ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನ ಬದಲಾವಣೆಯನ್ನು ವಿದ್ಯಾರ್ಥಿಗಳು ಅರಿಯಬೇಕು: ವಿದ್ಯಾರ್ಥಿಗಳಿಗೆ ಸಲಹೆ

Last Updated 15 ಜುಲೈ 2022, 10:27 IST
ಅಕ್ಷರ ಗಾತ್ರ

ಮೈಸೂರು: ‘ತಂತ್ರಜ್ಞಾನ ಕ್ಷೇತ್ರದಲ್ಲಿ ನಿರಂತರವಾಗಿ ಬದಲಾವಣೆಗಳಾಗುತ್ತಿರುವುದು ಅನೇಕ ನೂತನ ಆವಿಷ್ಕಾರಗಳಿಗೆ ಕಾರಣವಾಗುತ್ತಿದೆ. ಈ ಬೆಳವಣಿಗೆಗಳನ್ನು ವಿದ್ಯಾರ್ಥಿಗಳು ಅರಿಯಬೇಕು’ ಎಂದು ರಷ್ಯಾದ ಸ್ಕಲ್ಕಾವೊ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಹಿರಿಯ ಸಂಶೋಧನಾ ವಿಜ್ಞಾನಿ ಡಾ.ರಾಘವೇಂದ್ರ ಹೇಳಿದರು.

ನಗರದ ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ‘ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಂಶೋಧನಾ ಪರ್ವ’ ವಿಷಯದ ಕುರಿತು ಗುರುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಸಿ ಅವರು ಮಾತನಾಡಿದರು.

‘ಕೈಗಾರಿಕೆ, ಶಿಕ್ಷಣ ಹೀಗೆ... ಹಲವು ಕ್ಷೇತ್ರಗಳಲ್ಲಿ ಕ್ಷಿಪ್ರಗತಿಯಲ್ಲಿ ಬದಲಾವಣೆಗಳಾಗುತ್ತಿವೆ. ಅದಕ್ಕೆ ಅನುಗುಣವಾಗಿ ಸಂಶೋಧನೆ ಆಧರಿತ ಜ್ಞಾನ ಹಾಗೂ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಇಂತಹ ಸಮ್ಮೇಳನಗಳು ಮತ್ತು ವಿಚಾರ ವಿನಿಮಯದ ಅವಶ್ಯಕತೆ ಇದೆ’ ಎಂದರು.

ಬೆಂಗಳೂರಿನ ರೆನಾಲಿಕ್ಸ್ ಹೆಲ್ತ್ ಸಿಸ್ಟಂ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಶಾಮ್ ವಾಸುದೇವ, ‘ವಿಜ್ಞಾನದ ತಳಹದಿಯ ಮೇಲೆ ತಂತ್ರಜ್ಞಾನವು ಬೆಳೆದು ಬಂದಿದೆ. ನಾಳಿನ ದಿನಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರಿತವಾಗಲಿದೆ. ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಅನಿವಾರ್ಯವಾಗಿದ್ದು, ಅದರಿಂದ ಸಮಾಜಕ್ಕೆ ಸಾಕಷ್ಟು ಪ್ರಯೋಜನವಾಗಿದೆ. ಜಗತ್ತಿನಾದ್ಯಂತ ನಡೆಯುವ ಅನೇಕ ವಿದ್ಯಮಾನಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಕ್ಷಣ ಮಾತ್ರದಲ್ಲಿ ತಿಳಿದುಕೊಳ್ಳಲು ತಂತ್ರಜ್ಞಾನದ ಬೆಳವಣಿಗೆ ಸಹಕಾರಿಯಾಗಿದೆ’ ಎಂದು ತಿಳಿಸಿದರು.

ಎಟಿಎಂಇ ಎಂಜಿನಿಯರಿಂಗ್‌ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎಲ್.ಅರುಣ್‌ಕುಮಾರ್, ‘ನೂತನ ಸಂಶೋಧನೆ ಮತ್ತು ಆವಿಷ್ಕಾರಗಳಿಗೆ ಹಕ್ಕುಸ್ವಾಮ್ಯ (ಪೇಟೆಂಟ್) ಪಡೆದುಕೊಳ್ಳುವಲ್ಲಿ ಇತರ ದೇಶಗಳಿಗೆ ಹೋಲಿಸಿದಲ್ಲಿ ಭಾರತ ಹಿಂದೆ ಇದೆ. ಇದಕ್ಕೆ ಹಲವು ಕಾರಣಗಳಿರಬಹುದು. ಈ ಹಿನ್ನೆಲೆಯಲ್ಲಿ ನಾವು ಗುಣಾತ್ಮಕ ಸಂಶೋಧನೆಗಳಿಗೆ ಹೆಚ್ಚಿನ ಒತ್ತು ನೀಡಬೇಕು’ ಎಂದು ಅಭಿಪ್ರಾಯಪಟ್ಟರು.

ಎಸ್‌ಜೆಸಿಇ ನಿವೃತ್ತ ಪ್ರಾಂಶುಪಾಲ ಡಾ.ಸೈಯ್ಯದ್ ಶಕೀಬ್ ಉರ್ ರೆಹಮಾನ್ ಮಾತನಾಡಿದರು.

ಗುವಾಹಟಿ ಐಐಟಿಯ ಸಹಾಯಕ ಪ್ರಾಧ್ಯಾಪಕ ಡಾ.ಮನೋಜ್.ಬಿ.ಆರ್., ಸಮ್ಮೇಳನದ ಸಂಯೋಜಕ ಮನು ವಿಜಯ್ ಹಾಜರಿದ್ದರು.

ಶಿವಾಲಿ ಪ್ರಾರ್ಥಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಬಸವರಾಜ್ ಎಲ್. ಸ್ವಾಗತಿಸಿದರು. ಜಸ್ಲೀನ್ ನಿರೂಪಿಸಿದರು. ಸಮ್ಮೇಳನದ ಪ್ರಧಾನ ಸಂಯೋಜಕ ಡಾ.ಸುನೀತ್‌ಕುಮಾರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT