ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್‌.ನಗರ: ಭತ್ತದ ಕಣಜಕ್ಕೆ ಹೈಬ್ರಿಡ್ ತಳಿ ದಾಳಿ!

ತಾಲ್ಲೂಕಿನಲ್ಲಿ ಬಿತ್ತನೆ ಪ್ರದೇಶ ಶೇ 5 ಕುಸಿತ; ತೋಟಗಾರಿಕೆ ಬೆಳೆ ವಿಸ್ತೀರ್ಣ ಹೆಚ್ಚಳ
Last Updated 15 ಆಗಸ್ಟ್ 2021, 7:03 IST
ಅಕ್ಷರ ಗಾತ್ರ

ಕೆ.ಆರ್.ನಗರ: ಭತ್ತದ ಕಣಜವಾದ ತಾಲ್ಲೂಕಿನಲ್ಲಿ ಈಚೆಗೆ ಹೈಬ್ರಿಡ್ ಭತ್ತ ಸದ್ದು ಮಾಡುತ್ತಿದೆ. ತೋಟಗಾರಿಕೆ ಬೆಳೆಗಳ ವ್ಯಾಪ್ತಿಯೂ ಹೆಚ್ಚುತ್ತಿದೆ.

ಈ ಹಿಂದೆ ಭತ್ತಕ್ಕೆ ಸೀಮಿತವಾಗಿದ್ದ 26,580 ಹೆಕ್ಟೇರ್ ಪ್ರದೇಶದಲ್ಲಿ 10 ಸಾವಿರ ಹೆಕ್ಟೇರ್‌ನಲ್ಲಿ ಜ್ಯೋತಿ ಭತ್ತ ಬೆಳೆಯಲಾಗುತ್ತಿತ್ತು. ಪ್ರಸ್ತುತ 2 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ಜ್ಯೋತಿ ಭತ್ತ ಬೆಳೆಯಲಾಗುತ್ತಿದೆ.

ಹಿಂದಿನ ವರ್ಷಗಳಲ್ಲಿ 26,580 ಹೆಕ್ಟೇರ್ ಪ್ರದೇಶಕ್ಕೆ ಆಗುವಷ್ಟು; ಅಂದರೆ 6 ಸಾವಿರದಿಂದ 7 ಸಾವಿರ ಕ್ವಿಂಟಲ್ (ನಾಟಿ ತಳಿ) ಬಿಆರ್, ಐಆರ್–64, ಜ್ಯೋತಿ, 1001 ತಳಿಯ ಭತ್ತದ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ಕೊಡಲಾಗುತ್ತಿತ್ತು.

ಹೈಬ್ರಿಡ್ ತಳಿ ಭತ್ತಕ್ಕೆ ರೈತರು ಮಾರು ಹೋಗಿರುವುದರಿಂದ ಈ ಬಾರಿ ಕೇವಲ 1 ಸಾವಿರ ಕ್ವಿಂಟಲ್ (ನಾಟಿ ತಳಿ) ಬಿಆರ್, ಐಆರ್–64, ಜ್ಯೋತಿ, 1001 ಬಿತ್ತನೆ ಬೀಜ ವಿತರಣೆಯಾಗಿದೆ.

‘ಒಂದು ಕಡೆ ಖಾಸಗಿ ಕಂಪನಿಯವರು ನೀಡುವ ಹೈಬ್ರಿಡ್ ಭತ್ತದ ಕಡೆಗೆ ರೈತರು ವಾಲುತ್ತಿದ್ದಾರೆ. ಮತ್ತೊಂದೆಡೆ, ಭತ್ತ ಲಾಭದಾಯಕವಾಗಿ ಉಳಿದಿಲ್ಲ ಎಂದು ಬೆಳೆಯುವುದನ್ನು ಕಡಿಮೆ ಮಾಡಿ ಅಡಿಕೆ, ತೆಂಗು, ಬಾಳೆ, ತರಕಾರಿ, ಶುಂಠಿ ಕಡೆ ಹಲವು ರೈತರು ವಾಲುತ್ತಿದ್ದಾರೆ. ತಾಲ್ಲೂಕಿನಲ್ಲಿ ಭತ್ತದ ಬೆಳೆ ಶೇ 5ರಷ್ಟು ಕಡಿಮೆಯಾಗಿದೆ’ ಎಂದು ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಶೇ 14ರಷ್ಟು ಮಳೆ ಕೊರತೆ ಯಾಗಿದ್ದರೂ ಬಹುತೇಕ ನೀರಾವರಿ ಪ್ರದೇಶವೇ ಇಲ್ಲಿರುವುದರಿಂದ ಭತ್ತ, ಕಬ್ಬು ಸೇರಿದಂತೆ ವಿವಿಧ ಬೆಳೆ ಬೆಳೆಯಲು ಯಾವುದೇ ತೊಂದರೆಯಾಗಿಲ್ಲ. ಏಪ್ರಿಲ್ ನಂತರ ಮಳೆ ಪ್ರಮಾಣ ಹೆಚ್ಚಾಗಿದ್ದರೆ ದ್ವಿದಳ ಧಾನ್ಯ, ಎಳ್ಳು ಹೆಚ್ಚಾಗಿ ಬೆಳೆಯಬಹುದಿತ್ತು. ಎಳ್ಳಿಗೆ ಬದಲಾಗಿ ಅಲಸಂದೆ ಬೆಳೆಯಲು ಈಗ ಸಕಾಲವಾಗಿದೆ.

ಕೆಆರ್‌ಎಸ್ ತುಂಬಿದ ನಂತರವೇ ಭತ್ತದ ಬೆಳೆಗೆ ನೀರು ಬಿಡಬೇಕು ಎನ್ನುವ ಪರಿಸ್ಥಿತಿ ಇಲ್ಲಿಲ್ಲ. ಕಾವೇರಿ ನದಿ ಕೃಷ್ಣರಾಜನಗರ ತಾಲ್ಲೂಕಿನಲ್ಲಿಯೇ ಹರಿಯುತ್ತಿರುವುದರಿಂದ, ಪ್ರಮುಖ ಬೆಳೆ ಭತ್ತ ಬೆಳೆಯಲು ಯಾವುದೇ ಸಮಸ್ಯೆ ಇಲ್ಲ. ನಾಲೆಗಳ ಮೂಲಕ ಹರಿಯುವ ನೀರು ಬಳಸಿಕೊಳ್ಳಬಹುದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎಸ್.ಗುರುಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

***

ಭತ್ತದ ನಾಟಿ ಶುರುವಾಗಿದೆ. ಸೆಪ್ಟೆಂಬರ್‌ವರೆಗೂ ನಾಟಿ ಮಾಡಬಹುದು. ಕೆಆರ್‌ಎಸ್‌ ಭರ್ತಿಯಾಗಿರುವುದು ಬೆಳೆಗಾರರಿಗೆ ಆಶಾದಾಯಕ

-ಎಂ.ಎಸ್.ಗುರುಪ್ರಸಾದ್‌, ಸಹಾಯಕ ನಿರ್ದೇಶಕ

***

30 ವರ್ಷದ ಹಿಂದೆ 8 ಎಕರೆಯಲ್ಲಿ ಭತ್ತ ಬೆಳೆಯುತ್ತಿದ್ದೆವು. ಪೂರಕ ವಾತಾವರಣ ಇರದಿರುವುದರಿಂದ ಇದೀಗ 4 ಎಕರೆಯಲ್ಲಿ ಭತ್ತ ಬೆಳೆಯುತ್ತಿದ್ದೇವೆ

-ಅರ್ಜುನಹಳ್ಳಿ ರಾಮಪ್ರಸಾದ್, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT