಗಳನ್ನು ಅನುಭವಿಸುವ ಮತದಾರರು ಮತದಾನಕ್ಕೆ ಹಿಂದೇಟು ಹಾಕುವುದು ಸರಿಯಲ್ಲ. ಮತದಾನ ಮಾಡದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

ಮಾಜಿ ಶಾಸಕ ಎಚ್‌.ಪಿ.ಮಂಜುನಾಥ್‌ ಕುಟುಂಬ ಸಮೇತ ವಾಗಿ ಬಂದು ನಗರದ ಹಾರಂಗಿ ಕಚೇರಿಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಗ್ರಾಮೀಣ ಭಾಗದಲ್ಲಿ ರೈತರು ಬೆಳಿಗ್ಗೆಯಿಂದ ಸಂಜೆವರೆಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದರು. ಸಂಜೆ 5 ಗಂಟೆ ಆಗುತ್ತಿದ್ದಂತೆ ಊರಿಗೆ ಬಂದು, ಮತದಾನ ಮಾಡಿದರು.

ಹನಗೋಡು ಹೋಬಳಿ ಭಾಗದಲ್ಲಿ ರೈತರು ಶುಂಠಿ ಹೊಲದಲ್ಲಿ ಕಳೆ ತೆಗೆಯುವಲ್ಲಿ ನಿರತರಾಗಿದ್ದರು. ಈ ವೇಳೆ, ಮಾತನಾಡಿದ ರೈತ ಮಹಿಳೆ, ‘ಮತ ಹಾಕಲು ಸಂಜೆ 6
ಗಂಟೆವರೆಗೂ ಅವಕಾಶವಿದೆ. ಕೂಲಿಗೆ ಹೋಗದಿದ್ದರೆ ಒಂದು ದಿನದ ಅನ್ನ ಯಾರು ಕೊಡುತ್ತಾರೆ’ ಎಂದು ಪ್ರಶ್ನಿಸಿದರು.

ಮತಯಂತ್ರ ಸ್ಥಗಿತ

ತಾಲ್ಲೂಕಿನ ಬಲ್ಲೇನಹಳ್ಳಿ ಗ್ರಾಮದ ಮತಗಟ್ಟೆ 217ರಲ್ಲಿ 7 ಜನ ಮತ ಹಾಕುತ್ತಿದ್ದಂತೆ ವಿದ್ಯುನ್ಮಾನ ಮತಯಂತ್ರ ಕೈ ಕೊಟ್ಟಿತು. 2 ಗಂಟೆಗಳವರೆಗೆ ಮತದಾನ ಸ್ಥಗಿತಗೊಂಡಿತು. ಯಂತ್ರವನ್ನು ಸರಿಪಡಿಸಲು ಪ್ರಯತ್ನಿಸಲಾಯಿತು. ಆದರೆ, ಆ ಯಂತ್ರವು ದುರಸ್ತಿಗೊಳ್ಳದ ಕಾರಣ ಚುನಾವಣಾಧಿಕಾರಿಯು ಬದಲಿ ಯಂತ್ರದ ವ್ಯವಸ್ಥೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !