ಪ್ರಬುದ್ಧ ಭಾರತ ನಿರ್ಮಾಣದತ್ತ ಹೆಜ್ಜೆ

7
ಬಸವ ಜಯಂತಿಯಲ್ಲಿ ಸಚಿವ ಎನ್‌.ಮಹೇಶ್‌ ವಿಶ್ವಾಸ

ಪ್ರಬುದ್ಧ ಭಾರತ ನಿರ್ಮಾಣದತ್ತ ಹೆಜ್ಜೆ

Published:
Updated:

ಮೈಸೂರು: ‘ಪ್ರಬುದ್ಧ ಭಾರತ ನಿರ್ಮಾಣದತ್ತ ಹೆಜ್ಜೆ ಇಡಲಾಗುತ್ತಿದೆ. ಒಂದು ದಿನ ಜಾತಿ ಆಧಾರಿತ ಗೊಂದಲ, ಸಂಘರ್ಷಕ್ಕೆ ಮುಕ್ತಿ ಸಿಗಲಿದೆ. ಆ ದಿಕ್ಕಿನಲ್ಲಿ ಸಮಾಜದಲ್ಲಿ ಪ್ರಯತ್ನ ನಡೆಯುತ್ತಿದೆ’ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ನುಡಿದರು.

ಸುತ್ತೂರು ಶಾಖಾ ಮಠದಲ್ಲಿ ಶನಿವಾರ ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯುತ ಸಂಘ ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಬುದ್ಧ, ಬಸವ, ಅಂಬೇಡ್ಕರ್‌ ಅವರ ಸಾಮಾಜಿಕ ಜಾಗೃತಿ ಹೋರಾಟದಿಂದ ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಈ ಮಹಾಪುರುಷರ ಆಕಾಂಕ್ಷೆ ಈಡೇರುವ ದಿನಗಳು ಬರಲಿವೆ’ ಎಂದರು.

‘ಬುದ್ಧ, ಬಸವ, ಅಂಬೇಡ್ಕರ್‌ ಅವರದ್ದು ಅಹಿಂಸಾತ್ಮಕ, ಜೀವಪರ, ಸಾಮಾಜಿಕ ಪರಿವರ್ತನಾ ಹೋರಾಟ. ಆದರೆ, ಅವರ ಆಲೋಚನೆಗಳ ವಿರುದ್ಧ ಹಿಂಸಾತ್ಮಕ ಹೋರಾಟ ನಡೆದಿದೆ’ ಎಂದು ಹೇಳಿದರು.

‘ಮತ್ತೊಬ್ಬರ ಜಾತಿ ತಿಳಿದುಕೊಳ್ಳುವುದು ಭಾರತೀಯರ ಸಾಮಾಜಿಕ ಮನಸ್ಥಿತಿ. 12ನೇ ಶತಮಾನದಲ್ಲಿ ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿ ಹೊರಬಂದವರು ಬಸವಣ್ಣ. ಅವರನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡರೆ ಜಾತಿ ವ್ಯವಸ್ಥೆ ಅಪ್ರಸ್ತುತವಾಗುತ್ತದೆ’ ಎಂದು ವಿಶ್ಲೇಷಿಸಿದರು.

‘ಸಾಮಾಜಿಕ, ಆರ್ಥಿಕ ಹೋರಾಟ ನಿರಂತರವಾದದು. 6ನೇ ಶತಮಾನದಲ್ಲಿ ಆರಂಭವಾದ ಗೌತಮ ಬುದ್ಧರ ಹೋರಾಟ ಪ್ರಥಮ ಅಲ್ಲ. ಅದಕ್ಕೂ ಮೊದಲು ಇಂಥ ಹೋರಾಟ ನಡೆದಿದ್ದವು. ಆಗಲೂ ಸಾಮಾಜಿಕ ತಾರತಮ್ಯಗಳು ಇದ್ದವು’ ಎಂದು ನುಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ‘ಬಸವಣ್ಣ ತೋರಿದ ಹಾದಿಯಲ್ಲಿ ಸುತ್ತೂರು ಮಠ ನಡೆಯುತ್ತಿದೆ. ಬಸವಣ್ಣನ ವಿಚಾರಧಾರೆಗಳನ್ನು ರಾಜ್ಯದಾದ್ಯಂತ ಸಾರುತ್ತಿದೆ’ ಎಂದು ಪ್ರಶಂಸಿಸಿದರು.

ಡಾ.ವಿದ್ವಾನ್‌ ಬಿ.ಒ.ಗಂಗಾಧರಪ್ಪ ಅವರ ‘ಶಾಕುಂತಲ ನಾಟಕದಲ್ಲಿ ನೈತಿಕ ಮೌಲ್ಯಗಳು’, ಡಾ.ಎನ್‌.ಯೋಗೇಶ್‌ ಅವರ ‘ಮುಟ್ಟಿ ಸೊಂಡಿಲನು–ವಚನ ಸಾಹಿತ್ಯ ಅನುಸಂಧಾನ’, ಡಿ.ನಾಗೇಂದ್ರಪ್ಪ ಅವರ ‘ತಿರುಳ್ಗನ್ನಡ ತಿರುಕ ಉತ್ತಂಗಿ ಚನ್ನಪ್ಪ’, ಎ.ಮಹದೇವಪ್ಪ ಅವರ ‘ಬಸವಣ್ಣನವರ ಆಯ್ದ ವಚನಗಳು’ ಕೃತಿಯನ್ನು ಬಿಡುಗಡೆ ಮಾಡಲಾಯಿತು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಶಾಸಕರಾದ ಕೆ.ಮಹದೇವ, ಸಿ.ಎಸ್‌.ನಿರಂಜನಕುಮಾರ್‌‌, ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಕೆ.ಜಿ.ಮಹೇಶ್‌, ಕೆ.ಎಂ.ಪುಟ್ಟಬುದ್ಧಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !