ಶುಕ್ರವಾರ, ಸೆಪ್ಟೆಂಬರ್ 25, 2020
29 °C
ಅಂಗನವಾಡಿ ಕಾರ್ಯಕರ್ತೆಯರ ವೇತನ ಏರಿಕೆಗೆ ಒತ್ತಾಯ

ಮಳೆಯ ನಡುವೆ ನಗರದಲ್ಲಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರದಲ್ಲಿ ಶುಕ್ರವಾರ ಸುರಿಯುತ್ತಿದ್ದ ಮಳೆಯ ನಡುವೆಯೇ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಒಟ್ಟು ಮೂರು ಪ್ರತಿಭಟನೆಗಳು ನಡೆದವು.

ಕಳೆದ ವರ್ಷ ಕ‍ಪಿಲಾ ನದಿ ಪ್ರವಾಹದಿಂದ ಸಂತ್ರಸ್ತರಾದವರಿಗೆ ಮನೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸರಗೂರು ತಾಲ್ಲೂಕಿನ ಬಿದರಹಳ್ಳಿ ವೃತ್ತದಲ್ಲಿ ಹಲವು ಮನೆಗಳು ಜಲಾವೃತಗೊಂಡಿದ್ದವು. ಕೆಲ ದಿನಗಳ ಮಟ್ಟಿಗೆ ಇವರು ಪರಿಹಾರ ಕೇಂದ್ರಗಳಲ್ಲಿ ಇದ್ದರು. ಮನೆಯೊಳಗೆ ನೀರು ನುಗ್ಗಿದ್ದರಿಂದ ಶಿಥಿಲಗೊಂಡಿವೆ. ಇಷ್ಟು ದಿನ ಹೇಗೋ ಅದೇ ಮನೆಗಳಲ್ಲಿ ಇವರು ಬದುಕು ಸಾಗಿಸುತ್ತಿದ್ದಾರೆರೆ. ಈಗ ಮನೆಗಳು ಕುಸಿಯುವ ಹಂತ ತಲುಪಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.‌

ಕಪಿಲೇಶ್ವರ ಕಾಲೊನಿಯಲ್ಲಿ ಪ್ರಾರಂಭಗೊಂಡಿರುವ 43 ಮನೆಗಳ ಕಾಮಗಾರಿಯನ್ನು ಪೂರ್ಣಗೊಳಿಸಬೇಕು, ಶಿಥಿಲಗೊಂಡ ಮನೆಯಲ್ಲಿ ವಾಸಿಸುವವರಿಗಾಗಿ ತಾತ್ಕಾಲಿಕ ಪರಿಹಾರ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.

ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಚಂದ್ರಶೇಖರ್‌ಮೇಟಿ, ಮುಖಂಡರಾದ ಪಿ.ಎಸ್.ಸಂಧ್ಯಾ, ಎಸ್.ಎಚ್.ಹರೀಶ್, ಪುಟ್ಟರಾಜು, ಸುನಿಲ್, ಪದ್ಮಾ, ರಂಗನಾಥ್ ಹಾಗೂ ಇತರರು ಇದ್ದರು.

ವೇತನ ಏರಿಕೆಗೆ ಒತ್ತಾಯ

ಅಂಗನವಾಡಿ, ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತೆಯರಿಗೆ ವೇತನ ಏರಿಕೆ ಮಾಡಬೇಕು ಎಂದು ಆಗ್ರಹಿಸಿ ಎಐಟಿಯುಸಿ, ಅಂಗನವಾಡಿ– ಬಿಸಿಯೂಟ ಆಶಾ ಸಂಘಟನೆಗಳ ಜಂಟಿ ಸಮಿತಿ, ಜೆಸಿಟಿಯು ನೇತೃತ್ವದಲ್ಲಿ ಕಾರ್ಯಕರ್ತರು ಆಗ್ರಹಿಸಿದರು.

ಸ್ಕೀಮ್‌ ವರ್ಕರ್‌ಗಳನ್ನು ಕಾಯಂ ಕಾರ್ಮಿಕರೆಂದು ಪರಿಗಣಿಸಬೇಕು, ಮಾಸಿಕ ಕನಿಷ್ಠ ₹ 21 ಸಾವಿರ ವೇತನ ನೀಡಬೇಕು, ಮಾಸಿಕ ₹ 10 ಸಾವಿರ ಪಿಂಚಣಿ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಮೂಲಸೌಕರ್ಯಕ್ಕೆ ಆಗ್ರಹ

ಮೈಸೂರಿನ ಕುರಿಮಂಡಿ ಸಮೀಪ ವಾಸ ಇರುವ 80ಕ್ಕೂ ಹೆಚ್ಚು ಕುಟುಂಬಗಳಿಗೆ ವಾಸಿಸಲು ಮನೆ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಬುದ್ಧವಾದ) ಕಾರ್ಯಕರ್ತರು ಒತ್ತಾಯಿಸಿದರು.

ಇವರು ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಕುಡಿಯಲು ಶುದ್ಧ ನೀರಿನ ವ್ಯವಸ್ಥೆ ಇರುವುದಿಲ್ಲ. 20 ವರ್ಷಗಳಿಂದಲೂ ಇವರು ಪರಿತಪಿಸುತ್ತಿದ್ದಾರೆ. ಹೀಗಾಗಿ, ಮೂಲಸೌಕರ್ಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ನಿಂಗರಾಜ್ ಮಲ್ಲಾಡಿ, ಎಚ್.ಬಿ.ದಿವಾಕರ್, ಕೆ.ನಂಜಪ್ಪ, ಬಲ್ಲೇನಹಳ್ಳಿ ಕೆಂಪರಾಜು, ಶ್ರೀಧರ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.