ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆ; ಕಾಂಗ್ರೆಸ್‌ ಮುಖಂಡರ ಬಂಧನ

ಕೆ.ಆರ್.ನಗರದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ; ಶಿಷ್ಟಾಚಾರ ಉಲ್ಲಂಘಿಸಿಲ್ಲ
Last Updated 19 ಜೂನ್ 2019, 16:56 IST
ಅಕ್ಷರ ಗಾತ್ರ

ಕೆ.ಆರ್.ನಗರ: ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಆಹ್ವಾನಿಸಿಲ್ಲ ಎಂದು ದೂರಿ ಸಚಿವ ಸಾ.ರಾ.ಮಹೇಶ್ ಹಾಗೂ ಪುರಸಭೆ ಮುಖ್ಯಾಧಿಕಾರಿ ಶಿವಣ್ಣ ವಿರುದ್ಧ ಬುಧವಾರ ಪುರಸಭೆಯ ಕಾಂಗ್ರೆಸ್‌ ಸದಸ್ಯರು, ಮುಖಂಡರು ಪ್ರತಿಭಟನೆ ನಡೆಸುತ್ತಿದ್ದಂತೆ, ಪೊಲೀಸರು ಬಂಧಿಸಿದರು.

ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ತಹಶೀಲ್ದಾರ್ ಎಂ.ಮಂಜುಳಾ ಅಧ್ಯಕ್ಷತೆಯಲ್ಲಿ ಸಭೆ ಸೇರಿದ ಚುನಾಯಿತ ಪ್ರತಿನಿಧಿಗಳು, ಮುಖಂಡರು, ಸಂಸದೆ ಸುಮಲತಾ ಅಂಬರೀಷ್ ಮತ್ತು ತಮ್ಮನ್ನು ಆಹ್ವಾನಿಸದೇ ಇರುವುದರಿಂದ ಕಾರ್ಯಕ್ರಮ ಮುಂದೂಡಬೇಕು ಎಂದು ಪಟ್ಟು ಹಿಡಿದರು.

ಇದಕ್ಕೆ ಒಪ್ಪದ ತಹಶೀಲ್ದಾರ್ ಎಂ.ಮಂಜುಳಾ ಕಾರ್ಯಕ್ರಮಕ್ಕೆ ಯಾವುದೇ ಆಹ್ವಾನ ಪತ್ರಿಕೆ ಮುದ್ರಿಸಿಲ್ಲ. ಸಭಾ ಕಾರ್ಯಕ್ರಮ ಇರುವುದಿಲ್ಲ. ಮುಖ್ಯಾಧಿಕಾರಿ ಶಿವಣ್ಣ ಎಲ್ಲರನ್ನೂ ದೂರವಾಣಿ ಮೂಲಕ ಆಹ್ವಾನಿಸಿದ್ದಾರೆ. ಪ್ರತಿಭಟನೆ ಕೈಬಿಟ್ಟು ಕಾರ್ಯಕ್ರಮ ನಡೆಯಲು ಅನುಕೂಲ ಮಾಡಿಕೊಡುವಂತೆ ಕೋರಿದರು.

ಇದಕ್ಕೆ ಒಪ್ಪದ ಪ್ರತಿಭಟನಾಕಾರರರು ಪುರಸಭೆ ಮುಂಭಾಗ ಶಾಮಿಯಾನ ಹಾಕಿ ಪ್ರತಿಭಟಿಸಿದರು. ಸಚಿವ ಸಾ.ರಾ.ಮಹೇಶ್ ಮತ್ತು ಪುರಸಭೆ ಮುಖ್ಯಾಧಿಕಾರಿ ಶಿವಣ್ಣ ವಿರುದ್ಧ ಹರಿಹಾಯ್ದ ಧಿಕ್ಕಾರ ಕೂಗಿದರು. ಎರಡು ಗಂಟೆ ಪ್ರತಿಭಟನೆ ಮಾಡಿದರು.

ಪ್ರತಿಭಟನಾಕಾರರಿಂದ ಕಾರ್ಯಕ್ರಮಕ್ಕೆ ಅಡ್ಡಿಯಾಗಬಹುದು ಎಂಬ ಮುನ್ನೆಚ್ಚರಿಕೆಯಾಗಿ ಪೊಲೀಸರು ಧರಣಿ ನಿರತರನ್ನು ಬಂಧಿಸಿದರು.

ಸಚಿವ ಸಾ.ರಾ.ಮಹೇಶ್ ಇಂದಿರಾ ಕ್ಯಾಂಟೀನ್ ಉದ್ಘಾಟಸಿದ ಬಳಿಕ ಮಾತನಾಡಿ ‘ಚುನಾವಣಾ ನೀತಿ ಸಂಹಿತೆಯಿಂದ ಇಂದಿರಾ ಕ್ಯಾಂಟೀನ್ ಉದ್ಘಾಟನೆಯಾಗದೆ ಹಲವು ಬಾರಿ ಮುಂದೂಡಲ್ಪಟ್ಟಿತ್ತು. ಬಡವರ ಅನುಕೂಲಕ್ಕಾಗಿ ತಕ್ಷಣ ಉದ್ಘಾಟನೆಯಾಗಬೇಕು ಎನ್ನುವ ಉದ್ದೇಶದಿಂದ ಯಾವುದೇ ಆಹ್ವಾನ ಪತ್ರಿಕೆ ಮಾಡಿಸದೆ, ಶಿಷ್ಟಾಚಾರ ಉಲ್ಲಂಘನೆಯಾಗದಂತೆ, ಎಲ್ಲರನ್ನೂ ದೂರವಾಣಿ ಮೂಲಕವೇ ಮುಖ್ಯಾಧಿಕಾರಿ ಶಿವಣ್ಣ ಆಹ್ವಾನಿಸಿದ್ದಾರೆ’ ಎಂದು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT