ಶನಿವಾರ, ಸೆಪ್ಟೆಂಬರ್ 26, 2020
26 °C
ವೇಣು ರಾಜಮಣಿ ಹೇಳಿಕೆ

ಅಭಿವ್ಯಕ್ತಿ ಸ್ವಾತಂತ್ರ ಹತ್ತಿಕ್ಕುವುದು ಸಲ್ಲ: ನೆದರ್ಲೆಂಡ್ಸ್‌ನ ಭಾರತದ ರಾಯಭಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಯಾವುದೇ ಪರಿಸ್ಥಿತಿಯಲ್ಲೂ ಅಭಿವ್ಯ‌ಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಸಲ್ಲ. ಅದಕ್ಕೆ ಯಾರಿಗೂ ಅವಕಾಶ ನೀಡಬಾರದು’ ಎಂದು ನೆದರ್ಲೆಂಡ್ಸ್‌ಗೆ ಭಾರತದ ರಾಯಭಾರಿ ಆಗಿರುವ ವೇಣು ರಾಜಮಣಿ ಹೇಳಿದರು.

ಮೈಸೂರು ಲಿಟರರಿ ಫೋರಂ ಚಾರಿಟಬಲ್‌ ಟ್ರಸ್ಟ್‌ ಹಾಗೂ ಮೈಸೂರು ಬುಕ್‌ ಕ್ಲಬ್ಸ್‌– 2015 ಸಹಯೋಗದೊಂದಿಗೆ ಆಯೋಜಿಸಿರುವ ‘ಮೈಸೂರು ಸಾಹಿತ್ಯ ಸಂಭ್ರಮ– 2020’ ಆನ್‌ಲೈನ್‌ (ವರ್ಚುವಲ್‌ ಸರಣಿ) ಕಾರ್ಯಕ್ರಮದಲ್ಲಿ ಶುಕ್ರವಾರ ಅವರು ಮಾತನಾಡಿದರು.

ಆನ್‌ಲೈನ್‌ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ನೆದರ್ಲೆಂಡ್ಸ್‌ನಿಂದ ಪಾಲ್ಗೊಂಡರೆ, ತಕ್ಷಶಿಲಾ ಇನ್‌ಸ್ಟಿಟ್ಯೂಷನ್‌ನ ನಿರ್ದೇಶಕ ನಿತಿನ್‌ ಪೈ ಅವರು ಬೆಂಗಳೂರಿನಿಂದ ಸಂವಾದ ನಡೆಸಿಕೊಟ್ಟರು.

ಲೇಖಕರು, ಬರಹಗಾರರು, ಪ್ರಕಾಶಕರ ಮೇಲಿನ ದಾಳಿ ಮತ್ತು ಪುಸ್ತಕಗಳಿಗೆ ಬೆಂಕಿ ಹಾಕುವ ಘಟನೆಗಳು ಖಂಡನೀಯ. ಇಂತಹ ಕೃತ್ಯಗಳನ್ನು ದೇಶದ ಪ್ರತಿಯೊಬ್ಬ ಪ್ರಜೆ ಎಷ್ಟು ಸಾಧ್ಯವೋ ಅಷ್ಟು ಪ್ರಬಲವಾಗಿ ವಿರೋಧಿಸಬೇಕು ಎಂದು ತಿಳಿಸಿದರು.

ಸಾಧಿಸಲು ಸಾಕಷ್ಟಿದೆ: ಭಾರತವನ್ನು ‘ಸೂಪರ್‌ ಪವರ್‌’ ಎಂದು ಬಿಂಬಿಸಲು ಪ್ರಜ್ಞಾಪೂರ್ವಕವಾಗಿ ಪ್ರಯತ್ನ ನಡೆಯುತ್ತಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

‘ಅಭಿವೃದ್ಧಿ ಹೊಂದಲು ಇನ್ನೂ ಸಾಕಷ್ಟು ಸಾಧಿಸಬೇಕಿದೆ. ಬಡತನ ನಿರ್ಮೂಲನೆಯಾಗಬೇಕು. ಆರೋಗ್ಯ ಮತ್ತು ಶಿಕ್ಷಣ ಎಲ್ಲರಿಗೂ ದೊರೆಯಬೇಕು. ವೈವಿಧ್ಯತೆಯ ಜತೆ ಒಗ್ಗಟ್ಟಿನಿಂದ ಬದುಕಲು ಕಲಿಯಬೇಕು. ನಮ್ಮಲ್ಲಿರುವ ಅಲ್ಪಸಂಖ್ಯಾತರಿಗೆ ರಕ್ಷಣೆ ಒದಗಿಸಬೇಕು. ಭಿನ್ನ ಧ್ವನಿ, ಭಿನ್ನಾಭಿಪ್ರಾಯಗಳನ್ನು ಗೌರವಿಸಬೇಕು’ ಎಂದು ಸಲಹೆ ನೀಡಿದರು.

ಅನುಭವಗಳನ್ನು ಬರೆದಿದ್ದೇನೆ: ‘ವೃತ್ತಿಜೀವನದಲ್ಲಿ ಎದುರಾದ ಅನುಭವಗಳನ್ನು ಪುಸ್ತಕದ ರೂಪದಲ್ಲಿ ಕಟ್ಟಿಕೊಟ್ಟಿದ್ದೇನೆ. ವಿವಿಧ ದೇಶ, ಸಂಸ್ಕೃತಿ ಮತ್ತು ಸಮಾಜದ ಜನರೊಂದಿಗೆ ಬೆರೆತಾಗ ಲಭಿಸಿದ ಅನುಭವವನ್ನು ತಿಳಿಸಿದ್ದೇನೆ. ಒಂದು ದೇಶದ ರಾಯಭಾರಿಯಾಗಿ ಕಳುಹಿಸಿಕೊಟ್ಟಾಗ, ಆ ಅವಕಾಶವನ್ನು ನಾನು ಬಳಸಿಕೊಂಡಿದ್ದೇನೆ’ ಎಂದರು.

‘ಇಂದು ಬರವಣಿಗೆಯ ಆಸಕ್ತಿ ಕಡಿಮೆಯಾಗಿದೆ. ಆದ್ದರಿಂದ ಬರೆಯುವುದರ ಜತೆಗೆ ಇತರರಿಗೂ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ಮಕ್ಕಳು, ಯುವಕರಲ್ಲಿ ಬರವಣಿಗೆಯ ಕಲೆ ಬೆಳೆಸಬೇಕು’ ಎಂದು ಕಿವಿಮಾತು ಹೇಳಿದರು.

ಸಾಹಿತ್ಯ ಸಂಭ್ರಮದ ಕೊನೆಯ ಸಂವಾದ ಕಾರ್ಯಕ್ರಮ ಸೆ.5ರಂದು ಸಂಜೆ 7ರಿಂದ ನಡೆಯಲಿದ್ದು, ಅಮಿಷ್‌ ತ್ರಿಪಾಠಿ ಅವರು ಲಂಡನ್‌ನಿಂದ ಹಾಗೂ ಶೋಭಾ ನಾರಾಯಣ್‌ ಅವರು ಬೆಂಗಳೂರಿನಿಂದಲೂ ಪಾಲ್ಗೊಳ್ಳಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.