ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಕುಟುಂಬ ದಿನ ಇಂದು | ಕುಟುಂಬವೆಂಬುದು ಸುಂದರ ಕನ್ನಡಿ‌...

12 ಮಂದಿ ಸದಸ್ಯರ ‘ಫಣೀಶ್‌’ ಕುಟುಂಬದ ಕಥನ
Last Updated 15 ಮೇ 2022, 4:52 IST
ಅಕ್ಷರ ಗಾತ್ರ

ಮೈಸೂರು: ನಗರೀಕರಣ, ಆಧುನಿಕತೆಯಿಂದ ಅವಿಭಕ್ತ ಕುಟುಂಬಗಳು ಒಡೆದು ಚೂರಾಗಿವೆ. ಕುಟುಂಬ ಸಾಮರಸ್ಯ, ಅವುಗಳ ಸಹಬಾಳ್ವೆಯ ಕಥನಗಳು ಈಗ ವಿರಳವಾಗಿವೆ. ಕೂಡು ಕುಟುಂಬಗಳು ಇದ್ದರೆ, ‘ಸುಸ್ಥಿರ ಅಭಿವೃದ್ಧಿ ಗುರಿ’ಗಳಲ್ಲಿ ನಾಲ್ಕನ್ನು ಈಡೇರಿಸಬಹುದು ಎಂದು ವಿಶ್ವಸಂಸ್ಥೆ ಹೇಳಿದೆ. ಅವಿಭಕ್ತ ಕುಟುಂಬಗಳ ಕಥನದ ಹುಡುಕಾಟದಲ್ಲಿ ಎದುರಾದದ್ದು ನಗರದ ಶ್ರೀರಾಮಪುರದಲ್ಲಿರುವ ಫಣೀಶ್‌ ಅವರ ಕುಟುಂಬ!

‘ಒಂದೇ ಮನೆಯಲ್ಲಿ 12 ಮಂದಿ ಒಟ್ಟಿಗೆ ಇದ್ದೇವೆ. ಇದುವರೆಗೂ ಮನಸ್ತಾಪ ಬಂದಿಲ್ಲ. ಬೇರೆ ಆಗಬೇಕೆಂಬ ಯೋಚನೆಯೂ ಸುಳಿದಿಲ್ಲ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ, ಆರೋಗ್ಯ ಹದಗೆಟ್ಟಾಗ, ಸುಖ– ದುಃಖದಲ್ಲಿ ಹೆಗಲಿಗೆ ಹೆಗಲಾಗಿದ್ದೇವೆ. ಮೂವರು ಅಣ್ಣ– ತಮ್ಮಂದಿರೂ ತಂದೆ– ತಾಯಿ ಅವರು ತೋರಿದ ಹಾದಿಯಲ್ಲಿ ನಡೆದಿದ್ದೇವೆ’ ಎಂದು ಮೈಸೂರು ಬಣ್ಣ ಮತ್ತು ಅರಗಿನ ಕಾರ್ಖಾನೆ ಅಧ್ಯಕ್ಷ ಎನ್.ವಿ.ಫಣೀಶ್‌ ತಮ್ಮ ಕುಟುಂಬದ ಕುರಿತು ‘ಪ್ರಜಾವಾಣಿ’ಯೊಂದಿಗೆ ಅನುಭವ ಹಂಚಿಕೊಂಡರು.

‘ನಾವು ಮೂಲತಃ ತಿ.ನರಸೀಪುರ ದವರು. ತಂದೆ ವೆಂಕಟೇಶ್‌, ತಾಯಿ ಪದ್ಮಾವತಿ. 90 ದಶಕದಿಂದಲೂ ಮೈಸೂರಿನ ಶ್ರೀರಾಂಪುರದಲ್ಲಿದ್ದೇವೆ. ತಂದೆ– ತಾಯಿ ಸೇರಿ 14 ಮಂದಿಯೂ ಒಟ್ಟಿಗೆ ಇದ್ದೆವು. ಒಂದೂವರೆ ವರ್ಷದ ಹಿಂದೆ ತಂದೆ– ತಾಯಿ ಇಬ್ಬರನ್ನೂ ಕಳೆದುಕೊಂಡೆವು. ಎಂದಿಗೂ ಜೊತೆಗಿರಬೇಕು ಎಂಬುದು ಪೋಷಕರ ಆಸೆಯಾಗಿತ್ತು. ಅವರು ಈಗಿಲ್ಲ. ಆದರೆ, ಅವರು ಕಲಿಸಿದ ಪಾಠಗಳು ನಮ್ಮನ್ನು ನಡೆಸುತ್ತಿವೆ’ ಎಂದರು.

‘ತಂದೆಗೆ ಅಣ್ಣ–ತಂಗಿ, ಹೆಣ್ಣು ಮಕ್ಕಳು ಯಾರೂ ಇರಲಿಲ್ಲ. ಮನೆಗೆ ಬಂದ ಸೊಸೆಯರನ್ನೇ ಮಕ್ಕಳಾಗಿ ಕಂಡರು. ಅತ್ತೆ– ಸೊಸೆ ಜಗಳ ಒಂದೂ ದಿನವೂ ಆಗಿಲ್ಲ. ಅನ್ಯೋನ್ಯವಾಗಿ ಬದುಕುವುದನ್ನು ಹೇಳಿಕೊಟ್ಟರು. ಮನೆಗೆ ಬೇಕಾದ ಅಗತ್ಯ ವಸ್ತುಗಳ ಖರೀದಿಯಿಂದ ಹಿಡಿದು ಎಲ್ಲ ಖರ್ಚುಗಳನ್ನು ಭರಿಸುತ್ತೇವೆ. ಇದುವರೆಗೂ ಜಗಳಗಳು ಆಗಿಲ್ಲ. ಸಮಾಧಾನದಿಂದ ಜವಾಬ್ದಾರಿ ನಿಭಾಯಿಸುತ್ತಿದ್ದೇವೆ’ ಎಂದು ತಿಳಿಸಿದರು.

‘ಎಲ್ಲರೂ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದೇವೆ. ಅಣ್ಣ, ಕಾಂಡಿಮೆಂಟ್ಸ್‌ ಉದ್ದಿಮೆ ನಡೆಸುತ್ತಿದ್ದಾರೆ. ತಮ್ಮ ಖಾಸಗಿ ಕಂಪ‍ನಿ ಉದ್ಯೋಗಿ, ನಾನು ರಾಜಕೀಯ ಕ್ಷೇತ್ರದಲ್ಲಿದ್ದೇನೆ. ತಲಕಾಡಿನಲ್ಲಿ ಸಮರ್ಪಣಾ ಶಾಲೆಯನ್ನು 13 ವರ್ಷದ ಹಿಂದೆ ಆರಂಭಿಸಿ ನಡೆಸುತ್ತಿದ್ದೇವೆ. ಪತ್ನಿ ಶಾಲೆ ನೋಡಿಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.

‘ಒಗ್ಗಟ್ಟಾಗಿದ್ದರೆ ಎಂಥ ಸಂದರ್ಭವನ್ನೂ ಗೆಲ್ಲಬಹುದು. ಕುಟುಂಬ ಎಂಬುದು ಸ್ವಚ್ಛ, ಸುಂದರ ಕನ್ನಡಿಯಂತೆ. ಚೂರಾಗಲು ಬಿಡಬಾರದು. ಅದರ ಸೌಂದರ್ಯ, ಪ್ರತಿಫಲನ ಗುಣಕ್ಕೆ ಚ್ಯುತಿ ಬಾರದಂತೆ ಬದುಕಬೇಕು’ ಎಂದರು.

ಫಣೀಶ್‌ ಅವರ ಸಹೋದರ ಕಾಂಡಿಮೆಂಟ್ಸ್‌ ಉದ್ಯಮವನ್ನು ನಡೆಸುತ್ತಿದ್ದರು. ಕೋವಿಡ್‌ ಸಂದರ್ಭದಲ್ಲಿ ಎದುರಾದ ನಷ್ಟವನ್ನು ಪರಸ್ಪರ ಎಲ್ಲರೂ ಭರಿಸಿದರು.

ಇಂಥ ಸಂದರ್ಭಗಳುಎದುರಾದರೆ ಎದುರಿಸುವ ಬಗೆಯನ್ನು ಅವರು ಮನೆಯ ಆರೂ ಮಕ್ಕಳಿಗೆ ಹೇಳಿಕೊಟ್ಟಿದ್ದಾರೆ ಎಂಬುದು ಇನ್ನೊಂದು ವಿಶೇಷ. ಜನ್ಮದಿನ, ಹಬ್ಬ, ಸಿನಿಮಾ, ಪ್ರವಾಸ, ಮದುವೆ ಸಮಾರಂಭಗಳಲ್ಲೂ ಕುಟುಂಬದ ಅಷ್ಟೂ ಸದಸ್ಯರು ಒಟ್ಟಿಗೇ ಪಾಲ್ಗೊಳ್ಳುತ್ತಾರೆ.

ಕುಟುಂಬದ ಮಹತ್ವ ಮರೆಯದಿರಿ..
ವಿಶ್ವಸಂಸ್ಥೆಯು 1993ರಲ್ಲಿ ಮೇ 15 ಅನ್ನು ವಿಶ್ವ ಕುಟುಂಬ ದಿನವೆಂದು ಘೋಷಿಸಿತು. ಕುಟುಂಬದ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವುದು. ಸಾಮಾಜಿಕ, ಆರ್ಥಿಕ ಬದಲಾವಣೆ ಹಾಗೂ ಆಧುನಿಕತೆಯಿಂದ ಕುಟುಂಬಗಳ ಮೇಲಾಗುವ ಪರಿಣಾಮಗಳ ಕುರಿತ ಅರಿವನ್ನು ಹೆಚ್ಚಿಸುವುದೇ ಉದ್ದೇಶ. 2015ರಲ್ಲಿ ರಚನೆಯಾದ 17 ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿಯೂ ಕುಟುಂಬಕ್ಕೆ ಮಹತ್ವ ನೀಡಲಾಗಿದೆ.

‘ಕುಟುಂಬಗಳು ಮತ್ತು ನಗರೀಕರಣ’ 2022ರ ಧ್ಯೇಯ ವಾಕ್ಯ. ನಗರಗಳಲ್ಲಿ ಕೌಟುಂಬಿಕ ಸ್ನೇಹಪರತೆಯ ನೀತಿಗಳನ್ನು ರೂಪಿಸಿ ಬಾಂಧವ್ಯವನ್ನು ಗಟ್ಟಿಗೊಳಿಸುವುದೇ ಗುರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT