ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ರವಿ ಕಿರಣದಲ್ಲಿ ಮಿಂದೆದ್ದ ಯೋಗಪಟುಗಳು

‘ರಥ ಸಪ್ತಮಿ’ಯಂದು ಸಾಮೂಹಿಕ ಸೂರ್ಯನಮಸ್ಕಾರ
Last Updated 20 ಫೆಬ್ರುವರಿ 2021, 6:04 IST
ಅಕ್ಷರ ಗಾತ್ರ

ಮೈಸೂರು: ಬೆಳಗಿನ ಚುಮುಚುಮು ಚಳಿಯಲ್ಲಿ ಬೆಳಕು ಮೂಡುವುದಕ್ಕೆ ಮುನ್ನವೇ ನೂರಾರು ಮಂದಿ ಇಲ್ಲಿನ ಅರಮನೆ ಕೋಟೆ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ಸೇರತೊಡಗಿದರು. ಮೂಡಣದಲ್ಲಿ ಬೆಳ್ಳಿಯಂತಹ ಬೆಳಗಿನ ಸೂಚನೆ ಕಾಣುತ್ತಿದ್ದಂತೆ ಸೂರ್ಯನಮಸ್ಕಾರ ಆರಂಭವಾಯಿತು. ಮಕ್ಕಳಿಂದ ಹಿಡಿದು ವಯೋವೃದ್ಧವರೆಗೆ ಎಲ್ಲ ವಯೋಮಾನದವರು 108 ಬಾರಿ ಸೂರ್ಯನಮಸ್ಕಾರಗಳನ್ನು ಮಾಡುವ ಮೂಲಕ ಧನ್ಯತಾ ಭಾವ ಮೆರೆದರು.

ಮೈಸೂರು ಯೋಗ ಒಕ್ಕೂಟದ ವತಿಯಿಂದ ರಥಸಪ್ತಮಿ ಅಂಗವಾಗಿ ಇಲ್ಲಿ ನಡೆದ ಸಾಮೂಹಿಕ 108 ಸೂರ್ಯ ನಮಸ್ಕಾರ, ಸೂರ್ಯಯಜ್ಞ ಹಾಗೂ 20ನೇ ವಾರ್ಷಿಕೋತ್ಸವದಲ್ಲಿ 600 ಮಂದಿ ಭಾಗಿಯಾದರು.

ಶ್ವೇತವಸ್ತ್ರಧಾರಿಗಳಾಗಿ ಬಂದ ಯೋಗಪಟುಗಳು ತಮ್ಮ ತಮ್ಮ ಯೋಗ ಮ್ಯಾಟ್‌ಗಳನ್ನು ಹರಡಿಕೊಂಡು ಸೂರ್ಯನಮಸ್ಕಾರ ಮಾಡುತ್ತಿದ್ದಂತೆ ಮೂಡಣದಲ್ಲಿ ಕಣ್ಣು ಬಿಟ್ಟ ದಿನಕರ ತನ್ನ ಕಿರಣಗಳಿಂದ ಇವರನ್ನು ತೋಯಿಸುವ ಮೂಲಕ ಚಳಿಯನ್ನಟ್ಟುತ ಬಂದ.

ಕಾರ್ಯಕ್ರಮದ ಮಧ್ಯದಲ್ಲಿ ಆಗಮಿಸಿದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಕಾರ್ಯಕ್ರಮ ಉದ್ಘಾಟಿಸಿ ಯೋಗದ ಮಹತ್ವ ಕುರಿತು ಮಾತನಾಡಿದರು.

‘ಯೋಗ ನಮ್ಮ ಜೀವನಕ್ಕೆ ಅಗತ್ಯವಾಗಿ ಬೇಕಾದ ಟೂಲ್‌’ ಎಂದು ಹೇಳಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬನಾರಸ್‌ನಿಂದ ಯೋಗ ಶಿಕ್ಷಕ ಕೃಷ್ಣಮಾಚಾರ್ಯ ಅವರನ್ನು ಕರೆ ತಂದ ವಿವರಗಳನ್ನು ಹಂಚಿಕೊಂಡರು.

ಇದಕ್ಕೂ ಮುನ್ನ ಸಮೀಪದ ಚಂದ್ರಮೌಳೇಶ್ವರಸ್ವಾಮಿ ದೇಗುಲದಲ್ಲಿ ನಡೆದ ಸೂರ್ಯಯಜ್ಞದಲ್ಲಿ ಇವರು ಪಾಲ್ಗೊಂಡರು. ಕೋಟೆ ಆಂಜನೇಯಸ್ವಾಮಿ ದೇಗುಲದ ಉತ್ಸವ ಮೂರ್ತಿಗೆ ಪುಷ್ಪನಮನ ಸಲ್ಲಿಸಿದರು.

108 ಬಾರಿ ಸೂರ್ಯ ನಮಸ್ಕಾರ ಮುಗಿಯುತ್ತಿದ್ದಂತೆ ವಿವಿಧ ಯೋಗ ಸಂಸ್ಥೆಗಳ ಯೋಗಪಟುಗಳು ಗುಂಪುಗುಂಪಾಗಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಯಿತು.

ಒಕ್ಕೂಟದ ಗೌರವಾಧ್ಯಕ್ಷ ಡಾ.ಎ.ಎಸ್.ಚಂದ್ರಶೇಖರ್, ಅಧ್ಯಕ್ಷ ಬಿ.ಪಿ.ಮೂರ್ತಿ, ಕಾರ್ಯಾಧ್ಯಕ್ಷ ಟಿ.ಜಲೇಂದ್ರಕುಮಾರ್, ಉಪಾಧ್ಯಕ್ಷರಾದ ಎಂ.ಎಸ್.ರಮೇಶ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಕೆ.ಜಿ.ದೇವರಾಜ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸೀತಾಲಕ್ಷ್ಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT