ಮಂಗಳವಾರ, ಏಪ್ರಿಲ್ 20, 2021
25 °C
ರೀಡ್‌ ಅಂಡ್ ಟೇಲರ್‌ನಲ್ಲಿ ಕೆಲಸ ಮಾಡುತ್ತಿದ್ದವರಿಂದ ಉಪವಾಸ ಸತ್ಯಾಗ್ರಹದ ಎಚ್ಚರಿಕೆ

ಬೀದಿಗೆ ಬಿದ್ದ ಕಾರ್ಮಿಕರ ಮರು ನೇಮಕಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ರೀಡ್ ಅಂಡ್ ಟೇಲರ್ ಕಾರ್ಖಾನೆಯಲ್ಲಿ ಕೆಲಸದಿಂದ ತೆಗೆದುಹಾಕಿದ ಕಾರ್ಮಿಕರಿಗೆ ಮರಳಿ ಉದ್ಯೋಗ ನೀಡಬೇಕು ಎಂದು ರೀಡ್ ಅಂಡ್ ಟೇಲರ್ ಎಂಪ್ಲಾಯೀಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಎಂ.ಕೆ.ಶಶಿಕುಮಾರ್ ಒತ್ತಾಯಿಸಿ‌ದರು.

ಕಾರ್ಖಾನೆಯ ಆಡಳಿತ ಮಂಡಳಿ ವಿಸರ್ಜನೆಯಾಗಿದೆ ಎಂದು ಹೇಳಿ ಹೊಸ ಹೆಸರನ್ನಿಟ್ಟುಕೊಂಡು ಹಿಂದಿನ ಆಡಳಿತ ಮಂಡಳಿಯೇ ಕಾರ್ಖಾನೆಯನ್ನು ಪುನರ್ ಆರಂಭಿಸಿದೆ. ಹಿಂದಿನ ಕಾಯಂ ನೌಕರರನ್ನು ಪರಿಗಣಿಸದೇ ಗುತ್ತಿಗೆ ಆಧಾರದ ಮೇಲೆ ಕಡಿಮೆ ಕೆಲಸಕ್ಕೆ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗಿದೆ ಎಂದು ಅವರು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಕಳೆದ 82 ದಿನಗಳಿಂದ ಕಾರ್ಮಿಕರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಯಾರೊಬ್ಬರೂ ಸ್ಪಂದಿಸುತ್ತಿಲ್ಲ. ಕಾರ್ಮಿಕ ಇಲಾಖೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಉಸ್ತುವಾರಿ ಸಚಿವರು, ಕಾರ್ಮಿಕರ ಸಚಿವರು, ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ. ಬೀದಿಪಾಲಾಗಿರುವ ಕಾರ್ಮಿಕರಿಗೆ ಸದ್ಯ ಉಪವಾಸ ಸತ್ಯಾಗ್ರಹ ಒಂದೇ ಉಳಿದಿರುವ ದಾರಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.

22 ವರ್ಷಗಳಿಂದ ನಿರಂತರವಾಗಿ ದುಡಿದ ಕಾರ್ಮಿಕರಿಗೆ ₹ 80 ಸಾವಿರ ನೀಡಿ ನೀವು ಕೆಲಸಕ್ಕೆ ಬರುವುದು ಬೇಡ ಎಂದರೆ ಕಾರ್ಮಿಕರು ಎಲ್ಲಿಗೆ ಹೋಗಬೇಕು ಎಂದು ಅವರು ಪ್ರಶ್ನಿಸಿದರು.

ಯುವತಿ ಸಾವು

ಕೆಲಸ ನೀಡುವಂತೆ ಬಗೆಬಗೆಯಾಗಿ ಕಾರ್ಖಾನೆಯಲ್ಲಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸಲಿಲ್ಲ. ಇದರಿಂದ ಬೇಸರದಿಂದ ಮನೆಗೆ ಹೋದ ಯುವತಿಯೊಬ್ಬರು ಮೃತಪಟ್ಟಿದ್ದಾರೆ. ಒಂದು ವೇಳೆ ಇವರಿಗೆ ಕೆಲಸ ನೀಡಿದ್ದರೆ ಇವರ ಸಾವು ಸಂಭವಿಸುತ್ತಿರಲಿಲ್ಲ. ಬೀದಿಗೆ ಬಿದ್ದಿರುವ ಕಾರ್ಮಿಕರು ಸಾಯುವ ಮುನ್ನ ಕೆಲಸ ನೀಡಬೇಕು ಎಂದು ಮನವಿ ಮಾಡಿದರು.

ಹೊರಗುತ್ತಿಗೆ ಪದ್ಧತಿಯನ್ನು ಕೈಬಿಟ್ಟು ನಮ್ಮನ್ನೇ ಕೆಲಸಕ್ಕೆ ತೆಗೆದುಕೊಳ್ಳಲು ಅವಕಾಶ ಇದೆ. ಆಡಳಿತ ಮಂಡಳಿ ನಮ್ಮ ಮನವಿಗೆ ಓಗೊಟ್ಟು ಆದಷ್ಟು ಬೇಗ ಕೆಲಸ ಕೊಡಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು