ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ಬದಿ ವ್ಯಾಪಾರಿಗಳಿಗೆ ಐಡಿ, ಸೌಲಭ್ಯ

ಮಹಾನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಹೇಳಿಕೆ
Last Updated 14 ಆಗಸ್ಟ್ 2022, 13:05 IST
ಅಕ್ಷರ ಗಾತ್ರ

ಮೈಸೂರು: ‘ನಗರದ 8ಸಾವಿರ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ, ವ್ಯಾಪಾರ ಪ್ರಮಾಣಪತ್ರ ವಿತರಿಸಿ ಸೌಲಭ್ಯಗಳನ್ನು ದೊರಕಿಸಿಕೊಡಲಾಗುವುದು’ ಎಂದು ಮಹಾನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ತಿಳಿಸಿದರು.

ಮಹಾನಗರ ಪಾಲಿಕೆಯಿಂದ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಅಂಗವಾಗಿ ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ‘ಜೀವನೋಪಾಯ‌ ಉತ್ಸವ–2022’, ದೀನದಯಾಳ್ ಅಂತ್ಯೋದಯ‌-ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ(ಡೇ–ನಲ್ಮ್)ದಲ್ಲಿ ವಿವಿಧ ಸೌಲಭ್ಯಗಳ‌ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಗರಪಾಲಿಕೆ ವ್ಯಾಪ್ತಿಯಲ್ಲಿ 1200 ಮಹಿಳಾ ಸ್ವಸಹಾಯ ಸಂಘಗಳಿವೆ. 10ಸಾವಿರ ಸದಸ್ತರಿದ್ದಾರೆ. ಬ್ಯಾಂಕ್‌ಗಳಿಗೆ ಸಂಪರ್ಕ ಕಲ್ಪಿಸಿ ₹ 50 ಲಕ್ಷದವರೆಗೆ ಸಾಲ ಕೊಡಿಸಲಾಗಿದೆ. ಸ್ವಸಹಾಯ ಸಂಘದ ಮಹಿಳೆಯರು ತಯಾರಿಸುವ ವಸ್ತುಗಳಿಗೆ ಮಾರಾಟ ವ್ಯವಸ್ಥೆ ಕಲ್ಪಿಸಲಾಗುತ್ತಿದೆ’ ಎಂದರು.

ಸಾಲ ದೊರಕಿಸಿಕೊಡಲು ಕ್ರಮ:

‘ಪ್ರಧಾನ ಮಂತ್ರಿ ಕಿರು ಆಹಾರ ಉದ್ದಿಮೆ ಯೋಜನೆಯಡಿ 22 ಮಹಿಳಾ ಸಂಘದ ಸದಸ್ಯರಿಗೆ ತಲಾ ₹ 40ಸಾವಿರದಂತೆ ಸಾಲ ದೊರಕಿಸಿಕೊಡಲಾಗಿದೆ. ಒಕ್ಕೂಟಕ್ಕೆ ತಲಾ ₹ 50ಸಾವಿರ ಮತ್ತು ಸ್ವಸಹಾಯ ಸಂಘಕ್ಕೆ ತಲಾ ₹ 10ಸಾವಿರ ಸುತ್ತುನಿಧಿ ಕೊಡಲಾಗುತ್ತಿದೆ. ನಮ್ಮಲ್ಲಿ ಈಗ 53 ಪ್ರದೇಶ ಮಟ್ಟದ ಮತ್ತು 2 ನಗರ ಮಟ್ಟದ ಒಕ್ಕೂಟಗಳು ರಚನೆಯಾಗಿದೆ. 8 ಮಹಿಳಾ ಗುಂಪು ಉದ್ಯಮಕ್ಕೆ ತಲಾ ₹ 10 ಲಕ್ಷ ಮತ್ತು 158 ವೈಯಕ್ತಿಕ ಉದ್ದಿಮೆಗೆ ಸಾಲ ಕೊಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಸಂತ ಜೋಸೆಫ್ ಆಸ್ಪತ್ರೆ ಎದುರು, ಪಿ ಅಂಡ್ ಟಿ ಕ್ವಾರ್ಟಸ್ ಸಮೀಪ ಹಾಗೂ ಬಲ್ಳಾಳ್ ವೃತ್ತದಲ್ಲಿ ವ್ಯಾಪಾರ ವಲಯ ರಚಿಸಲಾಗುವುದು. ಅಲ್ಲಿಗೆ ಮೂಲಸೌಲಭ್ಯ ಒದಗಿಸಲು ₹ 2.94 ಕೋಟಿ ದೊರೆತಿದೆ. ಅಲ್ಲಿ 263 ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಲಾಗುವುದು’ ಎಂದು ತಿಳಿಸಿದರು.

ಸ್ವಯಂ ಉದ್ಯೋಗ ಕಲ್ಪಿಸಲು:

ಉದ್ಘಾಟಿಸಿದ ಮೇಯರ್‌ ಸುನಂದಾ ಫಾಲನೇತ್ರ ಮಾತನಾಡಿ, ‘ಡೇ–ನಲ್ಮ್‌ ಮೂಲಕ ಮಹಿಳಾ ಸಬಲೀಕರಣಕ್ಕೆ ಕ್ರಮ ವಹಿಸಲಾಗಿದೆ. ನಿರುದ್ಯೋಗಿ ಯುವಕ–ಯುವತಿಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ನೆರವಾಗುತ್ತಿದ್ದೇವೆ. ಬೀದಿಬದಿ ವ್ಯಾಪಾರಿಗಳಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿ ನೀಡಲಾಗುವುದು’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌, ಶಾಸಕರಾದ ಜಿ.ಟಿ.ದೇವೇಗೌಡ, ಸಿ.ಎನ್.ಮಂಜೇಗೌಡ, ಸಂಸದ ಪ್ರತಾಪ ಸಿಂಹ ವಿವಿಧ ಸೌಲಭ್ಯಗಳನ್ನು ವಿತರಿಸಿದರು. ನಟರಾಜ ಸ್ವಸಹಾಯ ಸಂಘದ ವೀಣಾ ಹಾಗೂ ತಂಡಕ್ಕೆ ಅತ್ಯುತ್ತಮ ಸ್ವಸಹಾಯ ಸಂಘ ಪ್ರಶಸ್ತಿ ನೀಡಿದರು.

ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಶಿವರಾಜ್, ಪಾಲಿಕೆ ಹೆಚ್ಚುವರಿ ಆಯುಕ್ತೆ ಸವಿತಾ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ಮಹಾನಗರಪಾಲಿಕೆ ಆಡಳಿತ ಪಕ್ಷದ ನಾಯಕ ಶಿವಕುಮಾರ್,ಟಿವಿಸಿ ಅಧ್ಯಕ್ಷ ಭಾಸ್ಕರ್ ಇದ್ದರು.

ಪಾಲಿಕೆಯ ಹೆಚ್ಚುವರಿ ಆಯುಕ್ತೆ ರೂಪಾ ಎಂ‌.ಜೆ. ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT