ಮೈಸೂರು: ‘ನೀರಿನ ಅಕ್ರಮ ಸಂಪರ್ಕ ಹಾಗೂ ಸೋರಿಕೆ ತಪ್ಪಿಸಲು ಪಾಲಿಕೆ ವ್ಯಾಪ್ತಿಯ ಪ್ರತಿ ಮನೆಯಲ್ಲೂ ಕಡ್ಡಾಯವಾಗಿ ಮೀಟರ್ ಅಳವಡಿಸಲು ಸೂಚನೆ ನೀಡಲಾಗಿದೆ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಜೊತೆಯಲ್ಲಿ ಶುಕ್ರವಾರ ಪಾಲಿಕೆ ಕಾಮಗಾರಿ ಹಾಗೂ ಕುಡಿಯುವ ನೀರಿನ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು.
‘ನೀರಿನ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಬೆಂಗಳೂರಿನಲ್ಲಿ ಮೀಟರ್ ಅಳವಡಿಸಿರುವ ವಿಧಾನದಲ್ಲೇ ಇಲ್ಲೂ ಜಾರಿಯಾಗಬೇಕು. ಕೆಲವೆಡೆ ನೀರಿನ ಸಂಪರ್ಕವಿದ್ದರೂ ಮೀಟರ್ ಇಲ್ಲ. ಸದ್ಯ ಶೇ 60ರಷ್ಟು ಮನೆಗಳಿಗಷ್ಟೇ ಮೀಟರ್ ಅಳವಡಿಸಿದ್ದು, ಶೇ 40ರಷ್ಟು ಬಾಕಿ ಇರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಮೀಟರ್ ಅಳವಡಿಸಿದರೆ ನೀರು ಎಷ್ಟು ಬಳಕೆಯಾಗುತ್ತಿದೆ ಎಂಬ ಮಾಹಿತಿ ಸಿಗುತ್ತದೆ. ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳಲ್ಲೂ ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು’ ಎಂದರು.
‘ನಗರಕ್ಕೆ ಕಾವೇರಿ ಹಾಗೂ ಕಬಿನಿ ನದಿಯಿಂದ 305 ಎಂಎಲ್‌ಡಿ ನೀರು ಪೂರೈಸಲಾಗುತ್ತಿದೆ. ಅದರಲ್ಲಿ ಹೆಚ್ಚಿನ ಸೋರಿಕೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಪೂರ್ಣ ಪ್ರಮಾಣದಲ್ಲಿ ಕುಡಿಯುವ ನೀರು ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಇದೇ ವಿಚಾರವನ್ನು ಶಾಸಕರು ಕೂಡ ಪ್ರಸ್ತಾಪಿಸಿದ್ದಾರೆ. ಹೀಗಾಗಿ, ಎಲ್ಲಿ ಸೋರಿಕೆ ಉಂಟಾಗುತ್ತಿದೆ? ಎಷ್ಟು ನೀರು ಲಭ್ಯವಾಗುತ್ತಿದೆ ಎಂಬುದರ ಬಗ್ಗೆ ಸಮಗ್ರ ವರದಿ ನೀಡಲು ಆಯುಕ್ತರಿಗೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.
ಕಬಿನಿ ನೀರು–ಪ್ರಸ್ತಾವ ಸಲ್ಲಿಸಲು ಸೂಚನೆ: ’ಕಬಿನಿಯಿಂದ ಹೆಚ್ಚುವರಿಯಾಗಿ 90 ಎಂಎಲ್‌ಡಿ ನೀರನ್ನು ಪಡೆಯುವ ಯೋಜನೆ ಕೈಗೆತ್ತಿಕೊಳ್ಳಲು ₹ 95 ಕೋಟಿ ಅನುದಾನಕ್ಕೆ ಪ್ರಸ್ತಾಪ ಸಲ್ಲಿಸುವಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ. ₹ 377 ಕೋಟಿ ವೆಚ್ಚದಲ್ಲಿ ಮುಡಾ ಬಡಾವಣೆಗಳಲ್ಲಿನ ಸಮಸ್ಯೆಗಳನ್ನು ಒಂದೇ ಹಂತದಲ್ಲಿ ಬಗೆಹರಿಸಿ (ಒನ್ ಟೈಮ್ ಸೆಟ್ಲ್‌ಮೆಂಟ್) ಪಾಲಿಕೆಗೆ ಹಸ್ತಾಂತರಿಸುವ ಕೆಲಸ ಕೈಗೆತ್ತಿಕೊಳ್ಳಲಾಗುವುದು’ ಎಂದರು.
ಎಚ್ಚರಿಕೆ ನೀಡಿರುವ ಪಾಲಿಕೆ: ವಾಣಿ ವಿಲಾಸ ನೀರು ಸರಬರಾಜು ಕೇಂದ್ರದ ಗಮನಕ್ಕೆ ತರದೆ, ಅಕ್ರಮವಾಗಿ ಸಂಪರ್ಕ ಪಡೆದವರ ಮನೆಗಳಿಗೆ ನೀರು ಪೂರೈಕೆಯನ್ನು ಕಡಿತಗೊಳಿಸುವ ಎಚ್ಚರಿಕೆಯನ್ನು ಪಾಲಿಕೆ ಈಗಾಗಲೇ ನೀಡಿದೆ. ಸಂಪರ್ಕ ಅಧಿಕೃತಗೊಳಿಸಿಕೊಳ್ಳಲು ಕಾಲಾವಕಾಶವನ್ನೂ ನೀಡಿದೆ. ಮೊದಲ ಹಂತದಲ್ಲಿ 6,250 ಮೀಟರ್ (ಒಂದಕ್ಕೆ ₹ 3,200) ಅಳವಡಿಸಿ, ನೀರಿನ ಕರದ ಜೊತೆ ಪ್ರತಿ ತಿಂಗಳು ಕಂತಿನಲ್ಲಿ ಮೀಟರ್ ವೆಚ್ಚ ಭರಿಸಿಕೊಳ್ಳಲು ನಿರ್ಧರಿಸಿದೆ.
ವಾರ್ಡ್ ಭೇಟಿ ಕಡ್ಡಾಯ: ವಲಯ ಆಯುಕ್ತರು ಕಡ್ಡಾಯವಾಗಿ ಬೆಳಿಗ್ಗೆ ವಾರ್ಡ್‌ಗಳಿಗೆ ಭೇಟಿ ನೀಡಿ ಸಾರ್ವಜ ನಿಕರ ಸಮಸ್ಯೆ ಆಲಿಸಬೇಕೆಂದು ಸಭೆಯಲ್ಲಿ ಸಚಿವರು ಸೂಚನೆ ನೀಡಿದರು.
‘ಮೈಸೂರು ಸ್ವಚ್ಛತೆಗೆ ಹೆಸರುವಾಸಿ. ಆ ಗೌರವ ಉಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಈ ವಿಚಾರಕ್ಕೆ ಹೆಚ್ಚು ಒತ್ತು ನೀಡಬೇಕು. ತಪ್ಪಿದಲ್ಲಿ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಪಾರಂಪರಿಕ ಸಮಿತಿ; ಸಂಖ್ಯೆ ಕಡಿತ: ‘ಪಾರಂಪರಿಕ ಸಮಿತಿಯಲ್ಲಿ 25ರಿಂದ 30 ಸದಸ್ಯರು ಇರುವುದು ಗಮನಕ್ಕೆ ಬಂದಿದೆ. ಹೀಗಾಗಿ, ಅದನ್ನು ಕಡಿಮೆ ಮಾಡಲು ಕ್ರಮ ವಹಿಸ
ಲಾಗುವುದು’ ಎಂದು ನಗರಾಭಿವೃದ್ಧಿ ಸಚಿವರು ಹೇಳಿದರು.
ಹಂಗಾಮಿ ಮೇಯರ್ ಅನ್ವರ್ ಬೇಗ್, ಶಾಸಕರಾದ ಎಲ್.ನಾಗೇಂದ್ರ, ತನ್ವೀರ್ ಸೇಠ್, ಜಿ.ಟಿ.ದೇವೇಗೌಡ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಪೌರಾಡಳಿತ ಇಲಾಖೆ ನಿರ್ದೇಶಕಿ ಬಿ.ಬಿ.ಕಾವೇರಿ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.