ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹುಣಸೂರು ದೇವರಾಜ ಅರಸು ಜಿಲ್ಲೆಯನ್ನಾಗಿಸಲು ದೀಕ್ಷೆ’

ದೇವರಾಜ ಅರಸು 105ನೇ ಜನ್ಮದಿನಾಚರಣೆ: ಎಚ್.ವಿಶ್ವನಾಥ್ ಅಭಿಮತ
Last Updated 21 ಆಗಸ್ಟ್ 2020, 9:09 IST
ಅಕ್ಷರ ಗಾತ್ರ

ಹುಣಸೂರು: ‘ಹುಣಸೂರನ್ನು ದೇವರಾಜ ಅರಸು ಜಿಲ್ಲೆಯನ್ನಾಗಿಸುವ ದಿಕ್ಕಿನಲ್ಲಿ ಗಾಂಧಿ ಜಯಂತಿ ಒಳಗಾಗಿ ಒಂದು ಸ್ವರೂಪ ನೀಡಿ ಸರ್ಕಾರಕ್ಕೆ ಮನವಿ ಪತ್ರ ನೀಡಿ ಚಾಲನೆ ನೀಡಲಿದ್ದೇವೆ’ ಎಂದು ವಿಧಾನಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಹೇಳಿದರು.

ನಗರದಲ್ಲಿ ದೇವರಾಜ ಅರಸು ಪುತ್ಥಳಿಗೆ ಶಾಸಕದ್ವಯರು ಮಾಲಾರ್ಪಣೆ ಮಾಡಿ ಜಯಂತ್ಯುತ್ಸವಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದರು.

‘ಮೈಸೂರು ಜಿಲ್ಲೆ ಭೌಗೋಳಿಕವಾಗಿ ಅತಿ ಹೆಚ್ಚು ಪ್ರದೇಶ ಹೊಂದಿದ್ದು, ಆಡಳಿತ ಸುಧಾರಣೆಗೆ ಸಮಸ್ಯೆ ಆಗಿದೆ. ಹೀಗಾಗಿ ಹುಣಸೂರು ಉಪವಿಭಾಗವನ್ನು ಜಿಲ್ಲಾ ಕೇಂದ್ರವನ್ನಾಗಿಸಿ ಅಭಿವೃದ್ಧಿಗೆ ಹೊಸ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಲು ಈ ಹೋರಾಟ ನಡೆದಿದೆ’ ಎಂದರು.

‘ದೇವರಾಜ ಅರಸು ಜಿಲ್ಲೆ ಸ್ಥಾಪನೆಗೆ ಉಪವಿಭಾಗದ ಶಾಸಕರು ಮತ್ತು ಸ್ಥಳೀಯ ಜನಪ್ರತಿನಿಧಿ ಒಳಗೊಂಡಂತೆ ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಸಮಿತಿ ರಚಿಸಿ ಸಮಗ್ರ ಚರ್ಚೆಯೊಂದಿಗೆ ಒಮ್ಮತದಿಂದ ಸರ್ಕಾರದ ಗಮನ ಸೆಳೆಯುವ ಹೆಜ್ಜೆ ಹಾಕಲಾಗುವುದು’ ಎಂದು ಹೇಳಿದರು.

‘ಅರಸರ ನೆರಳಲ್ಲಿ ಬೆಳೆದ ಕುಡಿಗಳು ಈಗಲೂ ಸಕ್ರಿಯವಾಗಿ ರಾಜಕೀಯದಲ್ಲಿದ್ದು, ಅವರೆಲ್ಲರ ಸಹಕಾರವನ್ನು ಪಕ್ಷಾತೀತವಾಗಿ ಕೋರಿ ಅರಸರ ಹುಟ್ಟೂರನ್ನು ಜಿಲ್ಲಾ ಕೇಂದ್ರವನ್ನಾಗಿಸಿ ಶಾಶ್ವತವಾಗಿ ಉಳಿಸಲು ಬಯಸುವೆ’ ಎಂದರು.

ಶಾಸಕ ಮಂಜುನಾಥ್ ಮಾತನಾಡಿ, ‘ಜಿಲ್ಲಾಕೇಂದ್ರ ವಿಷಯಕ್ಕೆ ಕ್ಷೇತ್ರದ ಶಾಸಕನಾಗಿ ಸಹಕಾರ ನೀಡಲಿದ್ದು, ಹುಣಸೂರು ಜಿಲ್ಲೆ ಆದಲ್ಲಿ ಅಧಿಕಾರ ವಿಕೇಂದ್ರೀಕರಣದಿಂದ ಅಭಿವೃದ್ಧಿ ಕಾಣಬಹುದು’ ಹೇಳಿದರು.

‘ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಜನ್ಮದಿನವೂ ಇಂದೇ ಆಗಿದ್ದು, ರಾಷ್ಟ್ರದಲ್ಲಿ ಮೂರು ಹಂತದ ಆಡಳಿತ ಜಾರಿಗೊಳಿಸಿ ಅಧಿಕಾರ ವಿಕೇಂದ್ರೀಕರಣಗೊಳಿಸಿದ ವ್ಯಕ್ತಿಯಾಗಿದ್ದರು’ ಎಂದರು.

ಕಾರ್ಯಕ್ರಮದಲ್ಲಿ ಜಿ.ಪಂ. ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ತಾ.ಪಂ. ಅಧ್ಯಕ್ಷೆ ಪದ್ಮಮ್ಮ, ನಗರಸಭೆ ಸದಸ್ಯರಾದ ರಮೇಶ್‌, ಹರೀಶ್‌, ವಿವೇಕ್, ಮಂಜು, ಸಿ.ಟಿ.ರಾಜಣ್ಣ, ಗಣೇಶ್ ಕುಮಾರಸ್ವಾಮಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಹಳ್ಳದಕೊಪ್ಪಲು ನಾಗಣ್ಣ, ಬಿಳಿಕೆರೆ ರಾಜು ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT