ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19: ಅಗತ್ಯ ಮುನ್ನೆಚ್ಚರಿಕೆ, ಆತಂಕ ಬೇಡ

ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮಾಹಿತಿ
Last Updated 11 ಮಾರ್ಚ್ 2020, 19:36 IST
ಅಕ್ಷರ ಗಾತ್ರ

ಮೈಸೂರು: ಕೋವಿಡ್‌–19 ಹರಡದಂತೆ ಜಿಲ್ಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ಯಾರೂ ಆತಂಕಪಡಬೇಕಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಸಿ.ಪರಿಮಳಾ ಶ್ಯಾಂ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಕೋವಿಡ್‌–19 ತಡೆಗಟ್ಟಲು ಇಲಾಖೆ ವತಿಯಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಕೊರೊನಾ ಸೋಂಕು ಶಂಕಿತರ ಪರೀಕ್ಷೆಗೆ ಕೆ.ಆರ್‌.ಆಸ್ಪತ್ರೆಯಲ್ಲಿ ಕೇಂದ್ರವನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ಸೋಂಕು ಶಂಕಿತ ಪ್ರಕರಣ ವರದಿಯಾಗಿಲ್ಲ. ಈ ಸೋಂಕಿನ ಪರೀಕ್ಷೆಗಾಗಿ ಯಾರೂ ಬಂದಿಲ್ಲ ಎಂದು ತಿಳಿಸಿದರು.

ಕೆಮ್ಮು, ಜ್ವರ, ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರು ಕೆ.ಆರ್‌.ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳಬಹುದು. ಉಚಿತವಾಗಿ ಪರೀಕ್ಷೆ ನಡೆಸಲಾಗುವುದು. ಶಂಕಿತ ಪ್ರಕರಣ ಪತ್ತೆಯಾದರೆ ಅವರ ಮೇಲೆ 14 ದಿನ ನಿಗಾ ವಹಿಸಲಾಗುವುದು. ಸೋಂಕು ತಪಾಸಣೆಗೆ ಖಾಸಗಿ ಆಸ್ಪತ್ರೆಗಳಿಗೆ ಅನುಮತಿ ಕೊಟ್ಟಿಲ್ಲ ಎಂದು ಹೇಳಿದರು.

ಪ್ರತ್ಯೇಕ ವಾರ್ಡ್‌: ಕೆ.ಎಆರ್.ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ ತೆರೆಯಲಾಗಿದ್ದು, ಐದು ಹಾಸಿಗೆಗಳನ್ನು ಹಾಕಲಾಗಿದೆ. ಅಗತ್ಯವಿದ್ದರೆ 12 ಹಾಸಿಗೆಗಳನ್ನು ಹಾಕುವಷ್ಟು ಸ್ಥಳಾವಕಾಶವಿದೆ ಎಂದರು.

ಕೋವಿಡ್‌–19 ಬರದಂತೆ ತಡೆಯಲು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮ ಮತ್ತು ಈ ಸೋಂಕಿನ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಇನ್ನಷ್ಟು ಅಭಿಯಾನ ನಡೆಸಬೇಕು. ಅಗತ್ಯವಿರುವಷ್ಟು ಮಾಸ್ಕ್‌ಗಳ ದಾಸ್ತಾನಿಗೆ ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಜ್ಯೋತಿ ಅವರು ಆರೋಗ್ಯಾಧಿಕಾರಿಗೆ ಸೂಚಿಸಿದರು.

‘ಜಿಲ್ಲೆಯಲ್ಲಿ ಮಾಸ್ಕ್‌ಗಳಿಗೆ ಬೇಡಿಕೆಯಿದೆ, ಆದರೆ ಪೂರೈಕೆ ಆಗುತ್ತಿಲ್ಲ. ಎನ್‌–95 ಮಾಸ್ಕ್‌ಗಳ ಕೊರತೆ ಇದೆ. ₹ 90ರ ಬೆಲೆಯ ಮಾಸ್ಕ್‌ ಈಗ ₹ 500 ಕೊಟ್ಟರೂ ಸಿಗುತ್ತಿಲ್ಲ. ಆದ್ದರಿಂದ ಶೀಘ್ರದಲ್ಲೇ ಮಾಸ್ಕ್‌ ಒದಗಿಸುವಂತೆ ಪೂರೈಕೆದಾರರಿಗೆ ಸೂಚಿಸಿದ್ದೇವೆ’ ಎಂದು ವೆಂಕಟೇಶ್‌ ತಿಳಿಸಿದರು.

ಕೊರೊನಾ ಸೋಂಕು ಕುರಿತು ಜಾಗೃತಿ ಮತ್ತು ಶಂಕಿತರ ತಪಾಸಣೆಗೆ ತಜ್ಞ ವೈದ್ಯರನ್ನು ಒಳಗೊಂಡ ಎಂಟು ತಂಡಗಳನ್ನು ರಚಿಸಲಾಗಿದೆ. ರೈಲು ನಿಲ್ದಾಣ, ಬಸ್ಸು ನಿಲ್ದಾಣ, ಚಾಮುಂಡಿಬೆಟ್ಟ ಒಳಗೊಂಡಂತೆ ವಿವಿಧ ಕಡೆಗಳಲ್ಲಿ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಕೇರಳದ ಗಡಿಭಾಗ ಬಾವಲಿ ಚೆಕ್‌ಪೋಸ್ಟ್‌ನಲ್ಲಿ ಎರಡು ತಂಡಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ಗಾಯಾಳುಗಳ ಚೇತರಿಕೆ: ನಂಜನಗೂಡಿನಲ್ಲಿ ಬೀದಿ ನಾಯಿ ಕಚ್ಚಿ ಗಾಯಗೊಂಡಿದ್ದವರು ಈಗ ಚೇತರಿಸಿಕೊಂಡಿದ್ದಾರೆ. ಎಲ್ಲರಿಗೂ ಇಲಾಖೆ ವತಿಯಿಂದ ಚಿಕಿತ್ಸೆ ನೀಡಲಾಗಿದೆ. ಬಾಲಕಿಯೊಬ್ಬಳಿಗೆ ಕೆ.ಆರ್‌. ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್‌ ಸರ್ಜರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಅಕ್ಷರ ದಾಸೋಹ ಸಾಮಗ್ರಿ ವ್ಯರ್ಥ ಮಾಡಬೇಡಿ: ಕೆಲವು ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಸಾಮಗ್ರಿಗಳು ವ್ಯರ್ಥವಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಅವಧಿ ಮೀರಿದ ಹಾಲಿನ ಪುಡಿ ಬಳಸಿದ ಬಗ್ಗೆಯೂ ವರದಿಯಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಕೆ.ಜ್ಯೋತಿ ಅವರು ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಹಾಂತೇಶಪ್ಪ ಮಾತನಾಡಿ, ಭತ್ತ ಖರೀದಿ ಕೇಂದ್ರದ ಮೂಲಕ ಭತ್ತದ ಮಾರಾಟಕ್ಕೆ ಜಿಲ್ಲೆಯಲ್ಲಿ 8,152 ರೈತರು ನೋಂದಣಿ ಮಾಡಿಕೊಂಡಿದ್ದು, 6,712 ಮಂದಿ ಈಗಾಗಲೇ ಮಾರಾಟ ಮಾಡಿದ್ದಾರೆ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ‘ಪೋಷಣ್ ಅಭಿಯಾನ’ ಅಂಗವಾಗಿ ಹೊರತಂದಿರುವ ಭಿತ್ತಿಪತ್ರವನ್ನು ಸಭೆಯ ಆರಂಭಕ್ಕೆ ಮುನ್ನ ಪರಿಮಳಾ ಶ್ಯಾಂ ಬಿಡುಗಡೆಗೊಳಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್‌, ಮುಖ್ಯ ಯೋಜನಾಧಿಕಾರಿ ಪದ್ಮಶೇಖರ್‌ ಪಾಂಡೆ, ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT