ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಂ, ಲಿಂಗಾಯತರಿಂದ ‘ಧರ್ಮ ರಾಜಕಾರಣ’

ಕಾಂಗ್ರೆಸ್‌ ಟಿಕೆಟ್‌ಗಾಗಿ ಅಲ್ಪಸಂಖ್ಯಾತ ಆಕಾಂಕ್ಷಿಗಳ ಒತ್ತಡ, ತಂತ್ರ
Last Updated 4 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್ಸಿನಲ್ಲಿ ಹೊಸ ಹುಮ್ಮಸ್ಸು ತುಂಬಿಸಲು ರಾಹುಲ್‌ ಗಾಂಧಿ ಯತ್ನಿಸುತ್ತಿರುವ ಮಧ್ಯೆಯೇ, ಟಿಕೆಟ್‌ಗಾಗಿ ‘ಧರ್ಮ ರಾಜಕಾರಣ’ ಚುರುಕುಗೊಂಡಿದೆ.

ಮುಸ್ಲಿಂ ಮತ್ತು ಲಿಂಗಾಯತ ಪ್ರಮುಖರು ತಮ್ಮ ಸಮುದಾಯಕ್ಕೆ ಹೆಚ್ಚಿನ ಟಿಕೆಟ್‌ ನೀಡುವಂತೆ ವರಿಷ್ಠರಿಗೆ ದುಂಬಾಲು ಬಿದ್ದಿದ್ದಾರೆ. ಇದೇ 6ರಂದು ಸಭೆ ಸೇರಿ ಟಿಕೆಟ್‌ ಬಗ್ಗೆ ಚರ್ಚಿಸಲು ಕಾಂಗ್ರೆಸ್‌ನ ಮುಸ್ಲಿಂ ನಾಯಕರು ನಿರ್ಧರಿಸಿದ್ದಾರೆ.

2013ರ ಚುನಾವಣೆಯಲ್ಲಿ 24 ಕ್ಷೇತ್ರಗಳಲ್ಲಿ ಟಿಕೆಟ್‌ ನೀಡುವಂತೆ ಕಾಂಗ್ರೆಸ್ ವರಿಷ್ಠರಲ್ಲಿ ಮುಸ್ಲಿಂ ಸಮುದಾಯ ಬೇಡಿಕೆ ಇಟ್ಟಿತ್ತು. ಪಕ್ಷ 19 ಟಿಕೆಟ್ ನೀಡಿದ್ದು, ಆ ಪೈಕಿ ಒಂಬತ್ತು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ವೀರಶೈವ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್‌ 44 ಕ್ಷೇತ್ರ ನೀಡಿತ್ತು. ಆ ಪೈಕಿ, 29 ಮಂದಿ ಚುನಾಯಿತರಾಗಿದ್ದರು.

ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲು ಕೆಪಿಸಿಸಿ ಚುನಾವಣಾ ಸಮಿತಿ ಹೆಣಗಾಡುತ್ತಿರುವ ಮಧ್ಯೆ, ಪಕ್ಷದ ಮುಸ್ಲಿಂ ನಾಯಕರು ಮೈಕೊಡವಿಕೊಂಡಿದ್ದಾರೆ. ತಮ್ಮ ಸಮುದಾಯದ ಅನೇಕರು ಕಾಂಗ್ರೆಸ್ಸಿಗೆ ನಿಷ್ಠೆ ತೋರಿಸುತ್ತಾ ಬಂದಿದ್ದಾರೆ. ಹೀಗಾಗಿ, ನಮಗೆ ಕನಿಷ್ಠ 30 ಕ್ಷೇತ್ರಗಳಲ್ಲಿ ಟಿಕೆಟ್‌ ನೀಡುವಂತೆ ಹಿರಿಯ ನಾಯಕರು ಕೆಪಿಸಿಸಿಗೆ ಈಗಾಗಲೇ ಮನವಿ ಮಾಡಿಕೊಂಡಿದ್ದಾರೆ.

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಿಸುವಲ್ಲಿ ಯಶಸ್ವಿಯಾದ ಲಿಂಗಾಯತ ಸಮುದಾಯದ ಸಚಿವರು ಮತ್ತು ಪ್ರಮುಖರು, ತಮಗೆ 40 ಟಿಕೆಟ್‌ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.ಈ ಕುರಿತು ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ ಕುಲಕರ್ಣಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿಗೆ ಮನವಿಯನ್ನೂ ನೀಡಿದ್ದಾರೆ. ಅದರ ಬೆನ್ನಲ್ಲೆ, ಕನಿಷ್ಠ 20 ಕ್ಷೇತ್ರ ಬಿಟ್ಟುಕೊಡುವಂತೆ ವೀರಶೈವರೂ ಒತ್ತಡ ಹೇರಲು ಮುಂದಾಗಿದ್ದಾರೆ.

ಕಾಂಗ್ರೆಸ್ಸಿನ ಮುಸ್ಲಿಂ ಮುಖಂಡರು ಇತ್ತೀಚೆಗೆ ರಹಸ್ಯ ಸಭೆ ಸೇರಿ ಟಿಕೆಟ್‌ ಬೇಡಿಕೆ ಮುಂದಿಡುವ ಬಗ್ಗೆ ಚರ್ಚಿಸಿದ್ದರು. ರಾಜ್ಯದಲ್ಲಿ ಮುಸ್ಲಿಂ ಸಮುದಾಯ ನಾಯಕತ್ವದ ಕೊರತೆ ಎದುರಿಸುತ್ತಿದೆ. ರಾಜಕೀಯವಾಗಿ ಪ್ರಭಾವಿ ಹುದ್ದೆ ದಕ್ಕದಿದ್ದರೆ ಮುಸ್ಲಿಂ ಸಮುದಾಯಕ್ಕೆ ಧ್ವನಿ ಇಲ್ಲದಂತಾಗುತ್ತದೆ ಎಂಬ ಬಗ್ಗೆಯೂ ಈ ಸಭೆಯಲ್ಲಿ ಪ್ರಸ್ತಾವವಾಗಿತ್ತು ಎನ್ನಲಾಗಿದೆ.

‘ಈ ಬಾರಿ ನಾವು 26 ಕ್ಷೇತ್ರಗಳನ್ನು ನೀಡುವಂತೆ ಈಗಾಗಲೇ ಬೇಡಿಕೆ ಮುಂದಿಟ್ಟಿದ್ದೇವೆ’ ಎಂದು ಅಲ್ಪಸಂಖ್ಯಾತ ಅಭಿವೃದ್ಧಿ ಖಾತೆಯನ್ನೂ ಹೊಂದಿರುವ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಹೇಳಿದರು.

ಮುಸ್ಲಿಂ ಸಮುದಾಯ ಟಿಕೆಟ್‌ ಕೇಳುವ ಕ್ಷೇತ್ರಗಳಲ್ಲಿ ಹೆಬ್ಬಾಳ, ಜಯನಗರ, ಖಾನಾಪುರ, ಭದ್ರಾವತಿ, ವಿಜಯನಗರ, ಕುಷ್ಠಗಿ, ಅಥಣಿ ಸೇರಿದೆ. ಹೆಬ್ಬಾಳ ಕ್ಷೇತ್ರದಿಂದ ಬೈರತಿ ಸುರೇಶ್‌ ಅವರನ್ನು ಕಣಕ್ಕಿಳಿಸಲು ಮುಖ್ಯಮಂತ್ರಿ ಬಯಸಿದ್ದಾರೆ. ಆದರೆ, ಕಾಂಗ್ರೆಸ್‌ನ ಹಿರಿಯ ಮುಖಂಡ ಜಾಫರ್ ಶರೀಫ್‌, ತಮ್ಮ ಮೊಮ್ಮಗ ಸಿ.ಕೆ. ಅಬ್ದುಲ್‌ ರಹಮಾನ್‌ ಶರೀಫ್‌ಗೆ ಟಿಕೆಟ್‌ ನೀಡಲು ಒತ್ತಾಯಿಸುತ್ತಿದ್ದಾರೆ.

ಜಯನಗರ ಕ್ಷೇತ್ರದ ಟಿಕೆಟ್‌ನ್ನು ಪುತ್ರ ಮನ್ಸೂರ್‌ ಅಲಿ ಖಾನ್‌ಗೆ ನೀಡುವಂತೆ ರೆಹಮಾನ್‌ ಖಾನ್‌ ಲಾಬಿ ನಡೆಸುತ್ತಿದ್ದಾರೆ. ಇಲ್ಲಿ 57,000 ಮುಸ್ಲಿಂ ಮತ್ತು 15,000 ಕ್ರಿಶ್ಚಿಯನ್‌ ಮತದಾರರಿದ್ದಾರೆ ಎನ್ನುವುದು ಮನ್ಸೂರ್‌ ಅವರ ವಾದ. ‘ನಮ್ಮ ಅಭ್ಯರ್ಥಿ
ಗಳು ಗೆಲ್ಲಬಹುದಾದ ಕ್ಷೇತ್ರಗಳಲ್ಲಿ ಟಿಕೆಟ್‌ ನೀಡುವಂತೆ ನಾವು ಬೇಡಿಕೆ ಇಟ್ಟಿದ್ದೇವೆ. ಅಂಥ ಕ್ಷೇತ್ರಗಳನ್ನು ನಾವು ಈಗಾಗಲೇ ಗುರುತಿಸಿದ್ದೇವೆ’ ಎಂದು ರೆಹಮಾನ್‌ ಖಾನ್‌ ಹೇಳಿದರು.

2013ರ ಚುನಾವಣೆಯಲ್ಲಿ ಕ್ರೈಸ್ತ ಸಮುದಾಯವರು ನಾಲ್ಕು ಕ್ಷೇತ್ರಗಳಲ್ಲಿ ಟಿಕೆಟ್‌ ಕೇಳಿದ್ದರು. ಎರಡು ಟಿಕೆಟ್ ಸಿಕ್ಕಿತ್ತು. ‘ಈ ಬಾರಿಯೂ ಕನಿಷ್ಠ ನಾಲ್ಕು ಕಡೆ ಸ್ಪರ್ಧೆಗೆ ಅವಕಾಶ ನೀಡುವಂತೆ ಬೇಡಿಕೆ ಮುಂದಿಡುತ್ತೇವೆ’ ಎಂದು ಮಾಜಿ ಡಿಜಿಪಿ ಎಚ್‌.ಟಿ. ಸಾಂಗ್ಲಿಯಾನ ತಿಳಿಸಿದರು. ಸ್ಪರ್ಧಿಸಿದ್ದ ಇಬ್ಬರು ಜೈನ ಸಮುದಾಯ ಅಭ್ಯರ್ಥಿಗಳೂ ಆಯ್ಕೆಯಾಗಿದ್ದರು.

**

ರಾಜ್ಯದಲ್ಲಿ ಅಲ್ಪಸಂಖ್ಯಾತರ ಚಿತ್ರಣ

* ಅಲ್ಪಸಂಖ್ಯಾತರ ಪ್ರಮಾಣ ಶೇ 16

* ಅಲ್ಪಸಂಖ್ಯಾತ ಕಾಂಗ್ರೆಸ್‌ ಶಾಸಕರ ಸಂಖ್ಯೆ– 16

* 2013ರಲ್ಲಿ  ಕಣಕ್ಕಿಳಿದಿದ್ದ 19 ಮುಸ್ಲಿಂ ಅಭ್ಯರ್ಥಿಗಳಲ್ಲಿ ಒಂಬತ್ತು ಮಂದಿ ಗೆದ್ದಿದ್ದರು. ಉಪಚುನಾವಣೆಯಲ್ಲಿ ಬೀದರ್‌ ಕ್ಷೇತ್ರದಲ್ಲಿ ರಹೀಂಖಾನ್‌ ಗೆದ್ದಿದ್ದರು. ಜೆಡಿಎಸ್‌ನಿಂದ ಗೆದ್ದಿದ್ದ ಜಮೀರ್‌ ಅಹಮದ್‌ ಹಾಗೂ ಇಕ್ಬಾಲ್ ಅನ್ಸಾರಿ ಕಾಂಗ್ರೆಸ್ ಸೇರಿದ್ದಾರೆ.

* ತಲಾ ಇಬ್ಬರು ಕ್ರೈಸ್ತ ಮತ್ತು ಜೈನ ಅಭ್ಯರ್ಥಿಗಳೂ ಗೆಲುವು ಸಾಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT