ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆ. 19 ರಿಂದ ‘ಭಾರತೀಯ ರಂಗಸಂಗೀತ–ನಾಟಕೋತ್ಸವ’

ರಂಗಾಯಣದಲ್ಲಿ ನಾಟಕ, ಸಂಗೀತದ ರಸದೌತಣ
Last Updated 16 ಸೆಪ್ಟೆಂಬರ್ 2021, 6:37 IST
ಅಕ್ಷರ ಗಾತ್ರ

ಮೈಸೂರು: ಬಿ.ವಿ.ಕಾರಂತರ ಜನ್ಮದಿನದ ಅಂಗವಾಗಿ ನಗರದ ರಂಗಾಯಣದಲ್ಲಿ ಸೆ.19 ರಿಂದ 26ರವರೆಗೆ ಎಂಟು ದಿನ ’ಭಾರತೀಯ ರಂಗಸಂಗೀತ–ನಾಟಕೋತ್ಸವ’ ನಡೆಯಲಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ‘ಬಿ.ವಿ.ಕಾರಂತ ಜನ್ಮದಿನವನ್ನು ರಂಗಾಯಣವು ಹಿಂದಿನ ವರ್ಷ ‘ಭಾರತೀಯ ರಂಗಸಂಗೀತ ದಿನ’ ಎಂದು ಘೋಷಿಸಿತ್ತು. ಈ ಬಾರಿ ಬಾಬುಕೋಡಿ ಕಾರಂತ ರಂಗಪ್ರತಿಷ್ಠಾನದ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

‘19 ರಂದು ಸಂಜೆ 5ಕ್ಕೆ ಉದ್ಯಮಿ ಎಂ.ಜಗನ್ನಾಥ ಶೆಣೈ, ಕಾರಂತ ರಂಗೋತ್ಸವ ಉದ್ಘಾಟಿಸುವರು. ರಂಗಾಯಣದ ಆವರಣದಲ್ಲಿ ಕಾರಂತ ಅವರ ಮೂರು ಅಡಿ ಎತ್ತರದ ಪುತ್ಥಳಿಯನ್ನು ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ ವೀಣಾಶರ್ಮ ಭೂಸನೂರುಮಠ ಅನಾವರಣಗೊಳಿಸುವರು. ಸಂಜೆ 6.30ಕ್ಕೆ ಅಂತರರಾಷ್ಟ್ರೀಯ ಖ್ಯಾತಿಯ ಸೂಫಿ ಗಾಯಕ ಮುಖ್ತಿಯಾರ್ ಅಲಿ ಮತ್ತು ತಂಡದಿಂದ ಸೂಫಿ ಗಾಯನ ನಡೆಯಲಿದ’ ಎಂದು ವಿವರಿಸಿದರು.

‘20 ರಂದು ಸಂಜೆ 6.30ಕ್ಕೆ ಪುಣೆಯ ಶಕುಂತಲಾ ಬಾಯಿ ನಗರ್‌ಕರ್‌ ಅವರು ‘ಲಾವಣಿ ಕೆ ರಂಗ್’ ಕಾರ್ಯಕ್ರಮ ನಡೆಸಿಕೊಡುವರು. 21 ರಂದು ಸಂಜೆ 6.30 ಕ್ಕೆ ಕಾರಂತ ಪರಿಕಲ್ಪನೆಯ ಸಂಗೀತ ‘ರಾಗ–ಸರಾಗ’ ನಡೆಯಲಿದ್ದು, 7.15ಕ್ಕೆ ರಂಗಾಯಣದ ಕಲಾವಿದರಿಂದ ‘ಕಾರಂತ ರಂಗಗೀತೆಗಳು’ ಪ್ರಸ್ತುತಿ ನಡೆಯಲಿದೆ. 22 ರಂದು ‘ಆಧೇ ಅಧೂರೇ’, 23 ರಂದು ‘ಬಕ’, 24 ರಂದು ‘ಮೂಕನ ಮಕ್ಕಳು’ ಹಾಗೂ 25 ರಂದು ‘ಚಂದ್ರಮುಖಿ’ ನಾಟಕ ಪ್ರದರ್ಶನ ಇರಲಿವೆ. ನಾಟಕಗಳಿಗೆ ತಲಾ ಪ್ರವೇಶ ಶುಲ್ಕ ₹20 ನಿಗದಿಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘26 ರಂದು ಬೆಳಿಗ್ಗೆ 11ಕ್ಕೆ ಸಮಾರೋಪ ಸಮಾರಂಭ ಹಾಗೂ ‘ರಂಗಭೀಷ್ಮರ ರಂಗಾವಲೋಕನ’ ವಿಚಾರ ಸಂಕಿರಣ ನಡೆಯಲಿದೆ. ‘ಕಾರಂತರ ರಂಗಭಾರತದಲ್ಲಿ ನಾವು’ ಕುರಿತು ರಂಗಭೂಮಿ ನಿರ್ದೇಶಕ ಶ್ರೀನಿವಾಸ ಪ್ರಭು, ‘ಕಾರಂತ ರಂಗಮಾರ್ಗ’ ಕುರಿತು ಸುರೇಶ್ ಆನಗಳ್ಳಿ ವಿಷಯ ಮಂಡಿಸುವರು’ ಎಂದರು.

ರಂಗ ಕಾರ್ಯಾಗಾರ: ರಂಗಾಯಣವು ‘ಸುಬ್ಬಯ್ಯ ನಾಯ್ಡು ಮತ್ತು ನಾಗರತ್ನಮ್ಮ’ ಹೆಸರಿನಲ್ಲಿ ರಂಗ ಕಾರ್ಯಾಗಾರವನ್ನು ಏರ್ಪಡಿಸಿದ್ದು, 32 ಹವ್ಯಾಸಿ ರಂಗ ಕಲಾವಿದರು ಪಾಲ್ಗೊಂಡಿದ್ದಾರೆ. ಶಿಬಿರಾರ್ಥಿಗಳು ಎರಡು ನಾಟಕಗಳನ್ನು ಸಿದ್ಧಪಡಿಸಿ ಪ್ರದರ್ಶಿಸಲಿದ್ದಾರೆ’ ಎಂದು ಹೇಳಿದರು.

ಬೆಂಗಳೂರಿನ ಬಾಬುಕೋಡಿ ಬಿ.ವಿ.ಕಾರಂತ ರಂಗ ಪ್ರತಿಷ್ಠಾನದ ವ್ಯವಸ್ಥಾಪಕ ಸದಸ್ಯ ಜಯರಾಂ ‍‍‍ಪಾಟೀಲ, ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್‌.ಮಲ್ಲಿಕಾರ್ಜುನಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.

ಅ.24ರ ವರೆಗೆ ‘ಪರ್ವ’ ಪ್ರದರ್ಶನ: ‘ನಾಟಕೋತ್ಸವದ ಅವಧಿಯಲ್ಲಿ ಸೆ.25 ರಂದು ‘ಪರ್ವ’ ನಾಟಕ ಪ್ರದರ್ಶನವೂ ಇರಲಿದೆ. ಆ ಬಳಿಕ ಅಕ್ಟೋಬರ್‌ನಲ್ಲಿ ಒಟ್ಟು ಆರು ಪ್ರದರ್ಶನಗಳು (ಅ.2,3, 9,10 ಮತ್ತು 23,24) ನಡೆಯಲಿವೆ. ಅನಂತರ ಪರ್ವ ತಂಡ ರಂಗಯಾತ್ರೆ ಕೈಗೊಳ್ಳಲಿದ್ದು, ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಳ್ಳಲಿದೆ. ಪ್ರವಾಸ ಮುಗಿದ ಬಳಿಕ ರಂಗಾಯಣದಲ್ಲಿ ಮತ್ತೆ ನಾಟಕ ಪ್ರದರ್ಶನ ನೀಡಲಿದೆ’ ಎಂದು ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT