ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಿಮದ್ದಿ ಹಸುವಿನ ಮುಖ ಛಿದ್ರ: ಬೆಟ್ಟದ ಬೀಡಿನಲ್ಲಿ ಬೀಡುಬಿಟ್ಟ ಬೇಟೆಗಾರರು?

ಸಿಡಿಮದ್ದಿಗೆ ಜಾನುವಾರು ಬಲಿ, ಆತಂಕದಲ್ಲಿ ಗೋಪಾಲಕರು
Last Updated 22 ಜುಲೈ 2020, 8:52 IST
ಅಕ್ಷರ ಗಾತ್ರ

ಮೈಸೂರು: ಎಚ್.ಡಿ.ಕೋಟೆ ತಾಲ್ಲೂಕಿನ ಜೆ.ಬಿ.ಸರಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟದಬೀಡು ಗ್ರಾಮದಲ್ಲಿ ಹಸುವೊಂದು ಸಿಡಿಮದ್ದು ಕಚ್ಚಿ ಮೃತಪಟ್ಟ ಘಟನೆಯು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ. ಬೇಟೆಗಾರರಿಂದಲೇ ಇಂತಹ ದುರಂತ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಕಾಡಂಚಿನಲ್ಲಿ ಮೇಯಲು ಹೋಗಿದ್ದ ಹಸು, ಹಲಸಿನ ಹಣ್ಣಿನ ಸಿಪ್ಪೆಯ ಮಧ್ಯೆ ಹುದುಗಿಸಿಟ್ಟಿದ್ದ ಸಿಡಿಮದ್ದನ್ನು ಕಚ್ಚಿದ ಕೂಡಲೇ ಅದು ಸ್ಫೋಟಗೊಂಡಿದೆ. ಹಸುವಿನ ದವಡೆ, ನಾಲಿಗೆ ಸುಟ್ಟು ಹೋಗಿದೆ. ಬಾಯಿ ಬಿರಿದು ರಕ್ತ ಸೋರತೊಡಗಿದೆ. ಇಂತಹ ಭಯಾನಕ ದೃಶ್ಯ ಕಂಡು ಗ್ರಾಮಸ್ಥರು ಮಮ್ಮಲ ಮರುಗಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹಸುವಿನ ಮಾಲೀಕ ನರಸಿಂಹೇಗೌಡರ ಪುತ್ರ ಶಶಿಕುಮಾರ್, ‘ಹಸುವಿನ ಸ್ಥಿತಿ ನೋಡಿ ನಮ್ಮ ಮನೆಯ ಸದಸ್ಯರಿಗೆ ರಾತ್ರಿ ನಿದ್ದೆ ಬರಲಿಲ್ಲ. ಒಂದು ವೇಳೆ ಈ ಸ್ಫೋಟಕದ ಮೇಲೆ ಮನುಷ್ಯರೇ ಕಾಲಿಟ್ಟಿದ್ದರೆ ಅವರ ಪ್ರಾಣವೇ ಹೋಗುತ್ತಿತ್ತು’ ಎಂದು ಆತಂಕ ವ್ಯಕ್ತಪಡಿಸಿದರು.

ಹೆಸರು ಬಹಿರಂಗಪಡಿಸಲು ಬಯಸದ ಸ್ಥಳೀಯರೊಬ್ಬರು ಪ್ರತಿಕ್ರಿಯಿಸಿ, ‘8ರಿಂದ 10 ಮಂದಿ ಇರುವ ಬೇಟೆಗಾರರ ತಂಡವೊಂದು ಸಮೀಪದ ಮಾದಹಳ್ಳಿ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದೆ. ಪಶು ಆಹಾರದಲ್ಲಿ ಸಿಡಿಮದ್ದನ್ನು ಅಡಗಿಸಿಟ್ಟು, ಕಾಡಂದಿಯನ್ನು ಬೇಟೆಯಾಡುತ್ತಾರೆ. ಇದರ ಮಾಂಸವನ್ನು ಮೈಸೂರಿಗೆ ರವಾನೆ ಮಾಡಲಾಗುತ್ತಿದೆ. ಈ ತಂಡ ಅಡಗಿಸಿಟ್ಟ ಸಿಡಿಮದ್ದಿಗೆ ಈ ಹಿಂದೆಯೇ ಹಸುವೊಂದು ಬಲಿಯಾಗಿತ್ತು. ಇನ್ನಾದರೂ, ಅರಣ್ಯ ಇಲಾಖೆಯವರು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಕೇರಳದಲ್ಲಿ ಈಚೆಗೆ ಆನೆಯೊಂದು ಇಂತಹ ಸಿಡಿಮದ್ದಿಗೆ ಬಲಿಯಾಗಿತ್ತು. ಈಗ ಇಲ್ಲಿ ಹಸು ಸತ್ತಿದೆ. ಈ ಹಿಂದೆ ಹಸುವೊಂದು ಕಾಲಿಟ್ಟ ಕೂಡಲೇ ಸಿಡಿಮದ್ದು ಸಿಡಿದಿತ್ತು. ಬೇಟೆಗಾರರ ಉಪಟಳ ಹೆಚ್ಚಾಗಿದೆ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT