ಭಾನುವಾರ, ಆಗಸ್ಟ್ 1, 2021
25 °C

ಹುಣಸೂರು ಅಯ್ಯಪ್ಪಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಬಡಾವಣೆ ನಿರ್ಮಾಣಕ್ಕೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಣಸೂರು: ನಗರದ ಹೊರವಲಯದ ಅಯ್ಯಪ್ಪಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡು ಬಡಾವಣೆ ನಿರ್ಮಿಸಲಾಗುತ್ತಿದೆ ಎಂಬ ಆರೋಪದ ಮೇರೆಗೆ ವಲಯ ಅರಣ್ಯಾಧಿಕಾರಿ ಸ್ವರೂಪ್, ಕಂದಾಯ ಇಲಾಖೆ ರೆವಿನ್ಯೂ ಇನ್‌ಸ್ಪೆಕ್ಟರ್ ನಂದನ್ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿ ತಡೆಹಿಡಿದರು.

‘ಹುಣಸೂರು– ಮಂಗಳೂರು ಬೈಪಾಸ್ ರಸ್ತೆಯಲ್ಲಿರುವ ಅರಣ್ಯ ಇಲಾಖೆಗೆ ಸೇರಿದ ಸರ್ವೆ ನಂ. 149ರ ಗುಡ್ಡಕ್ಕೆ ಹೊಂದಿಕೊಂಡಂತಿರುವ ಸರ್ವೆ ನಂ 146ರಲ್ಲಿ ಖಾಸಗಿ ಬಡಾವಣೆ ನಿರ್ಮಾಣವಾಗುತ್ತಿದೆ. ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿ, ಬೆಟ್ಟದ ತಪ್ಪಲಿನ ಜಾಗವನ್ನು ಸಮತಟ್ಟು ಮಾಡಲಾಗುತ್ತಿದೆ. ಇದರಿಂದ ಬೆಟ್ಟ ಕುಸಿಯುವ ಆತಂಕ ಎದುರಾಗಿದೆ’ ಎಂದು ಅಯ್ಯಪ್ಪಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಸುರೇಶ್ ಆರೋಪಿಸಿದ್ದರು.

ಜಾಗಕ್ಕೆ ಸಂಬಂಧಿಸಿದ ದಾಖಲೆ ಗಳನ್ನು ಒದಗಿಸುವಂತೆ ಅಧಿಕಾರಿಗಳು ಬಡಾವಣೆ ನಿರ್ಮಿಸಲು ಮುಂದಾಗಿರುವ ಮಾಲೀಕರಿಗೆ ಸೂಚಿಸಿದರು.

‘ಸರ್ಕಾರವು ಈ ಬೆಟ್ಟದ ತಪ್ಪಲಿನ 4 ಎಕರೆ ಜಾಗವನ್ನು 25 ವರ್ಷಗಳ ಹಿಂದೆಯೇ ದೇವಸ್ಥಾನಕ್ಕೆ ನೀಡಿತ್ತು. ಉಳಿದ ಜಾಗವು ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ. ಈ ಹಿಂದೆ ರಾಜ್ಯ ಅರಣ್ಯ ಸಚಿವರಾಗಿದ್ದ ಸಿ.ಎಚ್.ವಿಜಯ ಶಂಕರ್ ಅವರು, ಬೆಟ್ಟದಲ್ಲಿ ಉದ್ಯಾನ ನಿರ್ಮಿಸಲು ಯೋಜನೆ ಸಿದ್ಧಪಡಿಸಿದ್ದರು’ ಎಂದು ಸುರೇಶ್‌ ಹೇಳಿದರು.

ಪರಿಸರವಾದಿ ಸಂಜಯ್ ಮಾತನಾಡಿ, ‘ಕೊಡಗು ಜಿಲ್ಲೆಯ ಬೆಟ್ಟಗಳಲ್ಲಿ ನಿರ್ಮಾಣ ಚಟುವಟಿಕೆ ನಡೆದಿದ್ದರಿಂದ ಭೂ ಕುಸಿತ ಸಂಭವಿಸಿತ್ತು. ಅದೇ ಪರಿಸ್ಥಿತಿ ಇಲ್ಲಿಯೂ ಮರುಕಳಿಸುವ ಆತಂಕವಿದೆ. ಈ ಘಟನೆಯಿಂದ ಪರಿಸರ ಪ್ರೇಮಿಗಳಿಗೆ ಆಘಾತವಾಗಿದೆ. ಬೆಟ್ಟದ ತಪ್ಪಲಿನಲ್ಲಿ ಖಾಸಗಿ ಬಡಾವಣೆ ನಿರ್ಮಿಸುವುದು ಪರಿಸರ ವಿರೋಧಿ ನಡೆಯಾಗಿದೆ. ಬೆಟ್ಟದಿಂದ ಮಣ್ಣು ತೆಗೆಯುವುದರಿಂದ ಭೂ ಕುಸಿತ ಉಂಟಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಸತ್ಯ ಫೌಂಡೇಶನ್‌ನ ಸತ್ಯಪ್ಪ ಮಾತನಾಡಿ, ‘ಈ ಜಾಗವು ಮೈಸೂರಿನ ಎಸ್.ಟಿ.ಯೋಗರಾಜ್ ಎನ್ನುವರಿಗೆ ಸೇರಿದೆ. ಅವರ ಬಳಿ ದಾಖಲೆಗಳಿವೆ. ಕಂದಾಯ ಇಲಾಖೆಯು ಸರ್ವೆ ನಡೆಸಿ ಭೂಮಿ ಹದುಬಸ್ತು ಗುರುತಿಸುವುದು ಒಳ್ಳೆಯದು’ ಎಂದರು.

ದೇವಸ್ಥಾನದ ಸಮಿತಿ ಅಧ್ಯಕ್ಷ ಗಣೇಶ್, ಸದಸ್ಯರಾದ ಭಾಸ್ಕರ್, ಮಂಜುನಾಥ್ ಇದ್ದರು.

ಅರಣ್ಯ, ಕಂದಾಯ ಇಲಾಖೆಯಿಂದ ಜಂಟಿ ಸರ್ವೆ ನಡೆಸಲಾಗುವುದು. ಬೆಟ್ಟಕ್ಕೆ ಯಾವುದೇ ರೀತಿ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು.

ಸ್ವರೂಪ್, ವಲಯ ಅರಣ್ಯಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು