ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಮಾನತೆಗೆ ವಚನಗಳಲ್ಲಿ ಪರಿಹಾರ: ಪ್ರೊ.ಎನ್.ಎಂ.ತಳವಾರ

ಬಸವ ಜಯಂತಿ ಕಾರ್ಯಕ್ರಮ
Last Updated 6 ಮೇ 2019, 9:28 IST
ಅಕ್ಷರ ಗಾತ್ರ

ಮೈಸೂರು: ಪ್ರಸ್ತುತ ಸಮಾಜದಲ್ಲಿ ಜಾತಿ ಅಸಮಾನತೆ ತಾಂಡವವಾಡುತ್ತಿದ್ದು ಬಸವಣ್ಣನವರ ವಚನಗಳ ಅಳವಡಿಕೆಯಿಂದ ಪರಿಹಾರ ಕಂಡುಕೊಳ್ಳುವ ಸಾಧ್ಯತೆಯಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎನ್.ಎಂ.ತಳವಾರ ಅಭಿಪ್ರಾಯಪಟ್ಟರು.

ಹೊಸಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ‘ಸಮಕಾಲೀನ ಸಂದರ್ಭದ ಹಿನ್ನೆಲೆಯಲ್ಲಿ ಬಸವಣ್ಣನವರ ವಚನಗಳ ಅಧ್ಯಯನದ ಅಗತ್ಯತೆ’ ಕುರಿತು ಅವರು ಉಪನ್ಯಾಸ ನೀಡಿದರು.

ಬುದ್ಧ ಪ್ರಥಮವಾಗಿ ನಮ್ಮ ದೇಶದಲ್ಲಿ ಸಮಾನತೆಯ ಆಶಯವುಳ್ಳ ಸಮಾಜ ಸ್ಥಾಪನೆಗೆ ಮುಂದಾಗಿದ್ದರು. ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಸಮಾನತೆ ಇರಬೇಕು ಎಂಬುದು ಅವರ ಆಶಯವಾಗಿತ್ತು. ಆದರೆ, ಬುದ್ಧನ ಮರಣಾನಂತರ ಮತ್ತೆ ಅಸಮಾನತೆ ಜಾಗೃತವಾಯಿತು. 12ನೇ ಶತಮಾನದಲ್ಲಿ ಬಸವಣ್ಣನವರು ಸಾಮಾಜಿಕ ಜಡತ್ವಕ್ಕೆ ಚುರುಕು ಮುಟ್ಟಿಸಿ ಸಾಮಾಜಿಕ ಕ್ರಾಂತಿಯನ್ನು ಉಂಟುಮಾಡಿದರು ಎಂದು ಅವರು ವಿಶ್ಲೇಷಿಸಿದರು.

‘ಆದರೆ, ಬಸವಣ್ಣನವರ ನಂತರದ ದಿನಗಳಲ್ಲಿ ಸಾಮಾಜಿಕ ವ್ಯವಸ್ಥೆ ಮತ್ತೆ ಜಡತ್ವದ ಕಡೆಗೆ ವಾಲಲು ಆರಂಭಿಸಿದೆ. 21ನೇ ಶತಮಾನದಲ್ಲಿ ಅವಕಾಶಗಳು ವಿಪುಲವಾಗಿಯೇ ಇದ್ದರೂ, ಜಾತಿ ನಮ್ಮಲ್ಲಿ ಬಿರುಕುಗಳನ್ನು ಮೂಡಿಸಿದೆ. ಸಮಾಜ ಮತ್ತೆ ಅಸಮಾನತೆಯಿಂದ ತುಂಬಿದೆ. ಇದಕ್ಕೆ ಪರಿಹಾರ ಬಸವಣ್ಣ ಸೇರಿದಂತೆ ಶರಣರ ವಚನಗಳಲ್ಲಿ ಇದೆ. ಇದನ್ನು ನಮ್ಮ ಸಮಾಜವು ಆದ್ಯತೆಯಾಗಿ ಸ್ವೀಕರಿಸಿ ಸರಿದಿಕ್ಕಿನತ್ತ ಮುಂದೆ ಸಾಗಬೇಕು’ ಎಂದು ಹೇಳಿದರು.

‘ಸಮಾನತೆ ಸ್ಥಾಪನೆಯ ಆಶಯ ಜನರಿಗೆ ಅರ್ಥ ಮಾಡಿಸುವುದು ಸವಾಲಿನ ಕೆಲಸವೇನಲ್ಲ. ಏಕೆಂದರೆ, ಈಗಾಗಲೇ ನಮ್ಮ ಬಳಿ ಸಾಕಷ್ಟು ಸಂಪನ್ಮೂಲಗಳಿವೆ. ಸಮಾನತೆಯನ್ನು ಸಾರುವ ಸಾಹಿತ್ಯವಿದೆ. ಅವನ್ನು ಬಳಸಿಕೊಳ್ಳಬೇಕು. ದುರಂತದ ಸಂಗತಿಯೆಂದರೆ ನಮ್ಮ ಸಮಾಜ ಇಂದು ಓದಿಗೆ ವಿಮುಖವಾಗಿದೆ. ಅಧ್ಯಯನ ಪ್ರವೃತ್ತಿ ಕ್ಷೀಣಿಸುತ್ತಿದೆ. ಓದುವ, ಕೇಳುವ, ವೀಕ್ಷಿಸುವ ಪ್ರವೃತ್ತಿ ಅಡ್ಡದಾರಿಯಲ್ಲಿ ಸಾಗಿದೆ’ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಮಹಿಳೆಗೆ ಹಿನ್ನಡೆ: ಮಹಿಳೆಗೆ ಹಿಂದೆಯೂ ಸಾಮಾಜಿಕ ಹಿನ್ನಡೆಯಾಗಿತ್ತು. ಈಗಲೂ ಹಿನ್ನಡೆಯಾಗುತ್ತಿದೆ. ಶರಣರ ಕಾಲದಲ್ಲಿ ಮಹಿಳೆಗೆ ಬೆಂಬಲ ನೀಡಲಾಗಿತ್ತು. ಸಮಾನತೆಯ ಪರಿಚಯ ಮಾಡಿಸಿ ಓದು, ಬರಹ, ಶಿಕ್ಷಣ, ಸಂವಾದಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಆದರೆ, ಈಗ ಮಹಿಳೆ ಸಮಾನತೆಯಿಂದ ಅಮಾನವೀಯತೆಯ ಕಡೆಗೆ ಹೋಗುವ ಸ್ಥಿತಿ ಎದುರಾಗುವ ಅಪಾಯ ಬಂದೊದಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಜೈನಶಾಸ್ತ್ರ ಮತ್ತು ಪ್ರಾಕೃತ ವಿದ್ವಾಂಸ ಪ್ರೊ.ಶುಭಚಂದ್ರ ಮಾತನಾಡಿ, ವಚನಗಳು ಸಾರ್ವಕಾಲಿಕ ಸತ್ಯಗಳನ್ನು ಎತ್ತಿಹಿಡಿದಿವೆ. ಶರಣರು ಇದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ವಚನಗಳ ಅಧ್ಯಯನದಿಂದ ಎಲ್ಲೆಡೆ ಸಾಮರಸ್ಯ ಮೂಡುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಎಲ್‌.ಶಿವಲಿಂಗಪ್ಪ ಅವರು ಸಂಗ್ರಹಿಸಿರುವ ಶರಣರ ಹಾಗೂ ಕವಿಗಳ ದೃಷ್ಟಿಯಲ್ಲಿ ಬಸವಣ್ಣ ಮತ್ತು ವಚನಾಧಾರಿತ ಚಿತ್ರಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಹೊಸಮಠದ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕ ಡಾ.ಎಸ್.ಶಿವರಾಜಪ್ಪ ಅಧ್ಯಕ್ಷತೆವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT