ಶನಿವಾರ, ಸೆಪ್ಟೆಂಬರ್ 25, 2021
22 °C

ಹುಣಸೂರು, ಕೆ.ಆರ್.ನಗರ: ಮಿಶ್ರ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಣಸೂರು: ರೈತ ಸಂಘ, ಕಾಂಗ್ರೆಸ್ ಸೇರಿದಂತೆ ವಿವಿಧ ಸಂಘಟನೆಗಳು ಕರೆ ನೀಡಿದ್ದ ರಾಜ್ಯ ಬಂದ್‌ಗೆ  ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಸೋಮವಾರ ಬೆಳಿಗ್ಗೆ ನಗರದ ರೋಟರಿ ವೃತ್ತದ ಬಳಿ ರೈತಸಂಘ, ಕಮ್ಯುನಿಸ್ಟ್, ಕಾಂಗ್ರೆಸ್, ದಸಂಸ ಸಂಘಟನೆಗಳ ಮುಖಂಡರು ಭೂಸುಧಾರಣೆ, ಎಪಿಎಂಸಿ ಕಾಯ್ದೆ ‌ತಿದ್ದುಪಡಿ ವಿರೋಧಿಸಿ ಮೆರವಣಿಗೆ ನಡೆಸಲು ಮುಂದಾದರು. ಮೆರವಣಿಗೆಗೆ ನಿರಾಕರಿಸಿದ ಸಿಪಿಐ ಪೂವಯ್ಯ ರೋಟರಿ ವೃತ್ತದಲ್ಲಿ ಧರಣಿಗೆ ಅವಕಾಶ ನೀಡಿದರು.  ಪ್ರತಿಭಟನಕಾರರು ಕುಳಿತು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಹಾಕಿದರು.

ಬಂಧನ: ಪ್ರತಿಭಟನಕಾರರು ಮೆರವಣಿಗೆಯಲ್ಲಿ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ನೀಡುವುದಾಗಿ ಪೊಲೀಸ್ ಅಧಿಕಾರಿಗೆ ಮನವಿ ಮಾಡಿದರು. ಅವಕಾಶ ಇಲ್ಲ. 5 ಜನರು ಮನವಿ ಪತ್ರ ನೀಡಲು ಅನುಮತಿ ನೀಡಲಾಗುವುದು ಎನ್ನುತ್ತಿದ್ದಂತೆ ಪೊಲೀಸ್ ವಿರುದ್ಧ ಪ್ರತಿಭಟನಕಾರರು ಹರಿಹಾಯ್ದರು. ಈ ಹಂತದಲ್ಲಿ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಕಾರ್ಖಾನೆ ರಸ್ತೆ ಬಹುತೇಕ ಬಂದ್ ಆಗಿತ್ತು, ಉಳಿದಂತೆ ಹೊಟೇಲ್‌, ಬೇಕರಿ, ಕಿರಾಣಿ ಅಂಗಡಿ ಎಂದಿನಂತೆ ತಮ್ಮ ವ್ಯಾಪಾರ ನಡೆಸಿದವು. ಆಟೊ ರಸ್ತೆಗಿಳಿದಿದ್ದು, ಹುಣಸೂರು ಸಾರಿಗೆ ಘಟಕದಿಂದ 18 ಮಾರ್ಗದಲ್ಲಿ ಬಸ್ ಸಂಚಾರ ನಡೆದಿತ್ತು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊಸೂರು ಕುಮಾರ್, ಕಿಸಾನ್ ಕಾಂಗ್ರೆಸ್ ಘಟಕದ ಅಧ್ಯಕ್ಷ ವಸಂತ್ ಕುಮಾರ್, ಸಿಪಿಐ (ಎಂ) ಬಸವರಾಜ್, ತಂಬಾಕು ಬೆಳೆಗಾರರ ಹಿತರಕ್ಷಣಾ ಸಮಿತಿ ಚಂದ್ರೇಗೌಡ, ರಾಮಕೃಷ್ಣ, ರತ್ನಾಪುರಿ ಪುಟ್ಟಸ್ವಾಮಿ, ಅಸ್ವಾಳು ಕೆಂಪೇಗೌಡ, ಚಿನ್ನವೀರಯ್ಯ, ರಾಘು ರೈತ ಸಂಘ ಮಾನವ ಹಕ್ಕು ಘಟಕದ ಶಿವಣ್ಣ, ನಟರಾಜ್ ಇದ್ದರು.

ರಸ್ತೆತಡೆ, ಧರಣಿ
ಕೆ.ಆರ್.ನಗರ:
ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲಾದ ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ಮತ್ತು ಕಾರ್ಮಿಕರ ಹಕ್ಕು ತಿದ್ದುಪಡಿ ಕಾಯ್ದೆ ಕೂಡಲೇ ರದ್ದುಪಡಿಸಬೇಕು ಎಂದು ಸ್ವರಾಜ್ ಇಂಡಿಯಾ ಪಕ್ಷ ತಾಲ್ಲೂಕು ಘಟಕದ ಅಧ್ಯಕ್ಷ ಗರುಡಗಂಬ ಸ್ವಾಮಿ ಒತ್ತಾಯಿಸಿದರು.

ರೈತ, ದಲಿತ ಮತ್ತು ಕಾರ್ಮಿಕ ಸಂಘಟನೆಗಳ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಸಾಧಕ- ಬಾಧಕಗಳ ಬಗ್ಗೆ ಚರ್ಚಿಸದೇ ಯಾವುದೇ ಕಾನೂನು, ಸುಗ್ರೀವಾಜ್ಞೆ ಹೊರಡಿಸುವುದು ಸರಿಯಲ್ಲ, ಚರ್ಚಿಸದೇ ಯಾವುದೇ ಕಾನೂನುಗಳು ಜಾರಿಗೆ ತರುವುದು ಸೂಕ್ತವಲ್ಲ ಎಂದು ಹೇಳಿದರು.

ರೈತ ಸಂಘ ವಿಭಾಗೀಯ ಕಾರ್ಯದರ್ಶಿ ಸರಗೂರು ನಟರಾಜು, ಕಬ್ಬು ಬೆಳೆಗಾರರ ಸಂಘ ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಹಳೇ ಮಿರ್ಲೆ ಸುನಯ್ ಗೌಡ ಸೇರಿದಂತೆ ಇತರರು ಮಾತನಾಡಿದರು.

ರೈತ ಸಂಘ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ನೇತ್ರಾವತಿ, ಸಂಘದ ಅಧ್ಯಕ್ಷ ಮಲ್ಲೇಶ್, ಕಬ್ಬು ಬೆಳೆಗಾರರ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಕೆ.ರವೀಂದ್ರ, ಗೌರವ ಅಧ್ಯಕ್ಷ ಮಾರಗೌಡನಹಳ್ಳಿ ನಟರಾಜು, ಮಲ್ಲೇಶ್, ಕಾಳೇಗೌಡ, ವಜ್ರೇಶ್, ಡಿಎಸ್ಎಸ್ ಮೂರ್ತಿ, ರುದ್ರೇಶ್ ಸೇರಿದಂತೆ ಇತರರು ಇದ್ದರು.

ಮೆರವಣಿಗೆಗೆ ಪೊಲೀಸರು ಅವಕಾಶ ನೀಡದೇ ಇರುವುದರಿಂದ ಗರುಡಗಂಬ ವೃತ್ತದ ಬಳಿ ಕೆಲ ಹೊತ್ತು ರಸ್ತೆತಡೆ, ಧರಣಿ ಸತ್ಯಾಗ್ರಹ, ಪ್ರತಿಭಟನೆ ಮಾಡಲಾಯಿತು.

ಬಂದ್‌ಗೆ ಕೆ.ಆರ್. ನಗರ ತಾಲ್ಲೂಕಿನ ವಿವಿಧೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಸಂಘಟನೆಗಳ ಸೂಚನೆಯ ಮೇರೆಗೆ ಸೋಮವಾರ ಪಟ್ಟಣದಲ್ಲಿನ ದಿನಸಿ, ತರಕಾರಿ, ಹೂವು, ಹಣ್ಣು ಸೇರಿದಂತೆ ಬಹುತೇಕ ಅಂಗಡಿಗಳು ಮುಚ್ಚಲಾಗಿತ್ತು. ಮಧ್ಯಾಹ್ನದ ಹೊತ್ತಿಗೆ ಕೆಲ ವ್ಯಾಪಾರಸ್ಥರು ವ್ಯಾಪಾರ ಮಾಡಿದರು.

ಎಂದಿನಂತೆ ವಾಹನಗಳ ಓಡಾಟ ಇತ್ತು. ಪ್ರಯಾಣಿಕರು ಇಲ್ಲದೇ ಇರುವುದರಿಂದ ಬಸ್ ಸಂಚಾರ ವಿರಳವಾಗಿತ್ತು. ಸರ್ಕಾರಿ ಕಚೇರಿಗಳು, ಪೆಟ್ರೋಲ್ ಬಂಕ್, ಬ್ಯಾಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು