ಬುಧವಾರ, ಡಿಸೆಂಬರ್ 2, 2020
24 °C
ಆಯಿಷ್‌: ಕಾನ್ಪುರ, ತ್ರಿಪುರಾದಲ್ಲೂ ನೂತನ ಸಂಸ್ಥೆ ಸ್ಥಾಪನೆಯ ಪ್ರಕ್ರಿಯೆ

ಮೈಸೂರು: ಬಾಹ್ಯ ಕೇಂದ್ರದ ಸೇವೆಗೆ ಹೆಚ್ಚಿದ ಬೇಡಿಕೆ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮಕ್ಕಳು ಸೇರಿದಂತೆ ಹಲವು ಹಿರಿಯರನ್ನು ಬಾಧಿಸುವ ವಾಕ್‌ ಮತ್ತು ಶ್ರವಣ ಸಮಸ್ಯೆಯ ಪರಿಹಾರಕ್ಕಾಗಿ ಐದೂವರೆ ದಶಕದಿಂದ ಶ್ರಮಿಸುತ್ತಿರುವ, ಮೈಸೂರಿನ ಅಖಿಲ ಭಾರತ ವಾಕ್‌ ಶ್ರವಣ ಸಂಸ್ಥೆ (ಆಯಿಷ್‌) ತಮ್ಮಲ್ಲೂ ಸೇವೆ ಆರಂಭಿಸಲಿ ಎಂದು ಉತ್ತರ ಕರ್ನಾಟಕ ಸೇರಿದಂತೆ, ಉತ್ತರ ಭಾರತ ಹಾಗೂ ಈಶಾನ್ಯ ಭಾರತದಿಂದ ಬೇಡಿಕೆ ಬಂದಿದೆ.

ಕಾನ್ಪುರದಲ್ಲಿ ಸಂಸ್ಥೆಯನ್ನು ಆರಂಭಿಸಲಿಕ್ಕಾಗಿ ಉತ್ತರ ಪ್ರದೇಶ ಸರ್ಕಾರ ಈಗಾಗಲೇ 12 ಎಕರೆ ಭೂಮಿ ನೀಡಿದೆ. ಕೇಂದ್ರದ ಆರೋಗ್ಯ ಸಚಿವಾಲಯ ಅನುಮತಿ ನೀಡಿದೆ. ಕೋವಿಡ್‌ ಕಾರಣದಿಂದ ಈ ಪ್ರಕ್ರಿಯೆಯಲ್ಲಿ ಕೊಂಚ ವಿಳಂಬವಾಗಿದೆ ಎಂದು ಆಯಿಷ್ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ತ್ರಿಪುರಾದಲ್ಲೂ ಸಂಸ್ಥೆಯನ್ನು ಆರಂಭಿಸುವ ಪ್ರಸ್ತಾವವಿದೆ. ಆದರೆ, ಅಲ್ಲಿ ಇನ್ನೂ ಜಾಗ ಅಂತಿಮಗೊಂಡಿಲ್ಲ. ಸ್ಥಳ ಪರಿಶೀಲನೆ ಬಳಿಕ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಆಯಿಷ್‌ ಪ್ರಸ್ತಾವ ಸಲ್ಲಿಸಲಿದೆ ಎಂಬುದು ತಿಳಿದು ಬಂದಿದೆ.

‘ಉತ್ತರ ಭಾರತ ಹಾಗೂ ಈಶಾನ್ಯ ಭಾರತದಲ್ಲಿ ಆಯಿಷ್‌ ಸಂಸ್ಥೆಯ ಸ್ಥಾಪನೆಗೆ ಕೇಂದ್ರ ಆರೋಗ್ಯ ಸಚಿವಾಲಯವೂ ಉತ್ಸುಕತೆ ತೋರಿದೆ. ಈ ಎರಡೂ ಕಡೆ ಕೇಂದ್ರ ಆರಂಭಿಸುವ ಜವಾಬ್ದಾರಿಯನ್ನು ನಮಗೆ ನೀಡಿದೆ. ಈ ನಿಟ್ಟಿನಲ್ಲಿ ಹಲವು ಸೂಚನೆಯನ್ನು ಮೌಖಿಕವಾಗಿಯೂ ಕೊಟ್ಟಿದೆ. ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆ ನಡೆದಿವೆ’ ಎಂದು ಆಯಿಷ್‌ ನಿರ್ದೇಶಕಿ ಡಾ.ಎಂ.ಪುಷ್ಪಾವತಿ ಪ್ರತಿಕ್ರಿಯಿಸಿದರು.

3 ಕಡೆ ಬೇಡಿಕೆ: ಆಯಿಷ್‌ ರಾಜ್ಯದ 8 ಸ್ಥಳಗಳಲ್ಲಿ ಬಾಹ್ಯ ಕೇಂದ್ರಗಳ (ಔಟ್‌ರೀಚ್‌ ಸರ್ವಿಸ್‌ ಸೆಂಟರ್‌) ಮೂಲಕ ಕ್ಲಿನಿಕಲ್‌ ಸೇವೆ ಒದಗಿಸುತ್ತಿದೆ. ಇದೀಗ ಉತ್ತರ ಕರ್ನಾಟಕದ ಮೂರು ಪ್ರಮುಖ ನಗರ/ಜಿಲ್ಲಾ ಕೇಂದ್ರದಿಂದ, ತಮ್ಮಲ್ಲೂ ಕ್ಲಿನಿಕಲ್‌ ಸೇವೆ ಆರಂಭಿಸಬೇಕೆಂಬ ಪ್ರಸ್ತಾವ ಸಲ್ಲಿಕೆಯಾಗಿವೆ.

ಮಡಿಕೇರಿಯ ಕಿಮ್ಸ್‌, ಬೆಳಗಾವಿಯ ಬಿಮ್ಸ್, ಕಲಬುರ್ಗಿಯ ಜಿಮ್ಸ್‌, ಸಾಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆ, ಕೆ.ಆರ್‌.ಪೇಟೆಯ ತಾಲ್ಲೂಕು ಆಸ್ಪತ್ರೆ, ನಂಜನಗೂಡು ತಾಲ್ಲೂಕು ಆಸ್ಪತ್ರೆ, ಸರಗೂರಿನ ವಿವೇಕಾನಂದ ಸ್ಮಾರಕ ಆಸ್ಪತ್ರೆ, ಯಳಂದೂರು ತಾಲ್ಲೂಕಿನ ಗುಂಬಳ್ಳಿಯಲ್ಲಿರುವ ಕರುಣಾ ಟ್ರಸ್ಟ್‌ ಆಸ್ಪತ್ರೆಯಲ್ಲಿ ಆಯಿಷ್‌ನ ಬಾಹ್ಯ ಕೇಂದ್ರಗಳು ಕಾರ್ಯಾಚರಿಸುತ್ತಿವೆ.

ಬಾಹ್ಯ ಕೇಂದ್ರವೊಂದನ್ನು ಆರಂಭಿಸಲು ₹ 1 ಕೋಟಿ ಬೇಕಾಗುತ್ತದೆ. ಸಚಿವಾಲಯದ ಅನುಮತಿ ದೊರೆತ ನಂತರ ಎಲ್ಲಿ ಆರಂಭಿಸುತ್ತೇವೆ ಎಂಬ ಮಾಹಿತಿ ನೀಡಲಾಗುವುದು
-ಡಾ.ಎಂ.ಪುಷ್ಪಾವತಿ, ಆಯಿಷ್‌ ನಿರ್ದೇಶಕಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.