ಬುಧವಾರ, ಆಗಸ್ಟ್ 17, 2022
23 °C
ನರೇಗಾ ಮೂಲಕ ಅಂತರ್ಜಲ ಮರುಪೂರಣ ಘಟಕ ನಿರ್ಮಾಣ: ಜಿಲ್ಲೆಯಲ್ಲಿ 16 ಸಾವಿರ ಘಟಕ ಗುರಿ

ನರೇಗಾ ಮೂಲಕ ಆರ್ಟ್ ಆಫ್ ಲಿವಿಂಗ್ ನೀರಿನ ಖಾತ್ರಿ

ಎಚ್‌.ಎಸ್.ಸಚ್ಚಿತ್ Updated:

ಅಕ್ಷರ ಗಾತ್ರ : | |

Prajavani

ಹುಣಸೂರು: ಅಂತರ್ಜಲವೃದ್ಧಿಗೆ ಹಲವು ಯೋಜನೆ ಜಾರಿಯಲ್ಲಿದ್ದರೂ ಬೇಸಿಗೆಯಲ್ಲಿ ನೀರಿನ ಬವಣೆ ಎದುರಿಸಬೇಕಾದ ಅನಿವಾರ್ಯತೆ ಇದೆ. ಇದನ್ನು ಮನಗಂಡ ಆರ್ಟ್ ಆಫ್ ಲಿವಿಂಗ್ ಆಧ್ಯಾತ್ಮಿಕ ಸಂಸ್ಥೆ ನರೇಗಾ ಯೋಜನೆ ಮೂಲಕ ಜಲಮರುಪೂರಣ ಘಟಕ ನಿರ್ಮಾಣಕ್ಕೆ ಮುಂದಾಗಿದೆ.

ಅಂತರ್ಜಲ ವೃದ್ಧಿಗೆ ನರೇಗಾ ಯೋಜನೆ ಬಳಸಿ ಜಿಲ್ಲೆಯಾದ್ಯಂತ ಸರ್ಕಾರಿ ಭೂಮಿಯಲ್ಲಿ 16 ಸಾವಿರ ಇಂಜೆಕ್ಷನ್ ವೆಲ್ (ಜಲಮರುಪೂರಣ) ಘಟಕ ನಿರ್ಮಿಸಲು ಸಂಸ್ಥೆ ಮುಂದೆ ಬಂದಿದೆ. ಪ್ರತಿ ತಾಲ್ಲೂಕಿನಲ್ಲಿ ತಲಾ 5 ಸಾವಿರ ಘಟಕ ನಿರ್ಮಿಸುವ ಉದ್ದೇಶ ಹೊಂದಿದೆ.

ಹುಣಸೂರು ತಾಲ್ಲೂಕಿನಲ್ಲಿ ಪ್ರಥಮ ಹಂತದಲ್ಲಿ 3 ಸಾವಿರ ಘಟಕ ನಿರ್ಮಾಣಕ್ಕೆ ನೀಲ ನಕಾಶೆ ಸಿದ್ಧಗೊಳಿಸಿ ಈಗಾಗಲೇ ಮೂರು ಪಂಚಾಯಿತಿಗಳಲ್ಲಿ ಕಾಮಗಾರಿ ಆರಂಭಿಸಿ 15 ಘಟಕ ನಿರ್ಮಾಣ ಹಂತದಲ್ಲಿದೆ ಎಂದು ಯೋಜನೆಯ ಸಮನ್ವಯ ಅಧಿಕಾರಿ ಶಿವಕುಮಾರ್ ಮಾಹಿತಿ ‘ಪ್ರಜಾವಾಣಿ’ಗೆ ನೀಡಿದರು.

‘ಜಲಮರುಪೂರಣ ಘಟಕ ಸರ್ಕಾರಿ ಭೂಮಿಯಲ್ಲಿ ತಗ್ಗು ಪ್ರದೇಶದಲ್ಲಿ ಜಾರಿಗೊಳಿಸುತ್ತಿದ್ದು, 6 ಅಡಿ ಅಗಲ 20 ಅಡಿ ಆಳ ತೆಗೆದು ಪ್ರತಿ ಅಡಿಗೆ ಸಿಮೆಂಟ್ ರಿಂಗ್ ಜೋಡಿಸಲಾಗುವುದು. ಬಳಿಕ ಕಲ್ಲಿನ ಚೂರು ತುಂಬಿಸಿ ಭರ್ತಿ
ಮಾಡಿ ನೀರು ಇಂಗಿಸಲಾಗುವುದು. ಗುಂಡಿಯ ಮೇಲ್ಭಾಗದಲ್ಲಿ ಚೆಕ್ ಡ್ಯಾಂ ನಿರ್ಮಿಸಿ ಮಳೆ ನೀರು ಹರಿಸಲಾಗುವುದು. ಪ್ರತಿ ಘಟಕವೂ ಗರಿಷ್ಠ 1 ಕ್ಯೂಸೆಕ್ ನೀರು ಭೂಮಿಗೆ ಇಂಗಿಸುವುದರಿಂದ ನೀರಿನ ಸೆಲೆ (ಜಲಕಣ್ಣು) ಮೂಲಕ ಭೂಮಿಯಲ್ಲಿ ನೀರಿನ ಹರಿವು ಹೆಚ್ಚಲಿದೆ’ ಎಂದು ಅವರು ವಿವರಿಸಿದರು.

ನರೇಗಾ ಉದ್ಯೋಗ: ಜಲಮರುಪೂರಣ ಘಟಕ ನಿರ್ಮಿಸಲು ಕನಿಷ್ಠ 20 ಕೂಲಿ ಕಾರ್ಮಿಕರ ಬಳಕೆ ಆಗಲಿದೆ. ಒಂದು ಘಟಕ ಪೂರ್ಣಗೊಳ್ಳಲು ಕನಿಷ್ಠ 20 ರಿಂದ 25 ದಿನಗಳು ಬೇಕಾಗಿದ್ದು, ಜಾಬ್ ಕಾರ್ಡ್ ಹೊಂದಿರುವ ಕಾರ್ಮಿಕರಿಗೆ ಈ ಯೋಜನೆ ವರದಾನವಾಗಿದೆ. ಒಂದು ಘಟಕ ನಿರ್ಮಿಸಲು ₹ 1 ಲಕ್ಷ ವೆಚ್ಚವಾಗಲಿದೆ. ಇದರಲ್ಲಿ ಶೇ 60ರಷ್ಟು ಕಚ್ಚಾ ಪದಾರ್ಥಕ್ಕೆ ಮತ್ತು ಶೇ 40ರಷ್ಟು ಕೂಲಿಗೆ ಬಳಿಕೆ ಆಗಲಿದೆ ಎಂದು ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಗಿರೀಶ್ ಮಾಹಿತಿ ನೀಡಿದರು.

ಜಿಲ್ಲಾ ಯೋಜನಾಧಿಕಾರಿ ಯಶ್ವಂತ್ ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ 16 ಸಾವಿರ ಜಲಮರುಪೂರಣ ಘಟಕ ನಿರ್ಮಿಸಲಾಗುವುದು. ಪ್ರಥಮ ಹಂತದಲ್ಲಿ ಪ್ರತಿ ತಾಲ್ಲೂಕಿಗೆ 3 ಸಾವಿರ ಗುರಿ ನೀಡಿದ್ದು, ಜಿಲ್ಲೆಯಲ್ಲಿ ಹುಣಸೂರು ಉತ್ತಮ ಪ್ರಗತಿ ಸಾಧಿಸಿದೆ ಎಂದರು.

ಈ ಹಿಂದೆ ಪ್ರಾಕೃತಿಕವಾಗಿ ಮಳೆ ನೀರು ಇಂಗಲು ಸ್ಥಳವಿತ್ತು, ಇತ್ತೀಚೆಗೆ ಒತ್ತುವರಿ ಹಾವಳಿಗೆ ಕೆರೆ, ತಗ್ಗು ಪ್ರದೇಶ ಎಲ್ಲವೂ ಕಣ್ಮರೆಯಾಗಿದೆ. ಮಳೆ ನೀರು ಭೂಮಿಯ ಒಡಲು ಸೇರದೆ ಹರಿದು ಪೋಲಾಗುತ್ತಿದೆ.

ಜಲಮರುಪೂರಣ ಘಟಕ ನಿರ್ಮಾಣದಿಂದ ಗ್ರಾಮೀಣ ಭಾಗದಲ್ಲಿ ಕೊಳವೆ ಪುನರುಜ್ಜೀವನಗೊಂಡು ಕುಡಿಯುವ ನೀರಿನ ಸಮಸ್ಯೆ ನೀಗುವ ಆಶಾಭಾವನೆ ಇದೆ. ಅತಿ ಹೆಚ್ಚು ಘಟಕ ನಿರ್ಮಿಸುವ ಪಂಚಾಯಿತಿಗೆ ₹ 20 ಸಾವಿರ ಬಹುಮಾನ ನೀಡಲಾಗುವುದು ಎಂದು ಶಾಸಕ ಮಂಜುನಾಥ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು